Advertisement

ಅನುದಾನಿತ ಶಾಲೆಗಳಿಗೆ ಶಿಕ್ಷಕರ ಭರ್ತಿಗೆ ಒಕ್ಕೊರಲ ಒತ್ತಾಯ

10:43 PM Feb 16, 2023 | Team Udayavani |

ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಶಾಲಾ- ಕಾಲೇಜುಗಳಲ್ಲಿ 2016ರಿಂದ ಈಚೆಗೆ ಖಾಲಿಯಾಗಿರುವ ಬೋಧಕ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿಯೂ ಸೇರಿದಂತೆ ಪಕ್ಷಾತೀತವಾಗಿ ಒತ್ತಾಯ ಕೇಳಿಬಂತು. ಕೊನೆಗೆ ಈ ಸಂಬಂಧ ಫೆ. 23ರಂದು ಸಭೆ ನಡೆಸಿ ಅಲ್ಲಿ ತೀರ್ಮಾನ ಕೈಗೊಳ್ಳಲು ಸಭಾಪತಿಗಳು ಸೂಚಿಸಿದರು.

Advertisement

ಗುರುವಾರ ನಿಯಮ 72ರ ಅಡಿ ಜೆಡಿಎಸ್‌ನ ಮರಿತಿಬ್ಬೇಗೌಡ ವಿಷಯ ಪ್ರಸ್ತಾವಿಸಿ, ಕಳೆದ ಏಳು ವರ್ಷಗಳಿಂದ ಬೋಧಕರ ಹುದ್ದೆಗಳು ಖಾಲಿ ಇವೆ. ಬೋಧಕರಿಲ್ಲದೆ ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಮಂಜೂರಾದ ಹುದ್ದೆಗಳ ಭರ್ತಿಗೆ ವಿಳಂಬ ಮಾಡುವುದು ಸರಿಯಲ್ಲ. 2022ರವರೆಗೂ ಖಾಲಿಯಾದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಆಡಳಿತ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ನನ್ನ ಕ್ಷೇತ್ರದಲ್ಲಿ ಐದು ಜಿಲ್ಲೆಗಳು ಬರುತ್ತಿದ್ದು, ಸುಮಾರು 60 ಶಾಲೆಗಳಿವೆ. ಅಲ್ಲೆಲ್ಲ ಒಬ್ಬರು ಗರಿಷ್ಠ ಇಬ್ಬರು ಶಿಕ್ಷಕರಿದ್ದಾರೆ. ಒಂದೆಡೆ ನಾವು ಗುಣಾತ್ಮಕ ಶಿಕ್ಷಣ ಬೇಕು ಎನ್ನುತ್ತೇವೆ. ಮತ್ತೂಂದೆಡೆ ಶೇ. ನೂರರಷ್ಟು ಫ‌ಲಿತಾಂಶವನ್ನೂ ಬಯಸುತ್ತೇವೆ. ಇದು ಹೇಗೆ ಸಾಧ್ಯ? ಈ ವಿಚಾರದಲ್ಲಿ ನನ್ನದೂ ಆಕ್ಷೇಪ ಇದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಮೊದಲಿಗೆ 2015ರ ಪೂರ್ವದಲ್ಲಿ ಖಾಲಿಯಾಗಿರುವ ಹುದ್ದೆಗಳ ಭರ್ತಿ ಮಾಡಿ ಬಳಿಕ 2016ರ ಅನಂತರದ ಖಾಲಿ ಹುದ್ದೆಗಳ ಭರ್ತಿಗೆ ನಿಯಮಾನುಸಾರ ಪರಿಶೀಲಿಸುವುದಾಗಿ ತಿಳಿಸಿದರು. ಮಧ್ಯಪ್ರವೇಶಿಸಿದ ಸಭಾಪತಿ ಹೊರಟ್ಟಿ, ಈ ಸಂಬಂಧ ಫೆ. 23ರಂದು ಸಭೆ ನಿಗದಿ ಮಾಡಿ. ಈ ಸಭೆಗೆ ಹಣಕಾಸು ಇಲಾಖೆ ಅಧಿಕಾರಿಗಳನ್ನು ಕರೆಸಿ ಚರ್ಚಿಸೋಣ. ಈ ಸಭೆಯ ಅಧ್ಯಕ್ಷತೆ ನಾನೇ ವಹಿಸುತ್ತೇನೆ ಎಂದು ಸಚಿವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next