Advertisement

ಕಡಿಯಾಳಿ ವಾರ್ಡ್‌: ಚರಂಡಿ ನಿರ್ವಹಣೆ ಮಾಡಿಕೊಳ್ಳದಿದ್ದರೆ ಕಾದಿದೆ ತೊಂದರೆ

01:15 AM May 29, 2020 | Sriram |

ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್‌-19 ಲಾಕ್‌ಡೌನ್‌ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಇನ್ನುಳಿದ ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯ ಹಿಂದಿದೆ.

Advertisement

ಉಡುಪಿ: ಮುಂಗಾರು ಆರಂಭಗೊಳ್ಳಲು ಇನ್ನಿರುವುದು ಕೆಲವೇ ದಿನಗಳು. ಸುದೀರ್ಘ‌ ಅವಧಿಯ ಕೋವಿಡ್‌-19 ಕಾಟದ ನಡುವೆ ಮಳೆಗಾಲವನ್ನು ಎದುರಿಸಲು ಕಡಿಯಾಳಿ ವಾರ್ಡ್‌ನಲ್ಲಿ ಏನೆಲ್ಲ ಸಿದ್ಧತೆಗಳು ನಡೆದಿವೆ ಎಂದು ಗಮನಿಸಿದರೆ, ಸಾಕಷ್ಟು ಸಮಸ್ಯೆಗಳು ಪರಿಹಾರವಾಗದೆ ಬಾಕಿ ಉಳಿದಿರುವುದು ಕಾಣುತ್ತದೆ.

ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಚರಂಡಿ ನಿರ್ವಹಣೆಗೆ ಕಾರ್ಮಿಕರ ಕೊರತೆಯಿದೆ. ನಗರಸಭೆ ಒಂದು ವಾರ್ಡ್‌ಗೆ ಓರ್ವ ಕಾರ್ಮಿಕನಂತೆ ಕಳುಹಿಸಿಕೊಡುತ್ತಿದ್ದು, ಈಗಿನ ತುರ್ತಿಗೆ ಇದು ಸಾಲದು. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳಿವೆ. ಹೀಗಾಗಿ ವಾರ್ಡ್‌ಗಳು ಚರಂಡಿ ನಿರ್ವಹಣೆ ಕೊರತೆಯಿಂದ ಸೊರಗಿವೆ. ಈ ಬಾರಿಯಂತೂ ದೀರ್ಘ‌ಕಾಲ ಲಾಕ್‌ಡೌನ್‌ ಇತ್ತು. ಕಡಿಯಾಳಿ ವಾರ್ಡ್‌ನದು ಕೂಡ ಇದೇ ಕಥೆ.

ಅಂಗಡಿ-ಹೊಟೇಲ್‌ಗ‌ಳಿಗೆ ನೀರು
ಉಡುಪಿ-ಮಣಿಪಾಲ ರಾ. ಹೆದ್ದಾರಿ ಕಾಮಗಾರಿ ಪೂರ್ಣ ಗೊಂಡಿದ್ದರೂ ರಸ್ತೆ ಬದಿ ಚರಂಡಿಗಳನ್ನು ನಿರ್ಮಿಸಿಲ್ಲ. ರಸ್ತೆ ಬದಿಯ ಇಂತಹ ಕೆಲವು ಪ್ರದೇಶಗಳು ಕಡಿಯಾಳಿ ವಾರ್ಡ್‌ ವ್ಯಾಪ್ತಿಯಲ್ಲಿ ಬರುತ್ತವೆ. 1ನೇ ಕ್ರಾಸ್‌, 2ನೇ ಕ್ರಾಸ್‌, 6ನೇ ಕ್ರಾಸ್‌ ಸಹಿತ ಹಲವೆಡೆ ಇದುವರೆಗೆ ಬಂದಿರುವ ಕೆಲವು ಮಳೆ ಸಂದರ್ಭವೇ ರಸ್ತೆ ಬದಿ ನೀರು ನಿಂತು ಸಮಸ್ಯೆಯಾಗಿದೆ. ಕಲ್ಸಂಕ, ರೋಯಲ್‌ ಗಾರ್ಡನ್‌ ಮುಂತಾದ ಕಡೆ ಮಳೆಗೆ ನೀರು ನಿಂತು ಸಮೀಪದ ಹೊಟೇಲ್‌, ಮನೆಗಳಿಗೆ ನುಗ್ಗುತ್ತದೆ. ಇನ್ನು ಮಳೆಗಾಲ ಆರಂಭವಾದರಂತೂ ಕೇಳುವುದೇ ಬೇಡ. ಈ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕು.

