Advertisement

ತಗ್ಗಿದ ಕೃಷ್ಣೆ ಹರಿವು; ಸದ್ಯಕ್ಕಿಲ್ಲ ಪ್ರವಾಹ ಭೀತಿ

05:11 PM Jul 21, 2022 | Team Udayavani |

ಬಾಗಲಕೋಟೆ: ಕಳೆದೊಂದು ವಾರದಿಂದ ತೀವ್ರ ಆತಂಕ ಸೃಷ್ಟಿಸಿದ್ದ ಪ್ರವಾಹ ಭೀತಿ ಸದ್ಯಕ್ಕೆ ದೂರಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜಿಲ್ಲೆಯ ಮೂರು ಪ್ರಮುಖ ನದಿಗಳಿಗೆ ಹರಿದು ಬರುತ್ತಿದ್ದ ನೀರಿನ ಹರಿವೂ ಇಳಕೆಯಾಗಿದೆ. ಹೀಗಾಗಿ ನದಿ ಪಾತ್ರದ ಜನರು ಕೊಂಚ ನಿರಾಳವಾಗಿದ್ದಾರೆ.

Advertisement

ಕಳೆದ ವಾರ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್‌ ಗಿಂತ ಹೆಚ್ಚಿನ ನೀರು ಹರಿದು ಬರುತ್ತಿತ್ತು. ಜತೆಗೆ ಮಹಾರಾಷ್ಟ್ರದಲ್ಲೂ ಎಡೆಬಿಡದೇ ಮಳೆ ಸುರಿಯುತ್ತಿತ್ತು. ಹೀಗಾಗಿ ಕೃಷ್ಣಾ ನದಿ ಪಾತ್ರದ ರಬಕವಿ-ಬನಹಟ್ಟಿ, ಜಮಖಂಡಿ, ತೇರದಾಳ ಭಾಗದ ಕೆಲ ಹಳ್ಳಿಗಳು, ಬೀಳಗಿ, ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ಹಲವು ಹಳ್ಳಿಗಳಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿತ್ತು.

ಅಲ್ಲದೇ ನದಿ ಪಾತ್ರದ ಹಳ್ಳಿಗಳ ಜನರು, ನದಿ ದಡಕ್ಕೆ ಹೋಗದಂತೆ, ಯಾವುದೇ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗಬಹುದು ಎಂಬ ಎಚ್ಚರಿಕೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನೀಡಿದ್ದರು. ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಪೂರ್ವ ಸಭೆ ನಡೆಸಿ, ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದ್ದರು. ಈ ನಿಟ್ಟಿನಲ್ಲಿ ಪ್ರವಾಹ ಎದುರಿಸಲು ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು.

ನೀರಲ್ಲೇ ಧ್ವಜಾರೋಹಣ: ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಭಾರೀ ಪ್ರವಾಹ ಎದುರಾಗಿತ್ತು. ಜಿಲ್ಲೆಯ ಸುಮಾರು 298ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸಿದ್ದವು. ಆಗ ಆ.15ರಂದು ಮೊಳಕಾಲು ಉದ್ದದ ನೀರಿನಲ್ಲಿಯೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆದಿತ್ತು. ಅಲ್ಲದೇ ಬಾದಾಮಿ ತಾಲೂಕಿನ ಬೀರನೂರ, ತಳಕವಾಡದಂತಹ ಗ್ರಾಮಗಳೊಳಗೆ ಮಲಪ್ರಭಾ ನದಿ ನೀರು ನುಗ್ಗಿ ಹಲವು ರೀತಿಯ ಎಡವಟ್ಟು ಮಾಡಿತ್ತು. ಇಂದಿಗೂ ಆ ಹಳ್ಳಿಗಳ ಜನರು, ಪ್ರವಾಹ ಎಂದರೆ ಭಯಪಡುವ ಪರಿಸ್ಥಿತಿಯಲ್ಲಿದ್ದಾರೆ.

