Advertisement

ದಾಖಲೆ ಬರೆದ “ಕವಿ ಮನೆ’ಫ‌ಲಪುಷ್ಪ ಪ್ರದರ್ಶನ

11:30 AM Aug 16, 2017 | Team Udayavani |

ಬೆಂಗಳೂರು: ಮೈಸೂರು ಉದ್ಯಾನಕಲಾ ಸಂಘವು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಲಾಲಾಬಾಗ್‌ನಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ಫ‌ಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ತೆರೆಬಿದ್ದಿದೆ. ಶುಲ್ಕ ಸಂಗ್ರಹ ಲೆಕ್ಕದಲ್ಲಿ ಹಿಂದಿನ 206 ಫ‌ಲ-ಪುಷ್ಪ ಪ್ರದರ್ಶನಗಳ ದಾಖಲೆ ಮುರಿದಿರುವ ಈ ಬಾರಿಯ ಪ್ರದರ್ಶನದಲ್ಲಿ 2.14 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. 

Advertisement

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ರಸ ಋಷಿ ಕುವೆಂಪು ಅವರ ಸ್ಮರಣಾರ್ಥ ಕುಪ್ಪಳಿಯ ಅವರ ಮನೆ, ಕವಿಶೈಲ, ಜೋಗ ಜಲಪಾತ ಸೇರಿ ವಿವಿಧ ಕಲಾಕೃತಿಗಳನ್ನು ಳಗೊಂಡಿದ್ದ ಹತ್ತು ದಿನಗಳ ಪ್ರದರ್ಶನಕ್ಕೆ 5.74 ಲಕ್ಷ ಮಂದಿ ಭೇಟಿ ನೀಡಿದ್ದಾರೆ. 

ಸಾಧಕರೊಬ್ಬರನ್ನು ಮಾದರಿಯಾಗಿಟ್ಟುಕೊಂಡು ಇದೇ ಮೊದಲ ಬಾರಿ ಏರ್ಪಡಿಸಿದ್ದ ಫ‌ಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ನಿರೀಕ್ಷೆ ಮೀರಿ ಸ್ಪಂದಿಸಿದ್ದು, ಪ್ರವಾಸಿಗರಿಂದ ಸುಮಾರು 2 ಕೋಟಿ ರೂ.ಗೂ ಅಧಿಕ ಟಿಕೆಟ್‌ ಶುಲ್ಕ ಸಂಗ್ರಹವಾಗಿದೆ. ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಸಂಸ್ಥೆಗಳು ಕೈಜೋಡಿಸಿದ್ದರಿಂದ 10 ದಿನಗಳ ಕಾಲವೂ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಜತೆಗೆ ವೀಕ್ಷಕರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ಬಂದಿದ್ದು, ಕವಿ ಮನೆ ಪುಷ್ಪ ಪ್ರದರ್ಶನ ಯಶಸ್ವಿಯಾಗಿದೆ.

ಹಂಸಲೇಖ ಭೇಟಿ: ಫ‌ಲಪುಷ್ಪ ಪ್ರದರ್ಶನಕ್ಕೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕುಟುಂಬ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಅವರು ಭೇಟಿ ನೀಡಿದ್ದರು. “ತೋಟಗಾರಿಕೆ ಇಲಾಖೆ ಯುಗದ ಕವಿಗೆ ಅದ್ಭುತ ಗೌರವ ಸಲ್ಲಿಸಿದೆ. ನಾಡಗೀತೆಯ ಒಂದು ಸಾಲನ್ನೂ ತೆಗೆಯದೆ ಕೇವಲ ಎರಡೇ ನಿಮಿಷದಲ್ಲಿ ಸಂಗೀತ ಸಂಯೋಜಿಸಿದ್ದೇನೆ. ಶೀಘ್ರವೇ ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು,’ ಎಂದು ಹಂಸಲೇಖ ಹೇಳಿದರು.

ಮಳೆ ಅವಾಂತರ: ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಲಾಲ್‌ಬಾಗ್‌ ಗಾಜಿನಮನೆ ಒಳಗೆ ವಿಪರೀತ ನೀರು ಮತ್ತು ಕೆಸರು ತುಂಬಿತ್ತು. ನೂರಕ್ಕೂ ಅಧಿಕ ಕಾರ್ಮಿಕರನ್ನು ಬಳಸಿ ಕೆಸರನ್ನೆಲ್ಲಾ ಹೊರ ಹಾಕಲಾಯಿತು. ಜತೆಗೆ ಹೊಸದಾಗಿ ಮರಳು ತುಂಬಿಸಿ, ವೀಕ್ಷಕರಿಗೆ ಅನುಕೂಲ ಮಾಡಿಕೊಡಲಾಗಿತ್ತು.