ಚರಂಡಿಗಳ ಹಸುರು ಹೊದಿಕೆ ತೆರವು ಆಗಬೇಕು
ವಾರ್ಡ್‌ಗಳ ಒಳರಸ್ತೆಗಳ ಪಕ್ಕದಲ್ಲೂ ಚರಂಡಿ ನಿರ್ವಹಣೆಯ ಸಮಸ್ಯೆ ಎದ್ದು ಕಾಣುತ್ತದೆ. ಬಹುತೇಕ ಚರಂಡಿಗಳಲ್ಲಿ ಕಸಕಡ್ಡಿ, ಪ್ಲಾಸ್ಟಿಕ್‌ಗಳು ತುಂಬಿವೆ. ಹಸುರು ಹುಲ್ಲು, ಪೊದೆಗಳು ಬೆಳೆದು ನೀರು ಹರಿಯುವ ಹಾದಿಗೆ ತಡೆಯಾಗಿದ್ದು, ಚರಂಡಿಯೇ ಕಾಣೆಯಾಗಿದೆ. ಹೂಳು ತುಂಬಿಕೊಂಡು ನೀರು ಹರಿಯುವುದೇ ಅಸಾಧ್ಯವಾಗಿದೆ.

Advertisement

ಎಲ್ಲ ಕಡೆ ನೀರು ಹರಿದು ಹೋಗದಿರುವ ಸಮಸ್ಯೆ ಸಗ್ರಿ ದೇವಸ್ಥಾನದಿಂದ ಗುಂಡಿಬೈಲು ನಾಗಬನ ರಸ್ತೆಯಾಗಿ ಸಾಗುವ ಮಠದಬೆಟ್ಟು ತೋಡಿನಲ್ಲಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲ. ಕಡಿಯಾಳಿ ದೇವಸ್ಥಾನ ಸಮೀಪದ ಸಾಧನ ಹೊಟೇಲ್‌ ಬಳಿ ಮಳೆ ನೀರು ರಸ್ತೆ ಮೇಲೆ ಬರುತ್ತದೆ. ಕಡಿಯಾಳಿ, ರೋಯಲ್‌ ಗಾರ್ಡನ್‌, ಕಮಲಾಬಾಯಿ ರಸ್ತೆ, ಕಮಲಾಬಾಯಿ ರಸ್ತೆಯಲ್ಲಿ ಶಾಲೆಗೆ ಹೋಗುವ ದಾರಿ ಬದಿ, ಅಂಚೆ ಕಚೇರಿ, ಗುಂಡಿಬೈಲು, ಕಾತ್ಯಾಯಿನಿ ಮಂಟಪ, ಸಗ್ರಿ ದೇವಸ್ಥಾನ, ಎಂಜಿಎಂ ಕಾಲೇಜು ಬಳಿ, ಮಹಿಳಾ ಹಾಸ್ಟೆಲ್‌ ಮುಂತಾದ ಕಡೆಗಳಲ್ಲಿ ರಸ್ತೆ ಮೇಲೆ ನೀರು ಹರಿದು ಬರುತ್ತದೆ.

ಜೋತು ಬಿದ್ದ ವಿದ್ಯುತ್‌ ತಂತಿಗಳು
ಕಡಿಯಾಳಿ ವಾರ್ಡ್‌ ಮೂಲಕ ಹಾದುಹೋದ ವಿದ್ಯುತ್‌ ತಂತಿಗಳು ಕೆಲವೆಡೆ ಜೋತು ಬಿದ್ದಿವೆ. ಇದನ್ನು ಬೇಗನೆ ಸರಿಪಡಿಸಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬೀದಿದೀಪ ನೆಪಕ್ಕಷ್ಟೆ
ವಾರ್ಡ್‌ ವ್ಯಾಪ್ತಿಯಲ್ಲಿ ಹಾದುಹೋದ ರಸ್ತೆಗಳಲ್ಲಿ ಸೂಕ್ತ ಬೀದಿ ದೀಪಗಳಿಲ್ಲ. ಮೂರ್‍ನಾಲ್ಕು ಕಂಬಗಳಿಗೆ ಒಂದರಂತೆ ದೀಪ ಅಳವಡಿಕೆಯಾಗಿದೆ. ಅವೂ ಸರಿಯಾಗಿ ಉರಿಯುತ್ತಿಲ್ಲ. ಬೇಸಗೆಯಲ್ಲಿ ಹೇಗಾದರೂ ಸುಧಾರಿಸಿಕೊಳ್ಳಬಹುದು; ಮಳೆಗಾಲದಲ್ಲಿ ಹೇಗೆ ಎನ್ನುವ ಪ್ರಶ್ನೆ ವಾರ್ಡ್‌ ನಿವಾಸಿಗಳದು.

