Advertisement

ಸರಕಾರದ ಸುಪರ್ದಿಗೆ ಸೇರಲು ‘ನೇಮಕಾತಿ’ಅಡಚಣೆ

11:53 AM May 24, 2022 | Team Udayavani |

ಉಡುಪಿ: ವೇತನ ಸಮಸ್ಯೆ ಸಹಿತ ಹಲವಾರು ಕಾರಣಗಳಿಂದ ಟೀಕೆ-ಟಿಪ್ಪಣಿಗಳಿಗೆ ಗುರಿಯಾಗಿದ್ದ ಬಿಆರ್‌ಎಸ್‌ ಆಸ್ಪತ್ರೆಯನ್ನು ಸರಕಾರ ತನ್ನ ಸುರ್ಪದಿಗೆ ಪಡೆದರೂ, ಆಡಳಿತಾತ್ಮಕವಾದ ಸರಕಾರದ ಹಿಡಿತಕ್ಕೆ ಇನ್ನೂ ಬಂದಿಲ್ಲ.

Advertisement

ಈ ಹಿಂದಿನ ಯೋಜನೆಯಂತೆ ಮೇ 16ರಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರಕಾರದ ಮೂಲಕ ನಡೆಯಲಿದೆ ಎಂದು ತಿಳಿಸಲಾಗಿತ್ತು. ಆದರೆ ಸಿಬಂದಿ ನೇಮಕಾತಿ ಸಮಸ್ಯೆಯಿಂದಾಗಿ ಮತ್ತೆ ಮುಳುವಾಗಿದೆ.

ಸಿಬಂದಿ ವರ್ಗಾವಣೆ

2018ರಲ್ಲಿ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಈ ಆಸ್ಪತ್ರೆ ತೆಗೆದುಕೊಂಡ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿದ್ದ ಸರಕಾರದ ರೆಗ್ಯೂಲರ್‌ ಹಾಗೂ ಎನ್‌ಎಚ್‌ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ಸಿಬಂದಿಯನ್ನು ಕೌನ್ಸೆಲಿಂಗ್‌ ಮಾಡಿ ಬೇರೆ ಬೇರೆ ಕಡೆಗಳಿಗೆ ವರ್ಗಾಯಿಸಲಾಗಿತ್ತು. ಆ ಹುದ್ದೆಗಳೆಲ್ಲ ಈಗ ಖಾಲಿ ಬಿದ್ದಿವೆ. ಎನ್‌ಎಂಎಂ ಸಿಬಂದಿಯನ್ನು ರಿವೀಲ್‌ ಮಾಡದೆ ಜಿಲ್ಲೆಯ ಬೇರೆ ಬೇರೆ ಆಸ್ಪತ್ರೆಗಳಿಗೆ ನೇಮಕ ಮಾಡಲಾಗಿತ್ತು.

ಎನ್‌ಎಚ್‌ಎಂ ಹುದ್ದೆ ಜಿಲ್ಲಾಸ್ಪತ್ರೆಗಷ್ಟೇ ಮೀಸಲು

Advertisement

ಸರಕಾರದ ನಿಯಮಾವಳಿಯಂತೆ ಎನ್‌ಎಚ್‌ಎಂ ಹುದ್ದೆಗಳು ಕೇವಲ ಜಿಲ್ಲಾಸ್ಪತ್ರೆಗಷ್ಟೇ ಮೀಸಲಿಡಬೇಕು. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅವರನ್ನು ನೇಮಕ ಮಾಡುವಂತಿಲ್ಲ. ಆದರೆ ಬಿಆರ್‌ ಎಸ್‌ ಆಸ್ಪತ್ರೆ ನಿರ್ಮಾಣ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಬೇರೆಡೆ ನಿಯೋಜನೆ ಮಾಡ ಲಾಗಿತ್ತು. ಪ್ರಸ್ತುತ ಸರಕಾರದ ಸುರ್ಪದಿಗೆ ನೀಡಬೇಕೆಂಬ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಹಿಂದೆ ಬೇರೆಡೆ ನಿಯೋಜನೆಗೊಂಡ ಸಿಬಂದಿ ಮತ್ತೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ನಿಯೋಜನೆಗೊಳ್ಳಬೇಕೆಂದು ಆದೇಶ ಹೊರಡಿಸಿದ್ದರು. ಅದರಂತೆ ಸಿಬಂದಿ ಇಲ್ಲಿಗೆ ಆಗಮಿಸಿದರೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಸಿಬಂದಿ ಸಮಸ್ಯೆ ಎದುರಾಯಿತು. ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದರು. ಈ ಕಾರಣಕ್ಕಾಗಿ ಆ ಆದೇಶವನ್ನು ಮತ್ತೆ ಹಿಂಪಡೆದು ಈಗಿರುವಂತೆ ಮುಂದುವರಿಸಲು ಸೂಚಿಸಲಾಗಿದೆ.

