Advertisement

ಆಳಸಮುದ್ರ ಮೀನುಗಾರಿಕೆಗೆ ರೆಡ್‌ ಅಲರ್ಟ್‌ ಭೀತಿ!

12:33 AM Jul 27, 2023 | Team Udayavani |

ಮಂಗಳೂರು: ಗಾಳಿ- ಮಳೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಆಗಿಂದಾಗ್ಗೆ “ರೆಡ್‌ ಅಲರ್ಟ್‌’ ಘೋಷಣೆ ಆಗುತ್ತಿದ್ದು, ಆ. 1ರಿಂದ ಆರಂಭವಾಗಲಿರುವ ಆಳಸಮುದ್ರ ಮೀನುಗಾರಿಕೆಗೂ ಆತಂಕ ಎದುರಾಗಿದೆ.

Advertisement

ಮೀನುಗಾರ ಅಂದಾಜಿನ ಪ್ರಕಾರ ಜು. 28ರ ವರೆಗೆ ಬೋಟ್‌ಗಳು ಕಡಲಿಗಿಳಿಯಲು ಸೂಕ್ತ ಹವಾ ಮಾನ ಇಲ್ಲ. ಹವಾಮಾನ ವೈಪರೀತ್ಯ ಇರುವವ ರೆಗೆ ಮೀನುಗಾರಿಕೆ ಇಲಾಖೆಯೂ ಕಡಲಿಗಿಳಿಯಲು ಅನುಮತಿಸುವುದಿಲ್ಲ.

ಕಾರ್ಮಿಕರು ಪೂರ್ಣ ಬಂದಿಲ್ಲ!
ದೋಣಿಗಳಲ್ಲಿ ದುಡಿಯುವರಲ್ಲಿ ಬಹುಪಾಲು ಕಾರ್ಮಿಕರು ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯದವರು. ಊರಿಗೆ ತೆರಳಿದ್ದ ಅವರು ಈಗಾಗಲೇ ಬಂದು ತಯಾರಿಯಲ್ಲಿ ತೊಡಗಬೇಕಿತ್ತು. ಆದರೆ ರೆಡ್‌ ಅಲರ್ಟ್‌ ಹಿನ್ನೆಲೆಯಲ್ಲಿ ಜು. 28ರ ಬಳಿಕವೇ ಅವರನ್ನು ಕರೆತರಲು ಮೀನುಗಾರರು ತೀರ್ಮಾನಿಸಿದ್ದಾರೆ.
ಮೀನುಗಾರ ಮುಖಂಡ ಮೋಹನ್‌ ಬೆಂಗ್ರೆ “ಉದಯವಾಣಿ’ ಜತೆಗೆ ಮಾತನಾಡಿ, “ಸದ್ಯ ಹವಾಮಾನ ವೈಪರೀತ್ಯ ಇರುವುದರಿಂದ ತತ್‌ಕ್ಷಣಕ್ಕೆ ಮೀನುಗಾರಿಕೆ ಆರಂಭ ಕಷ್ಟ. ಆ. 4ಕ್ಕೆ ಮಂಗಳೂರಿನಲ್ಲಿ ಸಮುದ್ರ ಪೂಜೆ ಇದೆ. ಹವಾಮಾನ ಸರಿಯಿದ್ದರೆ ಆ. 1ಕ್ಕೆ ಕೆಲವರು ತೆರಳಲಿದ್ದಾರೆ’ ಎನ್ನುತ್ತಾರೆ.

ಆತಂಕದ ನಡುವೆಯೂ ತಯಾರಿ!
ಎರಡು ತಿಂಗಳ ರಜೆ ಮುಗಿಸಿ ಆ. 1ರಿಂದ ಆರಂಭಗೊಳ್ಳಲಿರುವ ಆಳಸಮುದ್ರ ಮೀನುಗಾರಿಕೆಗಾಗಿ ರೆಡ್‌ ಅಲರ್ಟ್‌ ಮಧ್ಯೆಯೂ ಮೀನುಗಾರಿಕೆ ದಕ್ಕೆಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಕಡಲಿಗಿಳಿಯಲು ಮೀನುಗಾರರು ಸಿದ್ಧರಾಗುತ್ತಿದ್ದಾರೆ. ಬೋಟ್‌, ಎಂಜಿನ್‌, ಬಲೆಗಳನ್ನು ಸಿದ್ಧಗೊಳಿಸುವ ಕೊನೆಯ ಹಂತದ ಕಾರ್ಯ ನಡೆಯುತ್ತಿವೆ. ಐಸ್‌ಪ್ಲಾಂಟ್‌ಗಳು ಕೂಡ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲು ಸಿದ್ಧವಾಗಿವೆ.

ಜೂ. 1ರಿಂದ ಜು. 31ರ ವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿದೆ. ಆ. 1ರಿಂದ ಯಾಂತ್ರಿಕ ಮೀನುಗಾರಿಕೆಗೆ ಅನುಮತಿ ಇದೆ. ಸದ್ಯ ಹವಾಮಾನ ವೈಪರೀತ್ಯದ ಕಾರಣ ಮೀನುಗಾರಿಕೆ ಆರಂಭಕ್ಕೆ ತೊಡಕಾಗಬಹುದು. ಪರಿಶೀಲಿಸಿಕೊಂಡು ಅನುಮತಿ ನೀಡಲಾಗುತ್ತದೆ.
– ಹರೀಶ್‌ ಕುಮಾರ್‌, ಜಂಟಿ ನಿರ್ದೇಶಕ, ಮೀನುಗಾರಿಕೆ ಇಲಾಖೆ ದ.ಕ.

Advertisement

ಲಾಭ ನೀಡದ ನಾಡದೋಣಿ!
ಮಳೆಗಾಲದಲ್ಲಿ ನಡೆಯುತ್ತಿದ್ದ ನಾಡದೋಣಿ ಮೀನುಗಾರಿಕೆಯೂ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರರಿಗೆ ಲಾಭದಾಯಕವಾಗಿರಲಿಲ್ಲ. ಬೇಡಿಕೆ ಇದ್ದರೂ ಹೆಚ್ಚು ಮೀನು ಲಭ್ಯವಾಗಿಲ್ಲ. ಮಾರುಕಟ್ಟೆಯಲ್ಲಿ ಲಭ್ಯ ಮೀನಿ‌ನ ದರ ದುಪ್ಪಟ್ಟಾಗಿತ್ತು. ಸದ್ಯ ದ.ಕ., ಉಡುಪಿಗೆ ಹೊರ ರಾಜ್ಯಗಳಿಂದ “ಐಸ್‌ಪ್ಯಾಕ್‌’ ಮಾಡಿರುವ ಮೀನು ಬರುತ್ತಿದೆ. ಅದಕ್ಕೆ ತಾಜಾತನ ಕಡಿಮೆ ಎನ್ನುವುದು ಕರಾವಳಿಯ ಮತ್ಸéಪ್ರಿಯರ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next