Advertisement

ಕ್ರಿಕೆಟಿಗೂ ಬಂತು ರೆಡ್‌ ಕಾರ್ಡ್‌!

12:04 PM Sep 27, 2017 | |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಕ್ರಿಕೆಟ್‌ನಲ್ಲಿ ಮಾಡಿರುವ ಹಲವು ಮಹತ್ವದ ಬದಲಾವಣೆಗಳು ಸೆ. 28ರಿಂದ ಜಾರಿಯಾಗಲಿವೆ. ಬ್ಯಾಟ್‌ ಗಾತ್ರಕ್ಕೆ ನಿರ್ಬಂಧ, ಮೈದಾನ ದಲ್ಲಿ ದೈಹಿಕ ಚಕಮಕಿ ನಡೆಸುವ ಆಟ ಗಾರನನ್ನು ಪಂದ್ಯದಿಂದಲೇ ಹೊರ ಕಳುಹಿಸುವುದು, ರನೌಟ್‌ ನಿಯಮದಲ್ಲಿ ಬ್ಯಾಟ್ಸ್‌ಮನ್‌ಗೆ ಪೂರಕ ಬದಲಾವಣೆ, ಚೆಂಡನ್ನು ಬೌಂಡರಿ ಗೆರೆಯೊಳಗೆ ಕ್ಯಾಚ್‌ ಹಿಡಿಯಬೇಕಿರುವುದೆಲ್ಲ ಮಹತ್ವದ ನಿಯಮಗಳು. ಈ ಕುರಿತ ನಿಯಮಗಳನ್ನು ಮೇ ತಿಂಗಳಲ್ಲೇ ಅಂಗೀಕರಿಸಲಾಗಿತ್ತು. ಸೆ.28ರಿಂದ ಜಾರಿ ಮಾಡಲಾಗುತ್ತಿದೆ.

Advertisement

ಸದ್ಯದ ಹಲವು ಬದಲಾವಣೆಗಳು ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗಳನ್ನೇ ಮಾಡಲಿವೆ. ಅದರಲ್ಲೂ ಗಲಾಟೆ ಮಾಡುವ, ಅಸಭ್ಯವಾಗಿ ವರ್ತಿಸುವ ಕ್ರಿಕೆಟಿಗನನ್ನು ಫ‌ುಟ್‌ಬಾಲ್‌ ಮಾದರಿಯಲ್ಲಿ ರೆಡ್‌ ಕಾರ್ಡ್‌ ತೋರಿಸಿ ಮೈದಾನದಿಂದಲೇ ಹೊರಕಳುಹಿಸುವುದು ತಳಮಟ್ಟದ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಕವಾಗಲಿದೆ.

ಹೊಸ ನಿಯಮಗಳೇನು?
ರೆಡ್‌ ಕಾರ್ಡ್‌ ಪ್ರಯೋಗ: ಮೈದಾನ ದಲ್ಲಿದ್ದಾಗ ಕ್ರಿಕೆಟಿಗ 4ನೇ ಹಂತದ ತಪ್ಪು ಮಾಡಿದರೆ ಅಂದರೆ ಅಂಪಾಯರ್‌, ಇತರ ಆಟಗಾರ, ಪ್ರೇಕ್ಷಕರೊಂದಿಗೆ ದೈಹಿಕ ಚಕಮಕಿ ನಡೆಸಿದರೆ ಅಂಥವ ರನ್ನು ಕೂಡಲೇ ಫ‌ುಟ್‌ಬಾಲ್‌ ಮಾದರಿ ಯಲ್ಲಿ ಪಂದ್ಯದಿಂದಲೇ ಹೊರಹಾಕ ಲಾಗುತ್ತದೆ. ಇದು ತಳಮಟ್ಟದ ಕ್ರಿಕೆಟ್‌ ನಲ್ಲಿ ಕ್ರಾಂತಿಕಾರಕವಾಗಲಿದೆ, ಆಟ ಗಾರರು ಇಲ್ಲಿಂದಲೇ ತಿದ್ದಿಕೊಳ್ಳಲು ಅವಕಾಶವಾಗುತ್ತದೆ.

