Advertisement

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

12:05 AM May 20, 2024 | Team Udayavani |

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡವು (ಎಸ್‌ಐಟಿ) ಅರೆಸ್ಟ್‌ ವಾರೆಂಟ್‌ ಮೂಲಕ “ರೆಡ್‌ ಕಾರ್ನರ್‌’ ಅಸ್ತ್ರ ಬಳಸಲು ಮುಂದಾಗಿದ್ದು, ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Advertisement

23 ದಿನಗಳಿಂದ ವಿದೇಶದಲ್ಲಿರುವ ಪ್ರಜ್ವಲ್‌ ಅವರನ್ನು ಪತ್ತೆ ಹಚ್ಚುವುದೇ ಎಸ್‌ಐಟಿಗೆ ದೊಡ್ಡ ತಲೆನೋವಾ
ಗಿದೆ. ಶತಾಯಗತಾಯ ಅವರನ್ನು ಬಂಧಿಸಲು ಯತ್ನಿಸುತ್ತಿರುವ ಎಸ್‌ಐಟಿಯು ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವ ಉದ್ದೇಶದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಅರೆಸ್ಟ್‌ ವಾರೆಂಟ್‌ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅರೆಸ್ಟ್‌ ವಾರೆಂಟ್‌ ದಾಖಲೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಪ್ರಜ್ವಲ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಶೀಘ್ರದಲ್ಲೇ ಇಂಟರ್‌ಪೋಲ್‌ ಮೂಲಕ ಕೇಂದ್ರಕ್ಕೆ ಎಸ್‌ಐಟಿ ಮನವಿ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ ಬಳಿಕ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗುತ್ತದೆ. ಆದರೆ ಕೆಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯು ವಿದೇಶದಲ್ಲಿ ತಲೆಮರೆಸಿಕೊಂಡಾಗ ಕೋರ್ಟ್‌ನಿಂದ ಅರೆಸ್ಟ್‌ ವಾರೆಂಟ್‌ ಪಡೆದು ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಅವಕಾಶವಿದೆ ಎಂದು ಹಿರಿಯ ವಕೀಲರು ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಪ್ರಜ್ವಲ್‌ ಪತ್ತೆ ಹಚ್ಚಲು ಪ್ರಯತ್ನ
ಪ್ರಜ್ವಲ್‌ ತಲೆಮರೆಸಿಕೊಂಡಿರುವ ಜರ್ಮನಿ ದೇಶಕ್ಕೆ ರೆಡ್‌ ಕಾರ್ನರ್‌ ನೋಟಿಸ್‌ ನೀಡಿದರೆ, ಅಲ್ಲಿನ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ಪತ್ತೆ ಹಚ್ಚಿ ಭಾರತ ಸರಕಾರಕ್ಕೆ ಮಾಹಿತಿ ನೀಡುತ್ತಾರೆ. ಅನಂತರ ಇಲ್ಲಿನ ಪೊಲೀಸರು ಆರೋಪಿಯನ್ನು ಕರೆತರಬೇಕಾಗುತ್ತದೆ. ಕೆಲವೊಮ್ಮೆ ಅಲ್ಲಿನ ಪೊಲೀಸರೇ ವಿಮಾನದ ಮೂಲಕ ಭಾರತಕ್ಕೆ ಕಳುಹಿಸುವ ವ್ಯವಸ್ಥೆಯೂ ಇದೆ. ಆದರೆ ಭಾರತ ಹಾಗೂ ಜರ್ಮನಿ ದೇಶದ ನಡುವೆ ಈ ಸಂಬಂಧ ಕೆಲವು ಒಪ್ಪಂದಗಳು ಆಗಿರಬೇಕಾಗುತ್ತದೆ. ಸಾಮಾನ್ಯವಾಗಿ ಬಹುತೇಕ ದೇಶಗಳು ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಂಡಿರುತ್ತವೆ. ಈ ಮೂಲಕ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ಪತ್ತೆಗೆ ಈ ತಂತ್ರ ರೂಪಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಪಾಸ್‌ಪೋರ್ಟ್‌ ರದ್ದತಿಗೂ ಯತ್ನ
ಮತ್ತೂಂದೆಡೆ ಪ್ರಜ್ವಲ್‌ನ ಪಾಸ್‌ಪೋರ್ಟ್‌ ರದ್ದತಿಗೆ ಎಸ್‌ಐಟಿ ಪ್ರಯತ್ನಿಸುತ್ತಿದ್ದು, ಕಾನೂನು ತಜ್ಞರ ಮೊರೆ ಹೋಗಿದೆ. ಜರ್ಮನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಜ್ವಲ್‌ ಪತ್ತೆ ಹಚ್ಚಲು ನೆರವು ಕೋರುವ ಬಗ್ಗೆ ಕಾನೂನು ತಜ್ಞರಿಂದ ಎಸ್‌ಐಟಿ ಅಧಿಕಾರಿಗಳು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ. ಪಾಸ್‌ಪೋರ್ಟ್‌ ರದ್ದಾದರೆ ಕೂಡಲೇ ಅವರು ಸ್ವದೇಶಕ್ಕೆ ಮರಳಬೇಕಾಗುತ್ತದೆ. ಈಗ ನ್ಯಾಯಾಲಯದ ಬಂಧನ ವಾರೆಂಟ್‌ ಆಧರಿಸಿ ಪಾಸ್‌ಪೋರ್ಟ್‌ ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಎಸ್‌ಐಟಿ ಮನವಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Advertisement

ವಿಚಾರಣೆಗೆ ಹಾಜರಾಗದಿದ್ದಕ್ಕೆ ಅರೆಸ್ಟ್‌ ವಾರೆಂಟ್‌
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಎಸ್‌ಐಟಿ ಅಧಿಕಾರಿಗಳು ಪದೇಪದೆ ನೋಟಿಸ್‌ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್‌ ಜಾರಿಗೊಳಿಸಿದೆ. ಆದರೆ ಅರೆಸ್ಟ್‌ ವಾರೆಂಟ್‌ ಇದ್ದರೂ ಪ್ರಜ್ವಲ್‌ ಭಾರತಕ್ಕೆ ಮರಳಿದ ಬಳಿಕವಷ್ಟೆ ಬಂಧಿಸಬಹುದಾಗಿದೆ. ವಿದೇಶಕ್ಕೆ ತೆರಳಿ ಬಂಧಿಸಿ ಕರೆ ತರುವಂತಿಲ್ಲ.

ಇಂದು ರೇವಣ್ಣ ಭವಿಷ್ಯ ನಿರ್ಧಾರ
ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಶಾಸಕ ಎಚ್‌.ಡಿ.ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶವನ್ನು 42ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ ಪ್ರಕಟಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next