ಪಣಜಿ: ಗೋವಾ ಜನತೆಯ ಆಹಾರದ ಪ್ರಮುಖ ಘಟಕವಾಗಿರುವ ಮೀನುಗಳ ಆವಕ ಕಡಿಮೆಯಾಗುತ್ತಿದ್ದು ಗಣನೀಯ ಪ್ರಮಾಣದಲ್ಲಿ ದರ ಏರಿಕೆಯಾಗುತ್ತಿರುವುದು ಗೋವಾದ ಜನತೆ ಚಿಂತೆಗೀಡಾಗುವಂತಾಗಿದೆ.
ಹಲವು ದಿನಗಳಿಂದ ಸಮುದ್ರ ಮಟ್ಟದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರರಿಗೆ ಮೀನುಗಳ ಲಭ್ಯತೆ ಕುಂಠಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಮೀನುಗಳ ಆವಕ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಮೀನುಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಕಳೆದ ವಾರದಲ್ಲಿ ಯಾವ ಮೀನು 100 ರೂ.ಗೆ ಲಭಿಸುತ್ತಿತ್ತೋ ಅದು ಇಂದು 200 ರೂ. ಗಳಿಗೆ ಏರಿಕೆಯಾಗಿದೆ. ಗೋವಾದ ಹೋಟೆಲ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದ ಸುರಮಯಿ ಎಂಬ ಮೀನಿನ ದರ 600 ರೂ.ಗಳಿಂದ 1000 ರೂ.ಗಳಿಗೆ ಏರಿಕೆಯಾಗಿದೆ. ಮೀನು ಗೋವಾ ಜನರ ಆಹಾರದ ಪ್ರಮುಖ ಘಟಕವಾಗಿದೆ. ಸಮುದ್ರ ಮಟ್ಟದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಆಳಸಮುದ್ರಕ್ಕೆ ತೆರಳದ ಮೀನುಗಾರರು ಸಾಕಷ್ಟು ಮೀನುಗಳು ಲಭಿಸದೆಯೇ ಹಿಂದಿರುಗುವಂತಾಗಿದೆ. ಇದರಿಂದಾಗಿ ಮೀನುಗಾರರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಮೀನುಗಾರಿಕಾ ಬೋಟ್ ಗಳು ಮೀನುಗಾರಿಕೆಗೆ ತೆರಳದೆಯೇ ದಡಕ್ಕೆ ಬಂದು ನಿಂತಿವೆ.
ಗೋವಾ ಮಾರುಕಟ್ಟೆಯಲ್ಲಿ ಮೀನುಗಳ ಆವಕ ಕಡಿಮೆಯಾಗಿರುವುದರಿಂದ ಮೀನುಗಳ ದರದಲ್ಲಿ ಭಾರಿ ಏರಿಕೆಯಾಗುವಂತಾಗಿದೆ. ಕಳೆದ ವಾರ 200 ರೂ.ಗೆ ಲಭಿಸುತ್ತಿದ್ದ ಬೊಂಬಿಲ್ ಮೀನು ಪ್ರಸಕ್ತ ವಾರ 300 ರೂ.ಗಳಿಗೆ ತಲುಪಿದೆ. ತಾರ್ಲೆ ಮೀನು 100 ರೂ. ಗಳಿಂದ 200 ರೂ.ಗಳಿಗೆ ತಲುಪಿದೆ. ಸುರಮಯಿ ಮೀನು 600 ರೂ. ಗಳಿಂದ 1000 ರೂ.ಗಳಿಗೆ ತಲುಪಿದೆ. ಖೇಕಡೆ ಮೀನು 250 ರೂ.ಗಳಿಂದ 400 ರೂ.ಗಳಿಗೆ ತಲುಪಿದೆ.
ಸಮುದ್ರ ಮಟ್ಟದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಮೀನುಗಳ ಲಭ್ಯತೆಯಲ್ಲಿ ಇಳಿಮುಖವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಮುದ್ರ ಮಟ್ಟದಲ್ಲಿ ಭಾರಿ ಗಾಳಿ ಬೀಸುತ್ತಿತ್ತು. ಇದರಿಂದಾಗಿ ಬಹುತೇಕ ಮೀನುಗಾರಿಕಾ ಬೋಟ್‌ಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿಲ್ಲ. ಮೀನುಗಳ ಆವಕ ಕಡಿಮೆಯಾಗುತ್ತಿರುವುದರಿಂದ ದರ ದುಪ್ಪಟ್ಟು ಹೆಚ್ಚಳವಾಗುವಂತಾಗಿದೆ.
ಫ್ರಾನ್ಸಿಸ್ ಫರ್ನಾಂಡೀಸ್,
ಅಧ್ಯಕ್ಷ, ಮಾಂಡವಿ ಫಿಶರಿಸ್ ಸೊಸೈಟಿ