“ಗುಂಡಿಬೈಲು ಪಾಡಿಗಾರು ಮಠದ ರಸ್ತೆಯಲ್ಲಿ ಆರು ಸತ್ತುಹೋದ ತೆಂಗಿನ ಮರಗಳಿವೆ. ಗಮನಕ್ಕೆ ತಂದರೂ ಇದುವರೆಗೆ ತೆರವುಗೊಳಿಸಿಲ್ಲ’ ಎಂದು ಮುರಳಿ ಭಟ್‌ ಹೇಳುತ್ತಾರೆ.

ಮೊಬೈಲ್‌ ನಂಬರ್‌ ಬ್ಲಾಕ್‌!
“ಮಳೆಗಾಲದಲ್ಲಿ ವಾರ್ಡ್‌ನ ಸಮಸ್ಯೆಗೆ ಪರಿಹಾರ ಕಾಣುವ ಪ್ರಯತ್ನ ನಮ್ಮದು. ಆದರೆ ನಗರಸಭೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಕೋವಿಡ್‌-19ನಿಂದ ಅವರಿನ್ನೂ ಹೊರಬಂದಿಲ್ಲ ಎನಿಸುತ್ತದೆ. ಸಮಸ್ಯೆಗಳನ್ನು ಪೌರಾಯುಕ್ತರ ಗಮನಕ್ಕೆ ತರಲು ಹಲವು ಬಾರಿ ಕರೆ ಮಾಡಿದ್ದೇನೆ. ಅವರು ಸ್ಪಂದನೆಯೇ ನೀಡುತ್ತಿಲ್ಲ. ಈಗ ನನ್ನ ಮೊಬೈಲ್‌ ನಂಬರನ್ನು ಬ್ಲಾಕ್‌ ಮಾಡಿಬಿಟ್ಟಿದ್ದಾರೆ. ಹೀಗಾಗಿ ಕರೆಯೇ ಹೋಗುತ್ತಿಲ್ಲ’ ಎಂದು ವಾರ್ಡ್‌ ಸದಸ್ಯೆ ಗೀತಾ ದೇವರಾಯ ಶೇಟ್‌ ಪೌರಾಯುಕ್ತರ ವಿರುದ್ಧ ಸಿಡಿಮಿಡಿಗೊಂಡರು.

ಶಾಸಕರು ಭರವಸೆ ನೀಡಿದ್ದಾರೆ
ನಗರಸಭೆಯಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ವಾರಕ್ಕೆ ಒಂದು ದಿನ ಓರ್ವ ಕಾರ್ಮಿಕನನ್ನು ಕಳುಹಿಸುತ್ತಿದ್ದಾರೆ. ಎರಡು ಜೆಸಿಬಿಗಳು ಕೆಟ್ಟಿದ್ದರೂ ನಗರಸಭೆ ಅಧಿಕಾರಿಗಳು ಅದನ್ನು ದುರಸ್ತಿಪಡಿಸಿ ಮಳೆಗಾಲ ಪೂರ್ವ ಕಾರ್ಯನಿರ್ವಹಣೆಗಾಗಿ ಸಿದ್ಧಪಡಿಸಿಲ್ಲ, ವಾರ್ಡ್‌ಗಳ ನಿರ್ವಹಣೆಗೆ ನೀಡಿಲ್ಲ. ಗುತ್ತಿಗೆ ಮೂಲಕ ಕಾರ್ಮಿಕರನ್ನು ನೇಮಿಸಿ ಎಂದು ನಗರಸಭೆ ಅಧಿಕಾರಿಗಳ ಜತೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಶಾಸಕರ ಗಮನಕ್ಕೆ ತಂದಿದ್ದು, ಅವರು ಸ್ಪಂದಿಸಿ ಶೀಘ್ರ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ.
-ಗೀತಾ ದೇವರಾಯ ಶೇಟ್‌,
ಕಡಿಯಾಳಿ ವಾರ್ಡ್‌ ಸದಸ್ಯರು

ಕ್ರಾಸ್‌ ಕಟ್ಟಿಂಗ್‌ ಆಗಿಲ್ಲ
ಮಳೆಗಾಲಕ್ಕೆ ಪೂರ್ವದಲ್ಲಿ ವಾರ್ಡ್‌ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕ್ರಾಸ್‌ ಕಟ್ಟಿಂಗ್‌ ಆಗಿಲ್ಲ. ಬೀದಿದೀಪ ಇದ್ದರೂ ಕೆಲವು ಕಡೆ ಉರಿಯುತ್ತಿಲ್ಲ. ರಸ್ತೆ ಬದಿ ಸೂಕ್ತ ಚರಂಡಿಯಿಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತದೆ.
-ಸತೀಶ್‌ ಕುಲಾಲ್‌,
ಕಮಲಾಬಾಯಿ ಪ್ರೌಢಶಾಲೆ ಸಮೀಪದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next