ಬ್ಯಾಟ್‌ ಗಾತ್ರಕ್ಕೆ ನಿರ್ಬಂಧ: ಬ್ಯಾಟ್‌ನ ಉದ್ದ, ಅಗಲಕ್ಕೆ ನಿರ್ಬಂಧವಿದ್ದರೂ ದಪ್ಪಕ್ಕೆ ನಿರ್ಬಂಧವಿರಲಿಲ್ಲ. ಇದೀಗ ಬ್ಯಾಟ್‌ನ ತುದಿ 44 ಎಂ.ಎಂ., ಉಳಿದ ಭಾಗ ಗರಿಷ್ಠ 67 ಎಂ.ಎಂ. ಮಾತ್ರ ದಪ್ಪವಿರಬೇಕೆಂದು ಹೇಳಲಾಗಿದೆ.

ಬ್ಯಾಟ್‌ ಎಗರಿದರೆ ರನೌಟಿಲ್ಲ: 
ಬ್ಯಾಟ್ಸ್‌ಮನ್‌ ರನ್‌ಗಾಗಿ ಓಡುವಾಗ ಕ್ರೀಸ್‌ ಹತ್ತಿರ ಡೈವ್‌ ಹೊಡೆಯುತ್ತಾನೆ. ಆಗ ಬ್ಯಾಟ್‌ ಕ್ರೀಸ್‌ನ ಮೇಲಿದ್ದರೂ, ಕೆಲವೊಮ್ಮೆ ಮೇಲಕ್ಕೆ ಹಾರಿಕೊಂಡ ಪರಿಣಾಮ ಕ್ರೀಸನ್ನು ಸ್ಪರ್ಶಿಸಿರುವುದಿಲ್ಲ ಅಥವಾ ಬ್ಯಾಟ್ಸ್‌ಮನ್‌ ಕ್ರೀಸ್‌ ಸಮೀಪಿಸಿರುತ್ತಾನೆ ಆದರೆ ಬ್ಯಾಟ್‌ ಬೇರೆ ಕಡೆ ಹಾರಿರುತ್ತದೆ. ಆಗ ಬೇಲ್ಸ್‌ ಉದುರುತ್ತದೆ. ಬ್ಯಾಟ್‌ ಮೇಲೆ ಹಾರಿ ರದಿದ್ದರೆ ಆತ ರನೌಟ್‌ ತಪ್ಪಿಸಿಕೊಳ್ಳುವ ಎಲ್ಲ ಅವಕಾಶವಿರುತ್ತದೆ. ಇದುವರೆಗೆ ಅಂತಹ ಸಂದರ್ಭಗಳಲ್ಲಿ ಬ್ಯಾಟ್ಸ್‌ಮನ್‌ ಔಟ್‌ ಎನ್ನಲಾಗುತ್ತಿತ್ತು. ಇನ್ನು ನಾಟೌಟ್‌ ತೀರ್ಪು ನೀಡಲಾಗುತ್ತದೆ.

Advertisement

ಕ್ಯಾಚ್‌ ಹಿಡಿಯುವಾಗ ಗೆರೆ ಒಳಗೇ ಇರಬೇಕು: 
ಬೌಂಡರಿ ಬಳಿ ಕ್ಯಾಚ್‌ ಹಿಡಿಯುವಾಗ ಕೆಲವೊಮ್ಮೆ ಕ್ಷೇತ್ರರಕ್ಷಕರು ಬೌಂಡರಿ ಗೆರೆ ಮೇಲೆ ಹಾರಿ ಹಿಡಿಯುತ್ತಾರೆ, ಆದರೆ ಅದನ್ನು ತುಳಿದಿರುವುದಿಲ್ಲ. ಕೂಡಲೇ ಚೆಂಡನ್ನು ಗೆರೆಯೊಳಗೆ ಎಸೆದು ಓಡಿ ಬಂದು ಹಿಡಿಯುತ್ತಾರೆ, ಆಗ ಅಂಪೈರ್‌ ಅದನ್ನು ಔಟ್‌ ನೀಡುತ್ತಾರೆ. ಇನ್ನು ಮೇಲೆ ಚೆಂಡು ಹಿಡಿಯುವಾಗ ಪೂರ್ತಿ ಬೌಂಡರಿ ಒಳಗೇ ಇರಬೇಕು. ಇಲ್ಲದಿದ್ದರೆ ಅದನ್ನು ಬೌಂಡರಿ ಎಂದೇ ತೀರ್ಮಾನಿಸಲಾಗುತ್ತದೆ.

