Advertisement

KKRDBಯಿಂದ ಅತಿಥಿ ಶಿಕ್ಷಕರ ನೇಮಕ: ಡಾ. ಅಜಯಸಿಂಗ್

12:17 PM Aug 30, 2023 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ತೀವ್ರವಾಗಿ ಎದುರಿಸುತ್ತಿರುವ ಶಿಕ್ಷಕರ ಕೊರತೆಯನ್ನು ನಿವಾರಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅತಿಥಿ ಶಿಕ್ಷರಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗ  3000 ಶಿಕ್ಷಕರ ಕೊರತೆ ಇರೋದನ್ನು ಒಂದುವರೆ ತಿಂಗಳಲ್ಲಿ ಗುತ್ತಿಗೆ ಅಧಾರದಲ್ಲಿ ನೇಮಕ ಮಾಡಲು ಮುಂದಾಗಲಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶಿಕ್ಷಕರನ್ನು ಕೆಕೆಆರ್ ಡಿಬಿ ಯಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಡಾ.‌ಅಜಯಸಿಂಗ್ ತಿಳಿಸಿದರು.

ಕಕ ಭಾಗದ 9249 ಶಾಲೆಗಳಲ್ಲಿ 18282 ಶಿಕ್ಷಕರ ಕೊರತೆಯಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ 15000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದ ಮೂರು ಸಾವಿರ ಶಿಕ್ಷಕರನ್ನು ಮಂಡಳಿಯಿಂದ ಪ್ರತಿ ಶಿಕ್ಷಕಗೆ 10500 ರೂ ಅನುದಾನ ನೀಡಲಾಗುವುದು. ಒಟ್ಟಾರೆ ಶೈಕ್ಷಣಿಕ ಸುಧಾರಣೆಗೆ ಹೆಚ್ಚಿನಾದ್ಯತೆ ನೀಡಲು ನಿರ್ಧರಿಸಲಾಗಿದೆ. ಒಟ್ಟಾರೆ ಶೇ. 20 ರ ಅಧಿಕ ಮೊತ್ತ ಶಿಕ್ಷಣಕ್ಕಾಗಿ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಡಾ. ಅಜಯಸಿಂಗ್ ವಿವರಿಸಿದರು.

ತಾಯಿ ಮತ್ತು ಮಗು ಆಸ್ಪತ್ರೆಗೂ ನೆರವು: ಕಕ ಭಾಗದ ಎಲ್ಲ ತಾಲೂಕುಗಳಲ್ಲಿ 26  ಕೋ. ರೂ ವೆಚ್ಚದಲ್ಲಿ ತಾಯಿ ಮತ್ತು ಮಗುವಿನ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಶೇ 60 ರಷ್ಟು ಹಣ ಕೇಂದ್ರ ಸರ್ಕಾರ ನೀಡಿದ್ದರೆ ಉಳಿದ ಮೊತ್ತ ರಾಜ್ಯ ಸರ್ಕಾರ ಭರಿಸುತ್ತದೆ. ಆದರೆ ರಾಜ್ಯ ಸರ್ಕಾರದ  ಪಾಲಿನ ಹಣದಲ್ಲಿ ಅರ್ಧದಷ್ಟು ಅಂದರೆ ನಾಲ್ಕು ಕೋ.ರೂ ಮಂಡಳಿಯಿಂದ ನೀಡಲು ನಿರ್ಧರಿಸಲಾಗಿದೆ ಎಂದು ಡಾ. ಅಜಯಸಿಂಗ್ ತಿಳಿಸಿದರು.

Advertisement

ಮೂರು ಸಾವಿರ ಕೋ. ರೂ.ಗೆ ಕ್ರಿಯಾ ಯೋಜನೆ: ಮಂಗಳವಾರ ನಡೆದ ಮಂಡಳಿ ಸಭೆಯಲ್ಲಿ ಮೂರು ಸಾವಿರ ಕೋ. ರೂ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. 15 ದಿನದೊಳಗೆ  ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸುವಂತೆ ಕಕ ಭಾಗದ ಎಲ್ಲ 41 ಶಾಸಕರಿಗೆ ಪತ್ರ ಬರೆಯಲಾಗಿದೆ. ಯಾರು ‌ಮೊದಲು ಪ್ರಸ್ತಾವನೆ ನೀಡುತ್ತಾರೆಯೋ ಅವರು ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಒಟ್ಟಾರೆ ಅಭಿವೃದ್ಧಿ ವೇಗ ಹೆಚ್ಚಿಸುವುದೇ ತಮ್ಮ ಧ್ಯೇಯವಾಗಿದೆ ಎಂದರು.

ಶಿಥಿಲ ಶಾಲಾ ಕೋಣೆಗಳ ದುರಸ್ತಿ; ಶಿಥಿಲಗೊಂಡಿರುವ ಶಾಲಾ ಕೋಣೆಗಳ ನಿರ್ಮಾಣ ಹಾಗೂ ದುರಸ್ತಿ ಗೊಳಿಸಲು ಸಹ ಮಂಡಳಿ ನಿರ್ಧರಿಸಿದೆ. ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಅನುದಾನ ನೀಡದಿರಲು ನಿರ್ಧರಿಸಲಾಗಿದೆಯಲ್ಲದೇ ಕಕ ಹೊರ ಭಾಗದಲ್ಲಿ ನೀಡಲಾಗಿದ್ದ ಅನುದಾನ ವಾಪಸ್ಸು  ಪಡೆಯಲಾಗಿದೆ ಎಂದು ಡಾ. ಅಜಯಸಿಂಗ್ ಪ್ರಕಟಿಸಿದರು.

ಕಳಪೆ ಕಾಮಗಾರಿ ಸಹಿಸುವುದಿಲ್ಲ: ಮಂಡಳಿಯಿಂದ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ವಾಗಿ ಹಿಂದಿನ ಅವಧಿಯಲ್ಲಿನ ಅಕ್ರಮಗಳ ಕುರಿತಾಗಿ ತನಿಖೆ‌ ನಡೆಯುತ್ತಿದೆ. ವರದಿ ಬಂದ‌ ನಂತರ ಮುಂದಿನ ಹೆಜ್ಜೆ ಇಡಲಾಗುವುದು.‌ ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಸಹಿಸುವುದಿಲ್ಲ.‌ಮೊದಲು ಒಂದೇ ಥಡ್೯ ಪಾರ್ಟಿ ಇತ್ತು.‌ಈಗ ಕಾಮಗಾರಿ ವೇಗ ಹೆಚ್ಚಿಸಲು ಆಯಾ ಜಿಲ್ಲೆಗೊಂದು ಥರ್ಡ್ ಪಾರ್ಟಿ ವಹಿಸಲು ಆಯಾ ಜಿಲ್ಲಾಧಿಕಾರಿ ಗಳಿಗೆ ಅಧಿಕಾರ ನೀಡಲಾಗಿದೆ.‌ ಅದೇ ರೀತಿ ಐದು ಕೋ.ರೂ ಒಳಗಿನ ಕಾಮಗಾರಿ ಆಯಾ ಜಿಲ್ಲಾ ಹಂತದಲ್ಲೇ ನಿರ್ಧಸಿರುವ ಮುಖಾಂತರ ಅಡಳಿತದಲ್ಲಿ ವಿಕೇಂದ್ರೀಕರಣ ತರಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ಡಾ.‌ಅಜಯಸಿಂಗ್ ತಿಳಿಸಿದರು.

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್   ನೆಲೋಗಿ, ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next