Advertisement

Madhu Bangarappa: ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಇನ್ನಷ್ಟು ಶಿಕ್ಷಕರ ನೇಮಕ: ಮಧು

09:19 PM May 30, 2024 | Team Udayavani |

ಶಿವಮೊಗ್ಗ: ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಮತ್ತಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸರ್ಕಾರಿ ಶಾಲಾ- ಕಾಲೇಜುಗಳನ್ನು ಸಶಕ್ತಗೊಳಿಸುವಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಬಂದ ಮೇಲೆ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, 12 ಸಾವಿರ ಮಂದಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಪಿಯು ಕಾಲೇಜುಗಳ 900 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ನೀತಿ ಸಂಹಿತೆ ಕೊನೆಗೊಂಡ ಬಳಿಕ ಪ್ರಕ್ರಿಯೆ ಆರಂಭಿಸಲಾಗುವುದು. ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತರಾಗಿದ್ದು, ಸರ್ಕಾರಿ ಶಾಲೆಗಳಿಗೆ ಸಿಬ್ಬಂದಿ ಮತ್ತು ಮೂಲ ಸೌಕರ್ಯ ನೀಡಲಾಗುವುದು. ಹಿಂದಿನ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ್ದ ಕೊಳಕನ್ನು ತೊಳೆಯುವ ಕೆಲಸವನ್ನು ನಾವು ಮಾಡುತಿದ್ದೇವೆ ಎಂದರು.

ಮಾಜಿ ಶಿಕ್ಷಣ ಸಚಿವ ಸುರೇಶಕುಮಾರ್‌ ಅವಧಿಯಲ್ಲಿ ಕೇವಲ 3300 ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಈಗ ಆಧಾರ ರಹಿತ ಆರೋಪ ಮಾಡುತಿದ್ದಾರೆ. 3000 ಕೆಪಿಎಸ್‌ ಶಾಲೆ ಆರಂಭಕ್ಕೆ ಸರ್ಕಾರ ಬದ್ಧವಾಗಿದೆ. ರಾಜ್ಯದ 600 ಶಾಲೆಗಳ ದುರಸ್ತಿಗೆ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕಟ್ಟಡ ದುರಸ್ತಿಗೂ ಆದ್ಯತೆ ನೀಡಲಾಗುವುದು. ಮೇ 31ರಿಂದ ಶಾಲೆಗಳು ಆರಂಭವಾಗಲಿದ್ದು, ಎಲ್ಲಾ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ಮೊದಲ ವಾರದಲ್ಲಿ ವಿತರಿಸಲಾಗುವುದು. ಈಗಾಗಲೇ ಎಲ್ಲ ವಿಭಾಗಗಳಿಗೆ ಪುಸ್ತಕ ಮತ್ತು ಬಟ್ಟೆ ಕಳುಹಿಸಲಾಗಿದೆ. ಕಲಬುರಗಿಯಲ್ಲಿ ಸಮವಸ್ತ್ರದ ಗುಣಮಟ್ಟದ ಬಗ್ಗೆ ದೂರು ಬಂದಿದ್ದು, ಅದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next