Advertisement

ಖಾಸಗಿ ವಲಯದ ತಜ್ಞರ ನೇಮಕ: ಸರಕಾರ ನಿಗಾ ಇರಿಸಲಿ

10:55 PM May 16, 2023 | Team Udayavani |

ಕೇಂದ್ರ ಸರಕಾರ ತನ್ನ ವಿವಿಧ ಖಾತೆ/ಇಲಾಖೆಗಳಲ್ಲಿ ಖಾಸಗಿ ಕ್ಷೇತ್ರದಲ್ಲಿನ ತಜ್ಞರನ್ನು ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿದೆ. 5 ವರ್ಷಗಳ ಹಿಂದೆಯೇ ಸರಕಾರ ಇಂತಹ ಉಪಕ್ರಮ ಕೈಗೊಂಡು ಹಂತಹಂತವಾಗಿ ಮುಂದು ವರಿಸುತ್ತ ಬಂದಿದ್ದು ಈ ಬಾರಿ ಅದರ ವ್ಯಾಪ್ತಿಯನ್ನು 12 ಖಾತೆ/ಇಲಾಖೆಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ.

Advertisement

ಆಡಳಿತದಲ್ಲಿ ಸುಧಾರಣೆ ತರಲು ಮತ್ತು ಹೊಸಚಿಂತನೆಗಳ ಅನುಷ್ಠಾನದ ದೃಷ್ಟಿಯಿಂದ ಸರಕಾರ ಈ ಹೆಜ್ಜೆ ಇರಿಸಿದೆ. 2018ರ ಜೂನ್‌ನಲ್ಲಿ ಮೊದಲ ಬಾರಿಗೆ ಇದೇ ಮಾದರಿಯಲ್ಲಿ ಜಂಟಿ ಕಾರ್ಯದರ್ಶಿಗಳ ನೇಮಕಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. ಕೇಂದ್ರ ಲೋಕಸೇವಾ ಆಯೋಗದ ಮೂಲಕ ಈ ನೇಮಕಗಳನ್ನು ಮಾಡಿಕೊಳ್ಳಲಾಗಿತ್ತು. ಕೇಂದ್ರದ ಈ ಪ್ರಯೋಗ ಭಾಗಶಃ ಯಶಸ್ಸು ಕಂಡಿದ್ದರಿಂದಾಗಿ 2021ರ ಅಕ್ಟೋಬರ್‌ನಲ್ಲಿ ಮೂರು ಜಂಟಿ ಕಾರ್ಯದರ್ಶಿಗಳು, 19 ನಿರ್ದೇಶಕರು ಮತ್ತು 9 ಮಂದಿ ಉಪ ಕಾರ್ಯದರ್ಶಿಗಳ ಸಹಿತ ಒಟ್ಟು 31 ಅಭ್ಯರ್ಥಿ ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು. ಈಗ ಮೂರನೇ ಬಾರಿಗೆ ಕೇಂದ್ರ ಸರಕಾರ ಇದೇ ಮಾದರಿಯಲ್ಲಿ ಖಾಸಗಿ ಕ್ಷೇತ್ರದ ತಜ್ಞರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದು ಮೇ 20ರಿಂದ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸಂಬಂಧ ಕೇಂದ್ರದ ಸಿಬಂದಿ ಮತ್ತು ತರಬೇತಿ ಇಲಾಖೆಯು ಯುಪಿಎಸ್‌ಸಿಗೆ ಸೂಚನೆಯನ್ನು ನೀಡಿದೆ. ಯುಪಿಎಸ್‌ಸಿ ತನ್ನ ನಿಯಮಾ ವಳಿಗಳಿಗನುಸಾರವಾಗಿಯೇ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಆಡಳಿತಾತ್ಮಕವಾಗಿ ತನ್ನ ಇಲಾಖೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಈ ತೀರ್ಮಾನ ದಿಟ್ಟ ಹೆಜ್ಜೆಯೇ ಸರಿ. ಈ ಹಿಂದಿನಿಂದಲೂ ಸರಕಾರ ಈ ಮಹತ್ವದ ಹುದ್ದೆಗಳಿಗೆ ತನ್ನ ಅಧಿಕಾರಿ ವಲಯದಿಂದಲೇ ನೇಮಕ ಮಾಡಿಕೊಳ್ಳುತ್ತ ಬಂದಿದೆ. ಅಧಿಕಾರಿಗಳು ಸೇವಾ ಹಿರಿತನದ ಆಧಾರದಲ್ಲಿ ಭಡ್ತಿಯ ಮೂಲಕ ಈ ಹುದ್ದೆಗಳಿಗೆ ಏರುವುದು ಈವರೆಗೆ ನಡೆದುಕೊಂಡು ಬಂದಿರುವ ಪದ್ಧತಿ. ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಒಂದಿಷ್ಟು ಸಾಣೆ ಹಿಡಿಯುವ ಮತ್ತು ಪರಿಣತರ ಮೂಲಕವೇ ಖಾಸಗಿ ವಲಯಕ್ಕೆ ಸಡ್ಡು ಹೊಡೆಯುವ ಇರಾದೆ ಸರಕಾರದ್ದಾಗಿದೆ. ಆದರೆ ಸರಕಾರ ಕಳೆದ ಐದು ವರ್ಷಗಳ ಹಿಂದೆ ಕೆಲವೊಂದು ಇಲಾಖೆಗಳಿಗೆ ಪ್ರಾಯೋಗಿಕ ನೆಲೆಯಲ್ಲಿ ಖಾಸಗಿ ವಲ ಯದ ವಿಷಯತಜ್ಞರನ್ನು ಜಂಟಿ ಕಾರ್ಯದರ್ಶಿ ದರ್ಜೆಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಮೂಲಕ ಅವರ ಅನುಭವ ಮತ್ತು ವಿಷಯ ಜ್ಞಾನವನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಸರಕಾರದ ಈ ತೀರ್ಮಾನ ಯಶಸ್ವಿಯಾಗಿದ್ದರಿಂದ ಈಗ ಅದನ್ನು ವಿವಿಧ ಇಲಾಖೆಗಳ ಮತ್ತಷ್ಟು ಹುದ್ದೆಗಳಿಗೆ ಪರಿಚಯಿಸಲು ಮುಂದಾಗಿದೆ.

