Advertisement

Karnataka: ಪುನರ್‌ವಿಂಗಡಣೆ: ಆಕ್ಷೇಪಣೆಗಳಿಗೆ “ಅದಾಲತ್‌”

12:13 AM Sep 28, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದಲೂ ಅಧಿಕ ಕಾಲದಿಂದ ನನೆಗುದಿಗೆ ಬಿದ್ದಿರುವ ಜಿ.ಪಂ., ತಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸರಕಾರದ ಪ್ರಯತ್ನಗಳಿಗೆ ಒಂದಿಷ್ಟು ವೇಗ ಸಿಕ್ಕಿದ್ದು, ತಾ.ಪಂ., ಜಿ.ಪಂ. ಕ್ಷೇತ್ರ ಮರುವಿಂಗಡಣೆ ಕುರಿತ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಲು ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗ ಅದಾಲತ್‌ಗಳನ್ನು ನಡೆಸುತ್ತಿದೆ.

Advertisement

ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿಗಳನ್ನು ಗುರುತಿಸಿ ಸೀಮಾ ನಿರ್ಣಯ ಆಯೋಗ ಸಿದ್ಧಪಡಿಸಿದ್ದ ಕರಡನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಸೆ. 5ರಂದು ಅಧಿಸೂಚನೆ ಹೊರಡಿಸಿತ್ತು. ಅದಕ್ಕೆ ಸಾರ್ವಜನಿಕರಿಂದ ಸೆ. 19ರ ವವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ, ರಾಜ್ಯದ ಎಲ್ಲ ಜಿಲ್ಲೆಗಳಿಂದ 413 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಆಲಿಸಲು ಆಯೋಗ ಸೆ. 25ರಿಂದ ಅ. 5ರ ವರೆಗೆ ಅದಾಲತ್‌ಗಳನ್ನು ಹಮ್ಮಿಕೊಂಡಿದೆ.

ಮೊದಲ ದಿನ ಉಡುಪಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಗದಗ ಜಿಲ್ಲೆಗಳ ಆಕ್ಷೇಪಣೆಗಳನ್ನು ಆಲಿಸಲಾಗಿದೆ. ಸೆ. 26ಕ್ಕೆ ಬೆಂಗಳೂರು ಬಂದ್‌ ಹಿನ್ನೆಲೆಯಲ್ಲಿ ಆ ದಿನ ನಿಗದಿಯಾಗಿದ್ದ ವಿಜಯನಗರ, ಹಾಸನ, ಹಾವೇರಿ ಮತ್ತು ಕೋಲಾರ ಜಿಲ್ಲೆಗಳ ಆಕ್ಷೇಪಣೆಗಳ ವಿಚಾರಣೆಯನ್ನು ಅ. 5ಕ್ಕೆ ನಿಗದಿಪಡಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

15 ದಿನದಲ್ಲಿ ಅಂತಿಮ ಅಧಿಸೂಚನೆ?
ಸೆ. 25ರಿಂದ ಅ. 5ರ ವರೆಗೆ ರಜಾದಿನಗಳನ್ನು ಹೊರತುಪಡಿಸಿ ಪ್ರತೀ ದಿನ ಮೂರ್‍ನಾಲ್ಕು ಜಿಲ್ಲೆಗಳ ಆಕ್ಷೇಪಣೆಗಳನ್ನು ಆಲಿಸಲಾಗುತ್ತದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಆಕ್ಷೇಪಣೆಗಳ ವಿಚಾರಣೆ ಪೂರ್ಣಗೊಳ್ಳಲಿದ್ದು, ಅದಾದ ಒಂದು ವಾರದಲ್ಲಿ ತಾ.ಪಂ., ಜಿ.ಪಂ. ಕ್ಷೇತ್ರಗಳ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಸೆ. 19ರೊಳಗೆ ಸಲ್ಲಿಕೆಯಾದ ಒಟ್ಟು 413 ಆಕ್ಷೇಪಣೆಗಳಲ್ಲಿ ಅತಿ ಹೆಚ್ಚು ಆಕ್ಷೇಪಣೆಗಳು ವಿಜಯಪುರ ಜಿಲ್ಲೆಯಿಂದ 36 ಹಾಗೂ ರಾಯಚೂರು ಜಿಲ್ಲೆಯಿಂದ 45 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಉಡುಪಿ ಹಾಗೂ ಬಳ್ಳಾರಿ ಜಿಲ್ಲೆಯಿಂದ ಯಾವುದೇ ಆಕ್ಷೇಪಣೆಗಳು ಬಂದಿಲ್ಲ ಎಂದು ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರನೇ ಬಾರಿ ಗಡಿ ನಿಗದಿ
2021ರಲ್ಲಿ ರಾಜ್ಯ ಚುನಾವಣಾ ಆಯೋಗ ಕ್ಷೇತ್ರ ಪುನರ್‌ವಿಂಗಡಣೆ ಮಾಡಿತ್ತು. ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಅಧಿಕಾರವನ್ನು ಆಯೋಗದಿಂದ ವಾಪಸ್‌ ಪಡೆದು ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಈ ಆಯೋಗವು 2023ರ ಮಾ.1ರಂದು ಕ್ಷೇತ್ರಪುನರ್‌ವಿಂಗಡಣೆ ಗುರುತಿಸಿತ್ತು. ಅದನ್ನು ರಾಜ್ಯ ಸರಕಾರ ಹಿಂಪಡೆದಿತ್ತು. ಈ ಮಧ್ಯೆ ಈ ವರ್ಷ ಜುಲೈ ತಿಂಗಳಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಕಾಂಬ್ಳೆ ಅವರನ್ನು ಸೀಮಾ ನಿರ್ಣಯ ಆಯೋಗಕ್ಕೆ ನೇಮಿಸಿದ್ದ ಸರ್ಕಾರ ನಾಲ್ಕು ವಾರಗಳಲ್ಲಿ ಸೀಮಾ ನಿರ್ಣಯ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಅದರಂತೆ ಸೆ.5ರಂದು ಜಿ.ಪಂ., ತಾ.ಪಂ. ಕ್ಷೇತ್ರಗಳ ಪುನರ್‌ ವಿಂಗಡಣೆಯ ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು.