ಸದ್ಯ ಆತಂಕ ದೂರ: ಬುಧವಾರ ಸಂಜೆ ಕೃಷ್ಣಾ ನದಿಗೆ 1,11,944 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 75 ಸಾವಿರ ಕ್ಯೂಸೆಕ್‌ ನೀರನ್ನು ಆಲಮಟ್ಟಿ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಒಟ್ಟು 519.60 ಮೀಟರ್‌ ಎತ್ತರದ, 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಬುಧವಾರ ಸಂಜೆ ಹೊತ್ತಿಗೆ 517.62 ಮೀಟರ್‌ (92.460 ಟಿಎಂಸಿ ಅಡಿ) ನೀರು ಸಂಗ್ರಹವಾಗಿತ್ತು. ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್‌ವರೆಗೂ ನೀರು ಹರಿದು ಬಂದರೆ ಪ್ರವಾಹ ಪರಿಸ್ಥಿತಿ ಎದುರಾಗುವುದಿಲ್ಲ. ಆದರೆ, ಅದು 3 ಲಕ್ಷ ಕ್ಯೂಸೆಕ್‌ ದಾಟಿದರೆ ಜಮಖಂಡಿ, ರಬಕವಿ-ಬನಹಟ್ಟಿ ಭಾಗದ ಕೆಲವೇ ಕೆಲವು ಹಳ್ಳಿಗಳ ಸುತ್ತ ನೀರು ಆವರಿಸಿಕೊಳ್ಳುತ್ತದೆ. ಇನ್ನು ಮಲಪ್ರಭಾ ನದಿಗೆ 20 ಸಾವಿರ ಕ್ಯೂಸೆಕ್‌ ನೀರು ಹರಿದು ಬಂದರೆ ಕೆಲ ಗ್ರಾಮಗಳಿಗೆ ನೀರು ನುಗ್ಗಲಿದೆ.

Advertisement

ಇನ್ನು ಘಟಪ್ರಭಾ ನದಿ, ಇಳಿಜಾರಿನಂತಿದ್ದು, ನೀರು ಹರಿವು ಅತ್ಯಂತ ವೇಗವಾಗಿರುತ್ತದೆ. ಇಲ್ಲಿನ 35 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬಂದರೆ ಮುಧೋಳ, ಕಲಾದಗಿ, ಮಹಾಲಿಂಗಪುರ ಭಾಗದ ಕೆಲವು ಹಳ್ಳಿಗಳಿಗೆ ಪ್ರವಾಹದ ಪರಿಸ್ಥಿತಿ ಉಂಟಾಗಲಿದೆ. ನಂದಗಾವ ಗ್ರಾಮಕ್ಕೆ ಮಾತ್ರ ಸಂಪರ್ಕ ಕಡಿತಗೊಳ್ಳುತ್ತದೆ.

ಜಿಲ್ಲೆಯ ಮೂರು ಪ್ರಮುಖ ನದಿಗಳಾದ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭಾ ಪಾತ್ರದಲ್ಲಿ ಸದ್ಯ ಪ್ರವಾಹದ ಆತಂಕ ದೂರವಾಗಿದೆ. ಮೂರು ನದಿಗಳ ನೀರಿನ ಹರಿವಿನಲ್ಲಿ ಇಳಿಮುಖವಾಗಿದ್ದು, ಜಿಲ್ಲೆಯಲ್ಲಿ ಎರಡು ದಿನಗಳಿಂದ ಮೋಡದ ಬದಲು, ಬಿಸಿಲಿನ ವಾತಾವರಣ ಕಾಣುತ್ತಿದೆ. ಇದರಿಂದ ಹೆಸರು ಸಹಿತ ವಿವಿಧ ಬೆಳೆಗೆ ಅನುಕೂಲ ಕೂಡ ಆಗಿದೆ.

ಬಾಗಲಕೋಟೆ: ಕೃಷ್ಣೆಗೆ ರಭಸವಾಗಿ ನೀರು ಹರಿದು ಬರುತ್ತಿದ್ದು, ನದಿ ಪಕ್ಕದ ಭೂಮಿ ಕೊರೆದಿರುವುದು.

-ವಿಶೇಷ ವರದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next