Advertisement

ಕರಾವಳಿಯಲ್ಲಿ ರೆಡ್‌ ಅಲರ್ಟ್‌

10:40 PM Oct 22, 2019 | Team Udayavani |

ಮಂಗಳೂರು/ ಉಡುಪಿ: ಕರಾವಳಿ ಭಾಗದಲ್ಲಿ ಮಂಗಳವಾರ ಮಳೆ ತುಸು ಕ್ಷೀಣಿಸಿತ್ತು. ಆದರೆ ಬುಧವಾರ ಮತ್ತು ಗುರುವಾರಕ್ಕೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ.

Advertisement

ಅ.23 ಮತ್ತು 24ರಂದು ಕರಾವಳಿ ಯಲ್ಲಿ ಬಿರುಸಿನಿಂದ ಕೂಡಿದ ಮಳೆಯಾಗುವುದು ಸಂಭವನೀಯ. ಗುಡುಗು, ಸಿಡಿಲು ಸಹಿತ ಜೋರಾಗಿ ಗಾಳಿ ಬೀಸಲಿದೆ. ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಲೈಫ್‌ಗಾರ್ಡ್‌ನವರು ಕಾರ್ಯನಿರ್ವಹಿಸುತ್ತಿದ್ದಾರೆ.

ಮೋಡ ಕವಿದ ವಾತಾವರಣ, ಸಾಧಾರಣ ಮಳೆ
ಮಂಗಳವಾರದಂದು ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿತ್ತು. ಮಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಸುಬ್ರಹ್ಮಣ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಬಂಟ್ವಾಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದೆ. ತೆಕ್ಕಟ್ಟೆ, ಬ್ರಹ್ಮಾವರ, ಸಂತೆಕಟ್ಟೆ, ಉದ್ಯಾವರ ಭಾಗದಲ್ಲಿ ಸಂಜೆಯ ಅನಂತರ ಉತ್ತಮ ಮಳೆ ಸುರಿಯಿತು. ಉಳಿದಂತೆ ಕುಂದಾಪುರ, ಬೈಂದೂರು, ಕಾರ್ಕಳ, ಸಿದ್ಧಾಪುರ ಭಾಗಗಳಲ್ಲಿ ತುಂತುರು ಮಳೆಯಾಯಿತು. ಉಡುಪಿ ನಗರದಲ್ಲಿ ಮಧ್ಯಾಹ್ನದವರೆಗೂ ವಾತಾವರಣ ಬಿಸಿಲಿನಿಂದ ಕೂಡಿತ್ತು. ಮಧ್ಯಾಹ್ನದ ಅನಂತರ ಸಂಜೆಯ ವೇಳೆಗೆ ಧಾರಾಕಾರ ಮಳೆ ಸುರಿಯಿತು. ಈ ಸಂದರ್ಭದಲ್ಲಿ ನಗರದಲ್ಲಿ ಟ್ರಾಫಿಕ್‌ ದಟ್ಟನೆಯೂ ಉಂಟಾಯಿತು.

ಕೊಡಗಿನಲ್ಲಿ ನಿರಂತರ ಮಳೆ
ಹಾರಂಗಿ ನೀರಿನ ಮಟ್ಟ ಹೆಚ್ಚಳ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಾತ್ರ ನಿರಂತರ ತುಂತುರು ಮಳೆಯಾಗುತ್ತಿದೆ. ಎರಡು ದಿನಗಳಿಂದ ಉತ್ತಮ ಮಳೆಯ ವಾತಾವರಣದಲ್ಲಿದ್ದ ಜಿಲ್ಲೆಯಲ್ಲೀಗ ಮೋಡ ಮತ್ತು ಮಂಜು ಕವಿದಿದೆ. ಎಡೆಬಿಡದೆ ಮಳೆಹನಿ ಬೀಳುತ್ತಿರುವುದರಿಂದ ಜನ ಕಿರಿಕಿರಿ ಅನುಭವಿಸುಂತ್ತಾಗಿದೆ.

Advertisement

ಹಾರಂಗಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಮತ್ತೂಮ್ಮೆ ಭರ್ತಿಯಾಗಿದೆ. ವರ್ಷದಲ್ಲಿ ಒಂದು ಭಾರಿ ಮಾತ್ರ ಭರ್ತಿಯಾಗಿ ಹರಿಯುತ್ತಿದ್ದ ಹಾರಂಗಿ ಅಣೆಕಟ್ಟೆ ಈ ಬಾರಿ ವರ್ಷದಲ್ಲಿ ಎರಡನೇ ಬಾರಿ ಭರ್ತಿಯಾಗಿದೆ.

ಉಪ್ಪುಂದ: ಮಳೆಗೆ ಕುಸಿದ ಶಾಲಾ ಕೊಠಡಿ
ಉಪ್ಪುಂದ: ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಕೊಠಡಿಯ ಮಹಡಿಯು ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದೆ.

ಈ ಕಟ್ಟಡವು ಶಿಥಿಲವಾಗಿರುವುದರಿಂದ ಪಾಠಪ್ರವಚನಗಳು ಈಗಾಗಲೇ ನೂತನ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ.

ಅಪಾಯದ ಮುನ್ಸೂಚನೆ
ಈ ಕಟ್ಟಡವನ್ನು 35 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ಪ್ರೌಢ ಶಾಲೆಯ ಅನುಕೂಲಕ್ಕಾಗಿ ಪಕ್ಕದಲ್ಲಿಯೇ ಮೂರು ವರ್ಷಗಳ ಹಿಂದೆಯೇ ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು. ಬಳಿಕ ಹಳೆಯ ಕಟ್ಟಡ ನಿರುಪಯುಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next