Advertisement

ಕ್ಷೇತ್ರಗಳ ಸಂಖ್ಯೆ ಬಹುತೇಕ ಅಷ್ಟೇ
ಈ ಹಿಂದೆ 2021ರಲ್ಲಿ ರಾಜ್ಯ ಚುನಾವಣ ಆಯೋಗ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ್ದಾಗ ಜಿ.ಪಂ. ಕ್ಷೇತ್ರಗಳು 1,192 ಮತ್ತು ತಾ.ಪಂ. ಕ್ಷೇತ್ರಗಳು 3,298 ಇದ್ದವು. ಅನಂತರ ಲಕ್ಷ್ಮೀನಾರಾಯಣ ನೇತೃತ್ವದ ಆಯೋಗ ಇದೇ ವರ್ಷ ಮಾರ್ಚ್‌ನಲ್ಲಿ ಗಡಿಗಳನ್ನು ಗುರುತಿಸಿದ್ದಾಗ ಜಿ.ಪಂ. ಕ್ಷೇತ್ರಗಳ ಸಂಖ್ಯೆ 1,117 ಹಾಗೂ ತಾ.ಪಂ ಕ್ಷೇತ್ರಗಳ ಸಂಖ್ಯೆ 3,663 ಆಗಿತ್ತು. ಹೊಸ ಅಧಿಸೂಚನೆಯಲ್ಲೂ ಕ್ಷೇತ್ರಗಳ ಸಂಖ್ಯೆ ಬಹುತೇಕ ಅಷ್ಟೇ ಆಗಿದ್ದು, ಕ್ಷೇತ್ರಗಳ ಭೌಗೋಳಿಕ ಗಡಿ, ವಿಸ್ತೀರ್ಣದಲ್ಲಿ ಒಂದಿಷ್ಟು ವ್ಯತ್ಯಾಸಗಳಾಗಿವೆ ಎಂದು ಹೇಳಲಾಗಿದೆ.

ಅದಾಲತ್‌ ವೇಳಾಪಟ್ಟಿ
ಸೆ. 27-ವಿಜಯಪುರ, ಯಾದಗಿರಿ, ಕಲಬುರಗಿ, ಮೈಸೂರು
ಸೆ. 29- ಬೆಂಗಳೂರು ನಗರ, ಕೊಪ್ಪಳ, ಉತ್ತರ ಕನ್ನಡ, ಧಾರವಾಡ
ಸೆ. 30-ಚಿಕ್ಕಮಗಳೂರು, ಬೀದರ್‌, ಬಳ್ಳಾರಿ, ರಾಮನಗರ
ಅ. 3- ತುಮಕೂರು, ಬೆಳಗಾವಿ, ಮಂಡ್ಯ ಚಿಕ್ಕಬಳ್ಳಾಪುರ
ಅ. 4-ಚಿತ್ರದುರ್ಗ, ರಾಯಚೂರು, ದಕ್ಷಿಣಕನ್ನಡ, ದಾವಣಗೆರೆ
ಅ. 5-ಶಿವಮೊಗ್ಗ, ಚಾಮರಾಜನಗರ, ಕೊಡಗು

ಆಕ್ಷೇಪಣೆಗಳು

ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-10, ಚಿಕ್ಕಬಳ್ಳಾಪುರ-28, ಚಿತ್ರದುರ್ಗ-1, ದಾವಣಗೆರೆ-21, ಕೋಲಾರ-4, ರಾಮನಗರ-23, ಶಿವಮೊಗ್ಗ-4, ತುಮಕೂರು-8, ವಿಜಯಪುರ-36, ಮೈಸೂರು-10, ಮಂಡ್ಯ-24, ಹಾಸನ-8, ಚಿಕ್ಕಮಗಳೂರು-6, ಚಾಮರಾಜನಗರ-3, ಕೊಡಗು-2, ದಕ್ಷಿಣಕನ್ನಡ-6, ಬೆಳಗಾವಿ-29, ಗದಗ-24, ಬಾಗಲಕೋಟೆ-21, ವಿಜಯನಗರ-2, ಹಾವೇರಿ-15, ಯಾದಗಿರಿ-11, ಕಲಬುರಗಿ-24, ಉತ್ತರಕನ್ನಡ-9, ಧಾರವಾಡ-15, ಕೊಪ್ಪಳ-8, ಬೀದರ್‌-20, ರಾಯಚೂರು-35.

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next