Advertisement

ತೆಂಗಿನ ಫಸಲು ಕಡಿಮೆ; ಬೆಲೆ ಏರಿಕೆ

01:10 AM Dec 13, 2020 | mahesh |

ಮಂಗಳೂರು/ಉಡುಪಿ: ಮಾರುಕಟ್ಟೆಯಲ್ಲಿ ಸ್ಥಳೀಯ ತೆಂಗಿನ ಕಾಯಿಯ ಕೊರತೆ ಕಂಡುಬಂದಿದ್ದು, ಎರಡು ವಾರಗಳಿಂದೀಚೆಗೆ ತೆಂಗಿನ ಕಾಯಿ ಬೆಲೆ ಏರಿಕೆಯಾಗಿದೆ. ಆದರೆ ಬಯಲು ಸೀಮೆ ಭಾಗದಿಂದ ಆವಕವಾಗುವ ತೆಂಗಿನ ಕಾಯಿಗೆ ಕೊರತೆ ಇಲ್ಲ. ಸ್ಥಳೀಯ ತೆಂಗಿನ ಕಾಯಿಯ ಫಸಲು ಈ ವರ್ಷ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಸ್ಥರು ಉದಯವಾಣಿಗೆ ತಿಳಿಸಿದ್ದಾರೆ.

Advertisement

2 ವಾರಗಳ ಹಿಂದೆ ಸ್ಥಳೀಯ ತೆಂಗಿನ ಕಾಯಿಯನ್ನು ಬೆಳೆಗಾರರಿಂದ ಕೆ.ಜಿ. ಗೆ 40 ರೂ.ಗಳಿಗೆ ಖರಿದಿಸಿ 45 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈಗ 45 ರೂ.ಗೆ ಖರೀದಿಸಿ 48-50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬಯಲು ಸೀಮೆಯ ತೆಂಗಿನ ಕಾಯಿಯ ಖರೀದಿ ಬೆಲೆ 43 ರೂ. ಹಾಗೂ ಮಾರಾಟ ಬೆಲೆ 45 ರೂ. ಇದೆ.

ಉಡುಪಿ ಜಿಲ್ಲೆಯಲ್ಲಿ ಒಂದು ಕೆಜಿ ತೆಂಗಿನ ಕಾಯಿ ಬೆಲೆ 42 ರೂ., ಒಂದು ದೊಡ್ಡ ತೆಂಗಿನ ಕಾಯಿ ಬೆಲೆ 32 ರೂ. ಇದೆ. ಬೇರೆ ಜಿಲ್ಲೆಗಳಲ್ಲೂ ಬೇಡಿಕೆ ಇರುವುದರಿಂದ ಉಡುಪಿ ಜಿಲ್ಲೆಗೆ ಬರುತ್ತಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಒಂದು ಕೆ.ಜಿ. ಬೆಲೆ 37 ರೂ. ಇತ್ತು.

ಹಳ್ಳಿಗಳಲ್ಲೇ ಸಿಗುತ್ತಿಲ್ಲ!
ಬಜಪೆ: ಫಸಲು ಕಡಿಮೆಯಾಗಿರುವ ಕಾರಣ ತೆಂಗು ಹೆಚ್ಚಾಗಿ ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲೂ ಈಗ ತೆಂಗಿನಕಾಯಿಗೆ ಬರ. ಅಂಗಡಿಗಳಲ್ಲಿ ಮಾತ್ರವಲ್ಲ ತೋಟದ ಮಾಲಕರನ್ನೇ ಕೇಳಿದರೂ ಇಲ್ಲ ಎನ್ನುತ್ತಿದ್ದಾರೆ. ಮಾಲಕರು ತಿಂಗಳ ಹಿಂದಷ್ಟೆ ಕೆ.ಜಿ.ಗೆ 30 ರೂ.ಗಳಂತೆ ಮಾರಾಟ ಮಾಡಿದ್ದಾರೆ.

ಸೀಯಾಳಕ್ಕೆ ಬೆಲೆ ಹೆಚ್ಚು
ಲಾಭ ಅಧಿಕ ಎಂದು ಕೆಲವು ಕೃಷಿಕರು ಕಾಯಿ ಬಲಿಯುವ ತನಕ ಕಾಯದೆ ಸೀಯಾಳವನ್ನೇ ಮಾರು ತ್ತಿದ್ದಾರೆ. ಅಲ್ಲದೆ ಖರೀದಿಸುವವರು ತೋಟಕ್ಕೇ ಬಂದು ಕೊಂಡೊಯ್ಯುತ್ತಾರೆ. ಕೊರೊನಾ ಬಳಿಕ ತೆಂಗಿನ ಕಾಯಿ/ಎಣ್ಣೆಯ ಬಳಕೆ ಹೆಚ್ಚಾಗಿದೆ. ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಿರುವುದರಿಂದ ತೆಂಗಿನ ಕಾಯಿ ಬಗ್ಗೆ ಹೆಚ್ಚು ಆಸಕ್ತರಾಗಿರುವುದು ಕೊರತೆಗೆ ಕಾರಣ ಎಂದು ಕೃಷಿಕ ಪಡುಪೆರಾರ ಸಾಂತ್ರಬೈಲು ರಾಮಚಂದ್ರ ಕಾವ ಹೇಳುತ್ತಾರೆ.

Advertisement

ಹೊಟೇಲ್‌ಗೆ ಮೊರೆ!
ತೆಂಗಿನ ಕಾಯಿ ಸಿಗದೇ ಹಲವು ಮನೆಗಳಲ್ಲಿ ಗೃಹಿಣಿಯರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಎಷ್ಟೋ ಮನೆಗಳಲ್ಲಿ ತಿಳಿಸಾರಿನಲ್ಲೇ ತೃಪ್ತರಾಗುತ್ತಿದ್ದಾರೆ. ಇನ್ನು ಈ ಕಷ್ಟವೇ ಬೇಡ, ಸಮಯದ ಜತೆಗೆ ಅಡುಗೆ ಅನಿಲವೂ ಉಳಿತಾಯ ಆಗುತ್ತದೆ ಎಂದು ಕೆಲವರು ಹೊಟೇಲ್‌ಗ‌ಳಿಂದ ಪದಾರ್ಥವನ್ನು ಪಾರ್ಸೆಲ್‌ ತರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next