ಮೊದಲು 70 ಬೆಡ್‌ಗಳ ಆಸ್ಪತ್ರೆ

ಈ ಹಿಂದಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 70 ಬೆಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 58 ಮಂದಿ ರೆಗ್ಯೂಲರ್‌ ಹಾಗೂ 56 ಮಂದಿ ಎನ್‌ಎಚ್‌ಎಂ ಸಿಬಂದಿಗಳಿದ್ದರು. ಬಿಆರ್‌ಎಸ್‌ ಆಸ್ಪತ್ರೆ ಸ್ಥಾಪನೆಯಾದ ಬಳಿಕ 200 ಬೆಡ್‌ಗಳ ಆಸ್ಪತ್ರೆ ಮಾಡಲಾಗಿತ್ತು. ಇದಕ್ಕೆ ಸರಕಾರದಿಂದ ಹೆಚ್ಚುವರಿಯಾಗಿ 42 ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಪ್ರಸ್ತುತ ಆಸ್ಪತ್ರೆಗೆ ರೆಗ್ಯುಲರ್‌ ಹಾಗೂ ಹೊಸ ಹುದ್ದೆಗಳಿಗೆ ನೇಮಕವಾದರಷ್ಟೇ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯವಿದೆ.

 ಸದ್ಯಕ್ಕೆ ಬಿಆರ್‌ಎಸ್‌ ನಿಂದಲೇ ನಿರ್ವಹಣೆ

ಸರಕಾರದ ಸಿಬಂದಿ ಸಮಸ್ಯೆಯಿಂದಾಗಿ ಮೇ 31ರ ವರೆಗೆ ಬಿಆರ್‌ಎಸ್‌ ಸಂಸ್ಥೆಯವರೇ ನಿರ್ವಹಣೆ ನೋಡಿ ಕೊಳ್ಳಲಿದ್ದಾರೆ. ಸಂಸ್ಥೆಯ 70ರಿಂದ 80ರಷ್ಟು ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ತಿಂಗಳು 100ರಷ್ಟು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದ್ದು, ಈ ತಿಂಗಳು ಕೂಡ ಹಲವರು ಇಲ್ಲಿನ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

 ಔಷಧ ಖರೀದಿಗೆ ಶೀಘ್ರ ಟೆಂಡರ್‌

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳೂ ಉಚಿತವಾಗಿ ಸಿಗಬೇಕು. ಆದರೆ ಉಡುಪಿಯಲ್ಲಿ ಮಾತ್ರ ಔಷಧಗಳನ್ನು ಹೊರಗಿನ ಮೆಡಿಕಲ್‌ನಿಂದ ಖರೀದಿಸಿ ತರಬೇಕಾಗಿದೆ. ಈಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬೇಕಿರುವ ಔಷಧಗಳಿಲ್ಲ. ಸರಕಾರದ ಸುಪರ್ದಿಗೆ ಬಂದ ಅನಂತರ ಔಷಧವನ್ನೂ ಉಚಿತವಾಗಿ ನೀಡಬೇಕಾಗಿರುವುದರಿಂದ ಇದಕ್ಕೆ ಟೆಂಡರ್‌ ಕೂಡ ಶೀಘ್ರದಲ್ಲಿ ಮಾಡಬೇಕಾಗುತ್ತದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಸರಕಾರಕ್ಕೆ ಪ್ರಸ್ತಾಪನೆ

ರೆಗ್ಯುಲರ್‌ ಹಾಗೂ ಹೊಸ ಹುದ್ದೆಗಳಿಗೆ ಗುತ್ತಿಗೆ, ಹೊರಗುತ್ತಿಗೆ ಮೂಲಕ ಸಿಬಂದಿಯನ್ನು ನೇಮಕ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಮೇ ತಿಂಗಳ ಅಂತ್ಯದೊಳಗೆ ಮುಗಿಸುವ ಉದ್ದೇಶ ಹೊಂದಲಾಗಿದೆ. -ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಸರ್ಜನ್‌

ಪುನೀತ್‌ ಸಾಲ್ಯಾನ್

Advertisement

Udayavani is now on Telegram. Click here to join our channel and stay updated with the latest news.

Next