Advertisement

ಫ‌ುಟ್‌ಬಾಲ್‌ ತಂಡಗಳ ಮ್ಯಾನೇಜರ್‌ಗಳಿಗೂ ರೆಡ್‌ಕಾರ್ಡ್‌!

12:10 PM Aug 02, 2018 | |

ಲಂಡನ್‌: ಮೈದಾನದಲ್ಲಿ ದುರ್ವರ್ತನೆ ತೋರುವ ಆಟಗಾರರಿಗೆ ರೆಡ್‌ ಕಾರ್ಡ್‌ ನೀಡುವುದನ್ನು ಕಂಡಿದ್ದೇವೆ. ಇನ್ನು ಮುಂದೆ, ಮೈದಾನದ ಅಂಚಿನಲ್ಲಿ ನಿಂತು ಆಟಗಾರರಿಗಿಂತಲೂ ಕೆಟ್ಟದಾಗಿ ವರ್ತಿಸುವ ತಂಡಗಳ ಮ್ಯಾನೇಜರ್‌ಗಳನ್ನೂ ದಂಡಿಸಲು ಫ‌ುಟ್‌ಬಾಲ್‌ ಒಕ್ಕೂಟ ತೀರ್ಮಾನಿಸಿದೆ. ಇನ್ನು ಮುಂದೆ ಪ್ರೀಮಿಯರ್‌ ಲೀಗ್‌ ಹೊರತುಪಡಿಸಿ ಇಂಗ್ಲೆಂಡ್‌ನ‌ ವೃತ್ತಿಪರ ಫ‌ುಟ್‌ಬಾಲ್‌ ಪಂದ್ಯಾವಳಿಗಳಲ್ಲಿ ರೆಫ್ರಿಗಳು ತಂಡಗಳ ಕೋಚಿಂಗ್‌ ಸಿಬಂದಿಗೂ ಹಳದಿ ಹಾಗೂ ಕೆಂಪು ಕಾರ್ಡ್‌ ಪ್ರದರ್ಶಿಸಲು ಅವಕಾಶವಿರಲಿದೆ. ಮ್ಯಾನೇಜರ್‌ಗಳಿಗೆ ವಾಗ್ಧಂಡನೆ ವಿಧಿಸುವ ಪ್ರಸ್ತಾವವೂ ಇದೆ. ಆಟಗಾರರಂತೆ, ಇವರಿಗೂ ಪಂದ್ಯಗಳ ನಿಷೇಧವನ್ನೂ ಹೇರಲಾಗುತ್ತದೆ. 

Advertisement

ಎಲ್ಲವೂ ಉತ್ತಮ ನಡತೆಗಾಗಿ
ಪ್ರೀಮಿಯರ್‌ ಲೀಗ್‌ನ ಕೆಳಗೆ ಮೂರು ಹಂತಗಳ ಪಂದ್ಯಗಳನ್ನು ಆಯೋಜಿಸುವ ಇಂಗ್ಲಿಷ್‌ ಫ‌ುಟ್‌ಬಾಲ್‌ ಲೀಗ್‌ನ ಮುಖ್ಯ ಕಾರ್ಯ ನಿರ್ವಾಹಕ ಶಾನ್‌ ಹಾರ್ವೆ, “ಡಗ್‌ಔಟ್‌ ಅಥವಾ ತಾಂತ್ರಿಕ ವಲಯದಲ್ಲಿ ನಡತೆಯ ನಿಯಮಗಳೇನೂ ಹೊಸತಲ್ಲ. ಅಭಿಮಾನಿಗಳಿಗೆ ಶಿಸ್ತಿನ ವಿಧಾನಗಳನ್ನು ಸ್ಪಷ್ಟಪಡಿಸುವುದು ಹಾಗೂ ಮೈದಾನದಲ್ಲಿ ಉತ್ತಮ ನಡತೆಯನ್ನು ಉದ್ದೀಪಿಸುವುದು ನಮ್ಮ ಉದ್ದೇಶ. ತಂಡದ ಸಿಬಂದಿ ದುರ್ವರ್ತನೆ ತೋರಿದಾಗ ರೆಡ್‌ ಕಾರ್ಡ್‌ ತೋರಿಸಬಹುದು. ಅಗತ್ಯಬಿದ್ದರೆ ತಂಡದ ಎಲ್ಲ ಸಿಬಂದಿಗೂ ಎಚ್ಚರಿಕೆ ನೀಡುವ ಅಧಿಕಾರ ರೆಫ್ರಿಗಳಿಗಿರುತ್ತದೆ…’ ಎಂದು ಹೇಳಿದರು.

ಹೀಗಿದೆ ಹೊಸ ನಿಯಮ…
ಪಂದ್ಯದ ಅಧಿಕಾರಿಗಳ ನಿರ್ಧಾರಗಳನ್ನು ಪ್ರಭಾವಿಸಬಲ್ಲ ಅಸಂಬದ್ಧ ಭಾಷೆ ಹಾಗೂ ಸನ್ನೆಗಳಿಗೆ ಮೊದಲ ಹಂತದ ಎಚ್ಚರಿಕೆ ನೀಡಲಾಗುವುದು. ನೀರಿನ ಬಾಟಲಿಗಳನ್ನು ಎಸೆಯುವುದು, ಒದೆಯುವುದು, ಬಟ್ಟೆ ಎಸೆಯುವುದು, ಕಿರಿಕಿರಿ ಹುಟ್ಟಿಸುವಂತೆ ಚಪ್ಪಾಳೆ ತಟ್ಟುವುದು ಅಥವಾ ಫ‌ಲಕಗಳನ್ನು ಪ್ರದರ್ಶಿಸುವುದೂ ದಂಡನೆಗೆ ಅರ್ಹ ವಾಗಿರುತ್ತವೆ. ಇಂತಹ 4 ಎಚ್ಚರಿಕೆಗಳನ್ನು ಸ್ವೀಕರಿಸುವ ಸಿಬಂದಿ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. 8 ಎಚ್ಚರಿಕೆಗಳಿಗೆ ಎರಡು, 12 ಎಚ್ಚರಿಕೆಗಳಿಗೆ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. 16 ಎಚ್ಚರಿಕೆಗಳನ್ನು ಸ್ವೀಕರಿಸಿದರೆ ದುರ್ನಡತೆಯ ಆರೋಪ ಹೊರಿಸಲಾಗುತ್ತದೆ. ಆಟಗಾರರಿಗೆ ನಿರ್ದಿಷ್ಟ ಪಂದ್ಯಗಳ ಬಳಿಕ ಕಾರ್ಡ್‌ಗಳನ್ನು ಕಳೆಯಲಾಗುತ್ತದೆ. ಆದರೆ, ಕೋಚಿಂಗ್‌ ಸಿಬಂದಿಗೆ ನೀಡಿದ ಎಚ್ಚರಿಕೆ ವಾಪಸ್‌ ಪಡೆಯುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next