ಬೌಲಿಂಗ್‌ ವೇಳೆ ಚೆಂಡು 2 ಬಾರಿ ನೆಗೆದರೆ ನೋಬಾಲ್‌: ಬೌಲರ್‌ ಚೆಂಡನ್ನು ಎಸೆದಾಗ ಅದು ಇನ್ನು ಒಂದು ಬಾರಿ ಜಿಗಿದು ಬ್ಯಾಟ್ಸ್‌ಮನ್‌ಗೆ ತಲುಪಬೇಕು, ಒಂದು ವೇಳೆ 2ನೇ ನೆಗೆತ ಕಂಡರೆ ಅದು ನೋಬಾಲ್‌ ಆಗುತ್ತದೆ. ಈ ಹಿಂದೆ 2 ಬಾರಿ ನೆಗೆಯುವುದಕ್ಕೆ ಅವಕಾಶವಿತ್ತು. 

ನೋಬಾಲ್‌ನಲ್ಲಿ ಲೆಗ್‌ ಬೈ ರನ್‌: ಇದುವರೆಗೆ ನೋಬಾಲ್‌ ವೇಳೆ ಬೈ, ಲೆಗ್‌ ಬೈ ಆದರೆ ರನ್‌ಗಳನ್ನೂ ನೋಬಾಲ್‌ ಜೊತೆಗೇ ಸೇರಿಸಲಾಗುತ್ತಿತ್ತು. ಇನ್ನೂ ನೋಬಾಲ್‌ ಮತ್ತು ಇತರೆ ರನ್‌ಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ.

ಹೆಲ್ಮೆಟ್‌ನಿಂದ ಚಿಮ್ಮಿದ ಚೆಂಡಿನಿಂದಲೂ ಔಟ್‌:
 ಇನ್ನು ಮುಂದೆ ಕ್ಷೇತ್ರರಕ್ಷಕ/ವಿಕೆಟ್‌ ಕೀಪರ್‌ ಹೆಲ್ಮೆಟ್‌ಗೆ ಬಡಿದು ಚೆಂಡು ಸ್ಟಂಪ್‌ಗೆ ಬಡಿದರೆ ಆಗ ಬ್ಯಾಟ್ಸ್‌ಮನ್‌ ಸ್ಟಂಪ್‌, ರನೌಟ್‌ (ಕ್ರೀಸ್‌ನಿಂದ ಹೊರಗಿದ್ದರೆ) ಎಂದು ಪರಿಗಣಿಸಲಾಗುತ್ತದೆ. ಬ್ಯಾಟ್‌ಗೆ ತಗುಲಿದ ಚೆಂಡು ಕ್ಷೇತ್ರರಕ್ಷಕನ ಹೆಲ್ಮೆಟ್‌ಗೆ ಬಡಿದು ಹಿಡಿಯಲ್ಪಟ್ಟರೆ ಅದನ್ನು ಕ್ಯಾಚ್‌ ಔಟ್‌ ವಿಭಾಗಕ್ಕೆ ಸೇರಿಸಲಾಗುತ್ತದೆ.

ಬೆಂಗಳೂರು ಪಂದ್ಯಕ್ಕೆ ಅನ್ವಯವಿಲ್ಲ
ಐಸಿಸಿಯ ಈ ನೂತನ ನಿಯಮಗಳು ಈಗಾಗಲೇ ಆರಂಭವಾಗಿರುವ ಭಾರತ- ಆಸ್ಟ್ರೇಲಿಯ ಕ್ರಿಕೆಟ್‌ ಸರಣಿಗೆ ಅನ್ವಯ ವಾಗುವುದಿಲ್ಲ. ಹಳೆ ನಿಯಮಗಳೊಂದಿಗೆ ಆಡಲ್ಪಡುವ ಕೊನೆ ಸರಣಿ ಇದಾಗಿದೆ. ಆದರೆ ಸೆ. 28ರಿಂದಲೇ ಆರಂಭವಾಗುವ ಬಾಂಗ್ಲಾ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸರಣಿಗಳಿಗೆ ಹೊಸ ನಿಯಮಗಳು ಅನ್ವಯವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next