Advertisement

ತಗ್ಗಿದ ಮಳೆ; ನದಿಗಳ ಒಡಲು ಬರಿದು

12:23 PM Jun 28, 2022 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಕೊರತೆ ಕಾಣಿಸಿಕೊಂಡಿರುವುದು ಬೆಳಗಾವಿ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ಚಿಂತೆ ಉಂಟು ಮಾಡಿದೆ.

Advertisement

ಸಾಮಾನ್ಯವಾಗಿ ಈ ವೇಳೆಗೆ ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯ ನದಿಗಳಲ್ಲಿ ನೀರಿನ ಒಳಹರಿವು ಆರಂಭವಾಗಬೇಕಿತ್ತು. ಆದರೆ ಇದುವರೆಗೆ ನದಿಗಳ ಒಡಲಿಗೆ ಹೊಸ ನೀರು ಹರಿದು ಬರುತ್ತಿಲ್ಲ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ನದಿಗಳಲ್ಲಿ ನೀರು ಕಾಣಿಸಿಕೊಂಡಿಲ್ಲ. ಜಲಾಶಯಗಳಿಗೆ ಒಳಹರಿವು ಆರಂಭವಾಗದೇ ಇರುವುದು ಸ್ವಲ್ಪಮಟ್ಟಿಗೆ ಆತಂಕ ತಂದಿಟ್ಟಿದೆ.

ಜಲಾಶಯಕ್ಕೆ ಬರುವ ನೀರಿಗೆ ಇನ್ನೂ ಸಮಯಾವಕಾಶ ಇದೆ ಎಂಬ ವಿಶ್ವಾಸದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುವ ಮಳೆಯ ಮೇಲೆ ಗಮನವಿಟ್ಟಿದ್ದಾರೆ. ಮಹಾರಾಷ್ಟ್ರದ ಆಂಬೋಲಿ, ಸಾವಂತವಾಡಿ ಅರಣ್ಯ ಪ್ರದೇಶ ಹಾಗೂ ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಮಳೆ ಹಿಡಿದರೆ ನಮ್ಮ ಆತಂಕ ದೂರವಾಗುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹಿಡಕಲ್‌ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕಡಿಮೆಯಾಗಿದೆ. ಹಾಗೆಂದು ಸದ್ಯಕ್ಕೆ ಈ ಎರಡೂ ಜಲಾಶಯಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ ನೀರಾವರಿಗೆ ಸಹಜವಾಗಿಯೇ ಈ ಜಲಾಶಯಗಳ ನೀರು ಸಂಗ್ರಹ ಒಂದಿಷ್ಟು ಚಿಂತೆ ಮಾಡುವಂತಾಗಿದೆ.

ಹಿಡಕಲ್‌ನಲ್ಲಿ 12 ಟಿಎಂಸಿ ಕಡಿಮೆ: ಮುಖ್ಯವಾಗಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಮುಖ್ಯ ಆಧಾರವಾಗಿರುವ ಹಿಡಕಲ್‌ ಜಲಾಶಯದಲ್ಲಿ ನೀರಿನ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ 12 ಟಿಎಂಸಿ ಅಡಿ ನೀರು ಕಡಿಮೆ ಇರುವುದು ಆತಂಕ ಹುಟ್ಟಿಸಿದೆ.

Advertisement

ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2095.66 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 2132 ಅಡಿ ನೀರು ಸಂಗ್ರಹವಿತ್ತು. ಅಂದರೆ ಸುಮಾರು 33 ಅಡಿಗಳಷ್ಟು ನೀರು ಕಡಿಮೆ ಸಂಗ್ರಹವಾಗಿದೆ. ಹೋದ ವರ್ಷ ಈ ವೇಳೆಗೆ ಜಲಾಶಯಕ್ಕೆ ಐದು ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿತ್ತು. ಆದರೆ ಈ ವರ್ಷ ಇನ್ನೂ ಒಳಹರಿವು ಆರಂಭವಾಗಿಲ್ಲ.

