Advertisement

ಕೇರಳದಲ್ಲಿ ರೆಡ್‌ ಅಲರ್ಟ್‌ : ತಮಿಳುನಾಡಿನ ಬಳಿಕ ದೇವರ ಸ್ವಂತ ನಾಡಲ್ಲಿ ಭಾರೀ ಮಳೆ

12:16 AM Nov 15, 2021 | Team Udayavani |

ತಿರುವನಂತಪುರ/ಚೆನ್ನೈ: ಕೇರಳದಲ್ಲಿ ಶನಿವಾರ ರಾತ್ರಿ ಆರಂಭವಾಗಿರುವ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮತ್ತೆ ಭೂಕುಸಿತ ಹಾಗೂ ಪ್ರವಾಹ ಭೀತಿ ಎದುರಾಗಿದೆ. ಎರ್ನಾಕುಳಂ, ಇಡುಕ್ಕಿ ಹಾಗೂ ತೃಶೂರ್‌ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ.

Advertisement

ತಮಿಳುನಾಡಿನಲ್ಲಿ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗುತ್ತಿರುವಂತೆಯೇ ಕೇರಳದಲ್ಲಿ ವರುಣನ ಅಬ್ಬರ ಜೋರಾಗಿದೆ. ದಕ್ಷಿಣ ಕೇರಳದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಹಲವು ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತವಾಗಿವೆ. ರೈಲುಗಳ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿದೆ.

ಕೆಲವು ಪ್ರದೇಶಗಳಲ್ಲಿ ಭೂಕುಸಿತ ಘಟನೆಗಳೂ ವರದಿಯಾಗಿವೆ. ನದಿಪಾತ್ರಗಳು, ಪ್ರವಾಹ ಹಾಗೂ ಭೂಕುಸಿತಕ್ಕೆ ಬೇಗನೆ ತುತ್ತಾಗುವಂಥ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದ್ದು, ನಾಗರಿಕರನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.

ಕೇರಳ ಮಳೆಯ ಪರಿಣಾಮ ಮುಲ್ಲಪೆರಿಯಾರ್‌ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದ್ದು, 140 ಅಡಿಗೆ ತಲುಪಿದೆ. ಹೀಗಾಗಿ ಕ್ರಸ್ಟ್‌ಗೇಟ್‌ಗಳನ್ನು ತೆರೆಯಲು ತಮಿಳುನಾಡು ಸರಕಾರ ನಿರ್ಧರಿಸಿದೆ. ನ.16ರ ವರೆಗೂ ಕೇರಳದ ಕೆಲವು ಪ್ರದೇಶಗಳಲ್ಲಿ ಸಿಡಿಲುಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ : ಮತ್ತಷ್ಟು ಉತ್ತಮ ಆಡಳಿತಕ್ಕೆ ಶ್ರೀಕಾರ : ಹಳೇ ಬೇರು, ಹೊಸ ಚಿಗುರಿನ ಪರಿಕಲ್ಪನೆ

Advertisement

ಮುಂದಿನ ವಾರ ಜವಾದ್‌ ಚಂಡಮಾರುತ: ಕೇಂದ್ರ ಅಂಡಮಾನ್‌ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಮುಂದಿನ ವಾರ ಅಂದರೆ ನ.17ರ ವೇಳೆಗೆ ಅದು ಚಂಡಮಾರುತವಾಗಿ ಮಾರ್ಪಾಡಾಗುವ ಭೀತಿಯಿದೆ ಎಂದು ಹೇಳಲಾಗಿದೆ. ಒಂದು ವೇಳೆ ಈ ಜವಾದ್‌ ಚಂಡಮಾರುತ ಅಪ್ಪಳಿಸಿದರೆ, ತಮಿಳುನಾಡು, ಆಂಧ್ರ, ಒಡಿಶಾ, ಕರ್ನಾಟಕದಲ್ಲಿ ಬುಧವಾರದಿಂದ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.

ಕ್ರಸ್ಟ್‌ಗೇಟ್‌ ಓಪನ್‌

ವಿಪರೀತ ಮಳೆಯಾಗುತ್ತಿರುವ ಕಾರಣ ಕೇರಳದಲ್ಲಿ ಬಹುತೇಕ ಅಣೆಕಟ್ಟುಗಳ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನ ಇಡುಕ್ಕಿ ಜಲಾಶಯದ ಚೆರುಥೋನಿ ಡ್ಯಾಂನ ಕ್ರಸ್ಟ್‌ಗೇಟ್‌ಗಳನ್ನು ಸರಕಾರ ಓಪನ್‌ ಮಾಡಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಜಲಾಶಯದ ನೀರಿನ ಮಟ್ಟ 2398.80 ಅಡಿ ಇತ್ತು. 2399.03 ಈ ಜಲಾಶಯದ ರೆಡ್‌ ಅಲರ್ಟ್‌ ಮಟ್ಟವಾಗಿದೆ. ಕ್ರಸ್ಟ್‌ಗೇಟ್‌ ಅನ್ನು 40 ಸೆ.ಮೀ.ನಷ್ಟು ತೆರೆದು ನೀರು ಹೊರಬಿಡಲಾಗಿದೆ. ಪರಿಣಾಮವಾಗಿ ಯಾವುದೇ ಅಹಿತಕರ ಘಟನೆ ಉಂಟಾಗಿಲ್ಲ. ಪ್ರಸಕ್ತ ವರ್ಷ ಈ ಅಣೆಕಟ್ಟಿನ ಕ್ರಸ್ಟ್‌ಗೇಟ್‌ ತೆರೆಯುತ್ತಿರುವುದು ಇದು ಎರಡನೇ ಬಾರಿ.

ಕನ್ಯಾಕುಮಾರಿಯಲ್ಲಿ ಮುಂದುವರಿದ ಮಳೆ

ಸತತ 3ನೇ ದಿನವೂ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಧಾರಾಕಾರ ಮಳೆಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಸರಾಸರಿ 109.53 ಮಿ.ಮೀ. ಮಳೆ ಬಿದ್ದಿದೆ. ಭೂಕುಸಿತದಿಂದಾಗಿ ಹಳಿಯ ಮೇಲೆ ಬಂಡೆಕಲ್ಲುಗಳು ಕುಸಿದುಬಿದ್ದ ಕಾರಣ ನಾಗರ್‌ಕೊಯಿಲ್‌- ತಿರುನಲ್ವೇಲಿ ಮಾರ್ಗದಲ್ಲಿ ರೈಲು ಸೇವೆ ಸ್ಥಗಿತಗೊಂಡಿದೆ. ಇದೇ ವೇಳೆ ಮುಂದಿನ 4 ದಿನಗಳ ಕಾಲ ತಮಿಳುನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲೇ ವಾಸ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next