Advertisement

ದಾಖಲೆಯ ಜನಸಾಗರ: ರಾತ್ರಿಯಿಡೀ ಸುರಿದ ಮಳೆ ಸ್ವಾತಂತ್ರೊತ್ಸವದ ದಿನದ ಪ್ರದರ್ಶನಕ್ಕೆ ಅಡ್ಡಿಯುಂಟು ಮಾಡಬಹುದು ಎಂಬ ಆತಂಕದಲ್ಲೇ ಕಡೆಯ ದಿನದ ಪ್ರದರ್ಶನ ಆರಂಭವಾಗಿತ್ತು. ಆದರೆ ವಯಸ್ಕರು 1.66 ಲಕ್ಷ, ಮಕ್ಕಳು 16,500, ಶಾಲಾ ಮಕ್ಕಳು 18,500, ಪಾಸ್‌ವುಳ್ಳವರು 12,410 ಸೇರಿದಂತೆ ಸುಮಾರು 2.13 ಲಕ್ಷಕ್ಕೂ ಅಧಿಕ ಮಂದಿ ಒಂದೇ ದಿನ ಭೇಟಿ ನೀಡಿದ್ದು, ಹಿಂದಿನ ಎಲ್ಲ ದಾಖಲೆಯನ್ನು ಬುಡಮೇಲು ಮಾಡಿದೆ. ರಜೆ ದಿನವಾದ್ದರಿಂದ ಸುಮಾರು 1.25 ಲಕ್ಷ ಪ್ರೇಕ್ಷಕರು ಬರಬಹುದು ಎಂದು ಆಯೋಜಕರು ನಿರೀಕ್ಷಿಸಿದ್ದರು. ಆದರೆ, ಅದಕ್ಕೂ ಮೀರಿ ಜನಸಾಗರ ಹರಿದುಬಂದಿದ್ದರಿಂದ ನೂಕುನುಗ್ಗಲಿನಿಂದ ಶೇ.30ರಿಂದ 40ರಷ್ಟು ಮಂದಿಗೆ ಟಿಕೆಟ್‌ ನೀಡಲಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಜನ-ಹಣದ ದಾಖಲೆ!: ಮೈಸೂರು ಉದ್ಯಾನ ಕಲಾ ಸಂಘ ಫ‌ಲಪುಷ್ಪ ಪ್ರದರ್ಶನ ಆರಂಭಿಸಿದ ವರ್ಷದಿಂದ ಇದುವರೆಗೂ 206 ಪ್ರದರ್ಶನಗಳು ನಡೆದಿವೆ. ಹಿಂದೆಂದೂ ಕಂಡರಿಯದಷ್ಟು ಜನಸಂದಣಿ ಈ ಬಾರಿಯ ಫ‌ಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದಿದೆ. ಹತ್ತು ದಿನಗಳ ಫ‌ಲಪುಷ್ಪ ಪ್ರದರ್ಶನಕ್ಕೆ 4.28 ಲಕ್ಷ ವಯಸ್ಕರು, 36,500 ಮಕ್ಕಳು, 66500 ಶಾಲಾ ಮಕ್ಕಳು ಮತ್ತು 42 ಸಾವಿರ ಜನ ಪಾಸ್‌ವುಳ್ಳವರು ಸೇರಿದಂತೆ 5.74 ಲಕ್ಷ ಜನರು ಭೇಟಿ ನೀಡಿದ್ದಾರೆ. ಆ.4ರಿಂದ 14ರವರೆಗೆ 1.51 ಕೋಟಿ ರೂ.ಸಂಗ್ರಹವಾಗಿತ್ತು. ಅಂತಿಮ ದಿನವಾದ ಆ.15ರಂದು 62,40,260 ರೂ.ಟಿಕೆಟ್‌ ಶುಲ್ಕ ಸಂಗ್ರಹವಾಗಿದ್ದು, ಒಟ್ಟಾರೆಯಾಗಿ ಹತ್ತು ದಿನಗಳಿಂದ 2.14 ಕೋಟಿ ರೂ. ಸಂಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next