ಈ ಬಾರಿ ಕಾನೂನು, ಔಷಧ, ರಾಸಾಯನಿಕ, ವಾಣಿಜ್ಯ ಮತ್ತು ಕೈಗಾರಿ ಕೆಯಂತಹ ಮಹತ್ವದ ಇಲಾಖೆಗಳಲ್ಲೂ ಖಾಸಗಿ ಕ್ಷೇತ್ರದ ತಜ್ಞರನ್ನು ಇಂತಹ ಉನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಈ ಇಲಾಖೆಗಳಲ್ಲಿನ ಕೆಲವೊಂದು ರಹಸ್ಯ ಮಾಹಿತಿಗಳು ಸೋರಿಕೆಯಾಗದಂತೆ ಈ ಅಧಿಕಾರಿಗಳ ಮೇಲೆ ನಿಗಾ ಇಡುವುದು ಅವಶ್ಯವಾಗಿದೆ. ಅಷ್ಟು ಮಾತ್ರವಲ್ಲದೆ ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯುವುದರಿಂದ ಇವರ ಅಧಿಕಾರಾವಧಿ ಮುಗಿದ ಬಳಿಕ ಖಾಸಗಿ ವಲಯ ಇವರ ಸೇವೆಯನ್ನು ಬಳಸಿಕೊಳ್ಳಲು ಮುಂದಾದಲ್ಲಿ ಅದು ಕೂಡ ಆಡಳಿತದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ. ಇವೆಲ್ಲದರ ಮೇಲೆ ಸರಕಾರ ಕಟ್ಟುನಿಟ್ಟಿನ ನಿಗಾ ಇರಿಸಬೇಕು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next