Advertisement

ಮೆಣಸಿನಕಾಯಿ ಬೆಳೆದ ರೈತರಿಗೆ ಸಂಕಷ್ಟ

05:36 PM Feb 23, 2021 | Team Udayavani |

ಸಿರುಗುಪ್ಪ: ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಕರೂರು, ದರೂರು, ಬೈರಾಪುರ,  ಎಚ್‌.ಹೊಸಹಳ್ಳಿ, ಶಾನವಾಸಪುರ ಮತ್ತು ಸಿರಿಗೇರಿ ಕ್ರಾಸ್‌ ಸುತ್ತಮುತ್ತ ಭಾನುವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಒಣ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಈ ಭಾಗದಲ್ಲಿ ಸುಮಾರು 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಒಣ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದು, ಬೆಳೆ ಕೈಗೆ ಬಂದಿದ್ದರಿಂದ ರೈತರು ಮೆಣಸಿನಕಾಯಿಯನ್ನು ಬಿಡಿಸಿ ಸಿರಿಗೇರಿ ಕ್ರಾಸ್‌ನ ಕೆಇಬಿ ಮೈದಾನ, ಕರೂರು ಗ್ರಾಮದ ಎಪಿಎಂಸಿ ಆವರಣ ಮತ್ತು ತಮ್ಮ ತಮ್ಮ ಜಮೀನುಗಳಲ್ಲಿ ಒಣಗಲು ಹಾಕಿದ್ದು, ಭಾನುವಾರ ರಾತ್ರಿ ಸುರಿದ ಅಕಾಲಿಕ ಜೋರು ಮಳೆಗೆ ಒಣ ಹಾಕಿದ ಮೆಣಸಿನಕಾಯಿ ತೋಯ್ದಿದೆ. ಮೆಣಸಿನಕಾಯಿ ಬಣ್ಣ ಕೆಟ್ಟು ಹೋಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಬೆಲೆಯು  ಕಡಿಮೆಯಾಗುತ್ತದೆ ಎನ್ನುವ ಆತಂಕದಲ್ಲಿಯೇ ಸೋಮವಾರ ಬಿಸಿಲಿಗೆ ಮೆಣಸಿನಕಾಯಿ ಹರಡುವ ದೃಶ್ಯಗಳು ಕಂಡು ಬಂದವು.

ಬ್ಯಾಡಗಿ, ಗುಂಟೂರು, ಸಿಜೆಂಟಾ, ಡಬ್ಬೆ ತಳಿಯ ಮೆಣಸಿನಕಾಯಿಗಳನ್ನು ರೈತರು ಒಣಗಿಸಲು ಮೈದಾನದ ತುಂಬ ಹರಡಿದ್ದರು. ಆದರೆ ಏಕಾಏಕಿ ಸತತ ಮೂರುತಾಸು ಸುರಿದ ಮಳೆಗೆ ಒಣಗಲು ಹಾಕಿದ್ದ ಒಣ ಮೆಣಸಿನಕಾಯಿಯಲ್ಲಿ ಮಳೆ ನೀರು ನಿಂತಿದ್ದು, ಇದರಿಂದ ಕಾಯಿಯ ಕೆಂಪು ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವ ಆತಂಕದಿಂದ ರೈತರು ಕಂಗಾಲಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಒಣಹಾಕಿದ್ದ ಮೆಣಸಿನಕಾಯಿಯಲ್ಲಿ ಮಳೆ ನೀರಿನೊಂದಿಗೆ ಮಣ್ಣ ಹರಿದು ಬಂದಿದ್ದು, ಮಣ್ಣಿನಲ್ಲಿ ಸೇರಿಕೊಂಡಿದ್ದ ಮೆಣಸಿನಕಾಯಿಯನ್ನು ನೀರಿನಲ್ಲಿ ತೊಳೆದು ಸೋಮವಾರ ಉತ್ತಮ ಬಿಸಿಲು ಬಿದ್ದಿದ್ದರಿಂದ ರೈತರು ರಾಶಿಹಾಕಿದ ಒಣ ಮೆಣಸಿನಕಾಯಿಯನ್ನು ಮೈದಾನದಲ್ಲಿ ಮತ್ತು  ಹೊಲದಲ್ಲಿ ಹರಡಿ ಬಿಸಿಲಿಗೆ ಒಣಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಆರ್‌.ಬಸವರೆಡ್ಡಿ ಕರೂರು

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next