ಮಲಪ್ರಭಾ ಜಲಾಶಯದಲ್ಲೂ ಇದೇ ಸ್ಥಿತಿ ಇದೆ. ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಿಗೆ ಆಧಾರವಾಗಿರುವ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ 7ರಿಂದ 8 ಟಿಎಂಸಿ ಅಡಿ ನೀರು ಕಡಿಮೆ ಇದೆ. ಒಟ್ಟು 37.731 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಇರುವುದು 11.657 ಟಿಎಂಸಿ ಅಡಿ ನೀರು. ಕಳೆದ ವರ್ಷ ಇದೇ ಅವಧಿಯಲ್ಲಿ 18.571 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈಗ ಇರುವ ನೀರನ್ನು ಕುಡಿಯಲು ಮಾತ್ರ ಬಳಸಬೇಕಿದ್ದು ಸದ್ಯ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಜಲಾಶಯದ ಅಧಿಕಾರಿಗಳ ಹೇಳಿಕೆ.

ಬೆಳಗಾವಿಗೆ ಇನ್ನು15 ದಿನ ಮಾತ್ರ ನೀರು!

ಎಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಆತಂಕ ಆರಂಭವಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ಅದು ನೆಲದಲ್ಲೇ ಇಂಗಿ ಹೋಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಈಗ ಇರುವ ನೀರನ್ನು 15 ದಿನಗಳ ಕಾಲ ಮಾತ್ರ ಪೂರೈಸಬಹುದು ಎನ್ನುತ್ತಾರೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ವ್ಯವಸ್ಥಾಪಕ ಸಂತೋಷ ಕಾವಿ. ಒಟ್ಟು 2476.50 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2452.90 ಅಡಿಗಳಷ್ಟು ನೀರು ಸಂಗ್ರಹವಿದ್ದು ಮುಂದಿನ 15 ದಿನಗಳಿಗೆ ಮಾತ್ರ ಸಾಕಾಗುತ್ತದೆ. ನಂತರ ಡೆಡ್‌ ಸ್ಟೋರೇಜ್‌ನಲ್ಲಿ ಉಳಿಯುವ ನೀರನ್ನು ಐದು ದಿನಗಳವರೆಗೆ ಮಾತ್ರ ಪೂರೈಕೆ ಮಾಡಬಹುದು. ಇದೇ ಕಾರಣದಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ನಮ್ಮ ನಿರೀಕ್ಷೆಗೆ ತಕ್ಕಂತೆ ಮಳೆಯಾಗಿಲ್ಲ. ಆದರೆ ಇನ್ನೂ ಸಮಯ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಹಿಡಕಲ್‌ ಜಲಾಶಯದಲ್ಲಿ 12 ಟಿಎಂಸಿ ಅಡಿ ನೀರು ಕಡಿಮೆ ಇದೆ. ಕುಡಿಯುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಕನಿಷ್ಟ 25 ಟಿಎಂಸಿ ಅಡಿಯಷ್ಟು ನೀರಿದ್ದರೆ ನೀರಾವರಿ ಸಮಸ್ಯೆ ನಿಭಾಯಿಸಬಹುದು. ಮಹಾರಾಷ್ಟ್ರದ ಅಂಬೋಲಿ ಮತ್ತು ಚಂದಗಡ ಅರಣ್ಯ ಪ್ರದೇಶದಲ್ಲಿ ಧಾರಾಕಾರ ಮಳೆಯಾದರೆ ಜಲಾಶಯಕ್ಕೆ ನೀರು ಬರುತ್ತದೆ. ಇದರಿಂದ ಅತಂಕ ದೂರವಾಗುತ್ತದೆ. – ಎಸ್‌.ಎಂ.ಮಾಡಿವಾಲೆ, ಎಇಇ, ಕರ್ನಾಟಕ ನೀರಾವರಿ ನಿಗಮ

ಮಲಪ್ರಭಾ ಜಲಾಶಯದಲ್ಲಿ ಈಗ ಇರುವ ನೀರಿನಿಂದ ಕುಡಿಯುವುದಕ್ಕೆ ಯಾವುದೇ ತೊಂದರೆ ಇಲ್ಲ. ಜಲಾಶಯದಿಂದ ಹಿಂಗಾರಿಗೆ ನೀರು ಬಿಡಬೇಕಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸದ್ಯ 7ರಿಂದ 8 ಟಿಎಂಸಿ ಅಡಿ ನೀರು ಕಡಿಮೆ ಸಂಗ್ರಹವಿದೆ. ಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ವಿಶ್ವಾಸವಿದೆ. ∙ ಮುದಿಗೌಡರ, ಎಇಇ, ಕರ್ನಾಟಕ ನೀರಾವರಿ ನಿಗಮ

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next