Advertisement

ತಗ್ಗಿದ ಡಿವೈಡರ್‌ ಎತ್ತರ: ಅಪಘಾತ ಹೆಚ್ಚಳ

12:07 PM Dec 01, 2022 | Team Udayavani |

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಿಂದ ಕೂಳೂರು ಕೊಟ್ಟಾರವರೆಗೆ ಹೆದ್ದಾರಿ ಇಲಾಖೆಯ ಹಾಕುವ ಅವೈಜ್ಞಾನಿಕ ಡಾಮರು ಕಾಮಗಾರಿಯಿಂದ ಡಿವೈಡರ್‌ಗಳ ಎತ್ತರ ಕಡಿಮೆಯಾಗಿ ವಾಹನಗಳು ಡಿವೈಡರ್‌ ಹಾರಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.

Advertisement

6 ತಿಂಗಳುಗಳ ಅವಧಿಯಲ್ಲಿ ತಡಂಬೈಲ್‌ನಿಂದ ಕೋಡಿಕಲ್‌ ವರೆಗೆ 7 ವಾಹನಗಳು ಡಿವೈಡರ್‌ ಹಾರಿ ಅಪಘಾತ ಸಂಭವಿಸಿದೆ. ಇದರಲ್ಲಿ ಎರಡು ಮಾತ್ರ ಟ್ರಾಫಿಕ್‌ ವಿಭಾಗದಲ್ಲಿ ದೂರು ದಾಖಲಾಗಿದೆ. ಉಳಿದಂತೆ ನಾಲ್ಕು ಕಾರುಗಳಿಗೆ ಸಣ್ಣ ಪುಟ್ಟ ಹಾನಿಯಾದ ಕಾರಣ ಕೇಸು ದಾಖಲಿಸದೆ ಪ್ರಯಾಣ ಮುಂದುವರಿಸಿದ್ದಾರೆ. ಓವರ್‌ಟೇಕ್‌ ಮಾಡುವ ಸಂದರ್ಭ ಇಂತಹ ಪ್ರಮಾದಗಳು ನಡೆಯುತ್ತಿವೆ. ರಸ್ತೆ ಡಾಮರು ಹಾಕುವ ಮಾಡಿದ ಎಡವಟ್ಟಿನಿಂದ ಡಿವೈಡರ್‌ಗಳ ಎತ್ತರ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಹೋಗುತ್ತಿದ್ದು, ಕೆಲವೆಡೆ ಕಾಣದಂತಾಗಿದೆ. ಕೇವಲ ಹಳದಿ ಪೈಂಟ್‌ ಮಾತ್ರ ಕಾಣಿಸುತ್ತಿದೆ! ಇರ್ಕಾನ್‌ ನಿರ್ಮಾಣದ ಸುರತ್ಕಲ್‌ ಕೊಟ್ಟಾರವರೆಗಿನ ರಸ್ತೆ ನಿರ್ವಹಣೆ ಗಮನಿಸಿದರೆ ಡಿವೈಡರ್‌ಗಳ ಅಯೋಮಯ ಸ್ಥಿತಿ ಕಂಡು ಬರುತ್ತಿದೆ.

ಡಿವೈಡರ್‌ ಕನಿಷ್ಠ 1 ಅಡಿ ಎತ್ತರಬೇಕು

ಪ್ರತೀಯೊಂದು ಕಡೆ ಡಿವೈಡರ್‌ ಕನಿಷ್ಠ ಒಂದು ಅಡಿ ಅಂದರೆ 12 ಇಂಚಿನಿಂದ 15 ಇಂಚಿನವೆರೆಗೆ ಎತ್ತರವಿರಬೇಕು. ಹೊಸ ರಸ್ತೆ ಮಾಡುವ ಸಂದರ್ಭ ಈ ಡಿವೈಡರ್‌ ಕಾನೂನಾತ್ಮಕವಾಗಿಯೇ ಇದ್ದರೂ ಬಳಿಕ ನಿರ್ವಹಣೆ ಸಂದರ್ಭ ಮಾಯವಾಗುತ್ತಿದೆ. ಪ್ರತೀ ಬಾರಿಯೂ ಡಾಮರು ಹಾಕುವ ಮೊದಲು ಹಿಂದೆ ಹಾಕಿದ ಡಾಮರು ತೆಗೆದು ಹೊಸ ಡಾಮರು ಅಳವಡಿಸಬೇಕು. ಆದರೆ ಈ ಬಗ್ಗೆ ಹೆದ್ದಾರಿ ಇಲಾಖೆಯೂ ನಿರ್ಲಕ್ಷ್ಯ ವಹಿಸಿದ ಕಾರಣ ಗುತ್ತಿಗೆ ಪಡೆದ ಮಂದಿ ಹಳೆಯ ಡಾಮರಿನ ಮೇಲೆಯೇ ಮತ್ತೆ ಮತ್ತೆ ಹಾಕುವುದರಿಂದ ಡಿವೈಡರ್‌ ಎತ್ತರ ಕಡಿಮೆಯಾಗುತ್ತಲೇ ಹೋಗುತ್ತಿದೆ. ಡಾಮರು ಹಾಕಿದರೂ ಡಿವೈಡರ್‌ಗಳನ್ನು ಮತ್ತೆ ಎತ್ತರಿಸಲಾಗುವುದಿಲ್ಲ.

ಪಣಂಬೂರು, ಬೈಕಂಪಾಡಿ, ಪೋರ್ತ್‌ ಮೈಲ್‌ ಭಾಗದಲ್ಲಿ ಡಿವೈಡರ್‌ 10 ಇಂಚುಗಳಷ್ಟು ಡಾಮರು ರಸ್ತೆಯ ಒಳಗೆ ಸೇರಿದೆ. ಇದರಿಂದಾಗಿ ಡಿವೈಡರ್‌ಗಳು ರಾತ್ರಿ ವೇಳೆ ಸರಿಯಾಗಿ ಕಾಣದ ಕಾರಣ ವಾಹನಗಳು ಡಿವೈಡರ್‌ ಹತ್ತಿ ಅಪಘಾತವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಮರ್ಪಕ ಡಾಮರು ಹಾಕುವ ಕಾರ್ಯಕ್ಕೆ ಒತ್ತು ನೀಡಬೇಕಿದೆ.

Advertisement

ಸುರಕ್ಷಿತ ಸಂಚಾರಕ್ಕೆ ಆದ್ಯತೆ: ಹೆದ್ದಾರಿ ನಿರ್ವಹಣೆ ಹಾಗೂ ಮರು ಡಾಮರು ಅಳವಡಿಸುವ ವೇಳೆ ಅನುಸರಿಸುಬೇಕಾದ ನೀತಿ ನಿಯಮಾವಳಿ ಬಗ್ಗೆ ಸ್ಥಳೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ. ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕು. ಗುತ್ತಿಗೆದಾರರ ತಪ್ಪಾಗಿದ್ದಲ್ಲಿ ಅದಕ್ಕೆ ಬೇಕಾದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. – ಡಾ| ಭರತ್‌ ಶೆಟ್ಟಿ ವೈ., ಶಾಸಕರು

-ಲಕ್ಷ್ಮೀ ನಾರಾಯಣ ರಾವ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next