Advertisement

ವಿಮೋಚನಾ ಹೋರಾಟಗಾರರ ಇತಿಹಾಸ ದಾಖಲಿಸಿ

03:04 PM Sep 14, 2022 | Team Udayavani |

ಕಲಬುರಗಿ: ಹೈದ್ರಾಬಾದ್‌ ಕರ್ನಾಟಕ ನಿಜಾಮನ ಕಪಿಮುಷ್ಠಿಯಿಂದ ಕಲ್ಯಾಣ ಕರ್ನಾಟಕ ವಿಮೋಚನೆಗೊಂಡು 75 ವರ್ಷಗಳ ಅಮೃತಮಹೋತ್ಸವಕ್ಕೆ ಕಾಲಿಟ್ಟರೂ ಈ ಭಾಗದ ವಿಮೋಚನೆಗೆ ಹೋರಾಡಿ ಮಡಿದ ಹೋರಾಟಗಾರರ ಜೀವನ ಚರಿತ್ರೆ ಇನ್ನೂ ದಾಖಲೀಕರಣ ಮಾಡಿಲ್ಲ, ಇನ್ಮುಂದೆಯಾದರೂ ಹೋರಾಟಗಾರರ ಇತಿಹಾಸ ರಚಿಸಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಎಸ್‌. ಝಳಕಿ, ಕಲ್ಯಾಣ ಕರ್ನಾಟಕ (ಹೈದರಾಬಾದ್‌ ಕರ್ನಾಟಕ) ವಿಮೋಚನಾ ವಿಜಯೋತ್ಸವ ಸಮಿತಿ ವಕ್ತಾರ ಎಂ.ಎಸ್‌. ಪಾಟೀಲ ನರಿಬೋಳ ಆಗ್ರಹಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ವಿಮೋಚನಾ ಹೋರಾಟಗಾರರ ಜೀವನ ಚರಿತ್ರೆ ಕುರಿತು ಪಠ್ಯದಲ್ಲಿ ಸೇರಿಸಲು ಸರ್ಕಾರ ಇತಿಹಾಸ ಅಧ್ಯಯನ ರಚನಾ ಸಮಿತಿ ರಚಿಸಿದರೂ ಈ ವರೆಗೂ ಅದು ಯಾವುದೇ ಇತಿಹಾಸ ಅಧ್ಯಯನ ರಚನೆಗೆ ಮುಂದಾಗದಿರುವುದು ವಿಷಾದನೀಯ ಎಂದರು.

ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರ ಕುರಿತು ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಹೋರಾಟಗಾರರ ಪುತ್ಥಳಿ ನಿರ್ಮಿಸಬೇಕು ಎನ್ನುವುದು ಬಹು ದಿನದ ಬೇಡಿಕೆಯಾಗಿದೆ. ಹೀಗಾಗಿ ಇದೇ ಸೆ. 16ರಂದು ಜೇವರ್ಗಿ ತಾಲೂಕಿನ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ಜನ್ಮಭೂಮಿ ಅರಳಗುಂಡಗಿಯಿಂದ ಕರ್ಮಭೂಮಿ ಕಲಬುರಗಿ ಶರಣ ಬಸವೇಶ್ವರ ದೇವಾಲಯದ ವರೆಗೂ ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟಗಾರರ ಭಾವಚಿತ್ರಗಳ ಮೆರವಣಿಗೆಯ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಯಾತ್ರೆ ಅರಳಗುಂಡಗಿ, ಜೇವರ್ಗಿ, ಫರತಾಬಾದ್‌ ಮೂಲಕ ನಗರ ಪ್ರವೇಶಿಸಲಿದೆ. ನಂತರ ಜಿಡಗಾ ಮಠ, ರಾಮಮಂದಿಂದ ಸರದಾರ ವಲ್ಲಭಭಾಯ್‌ ಪಟೇಲ್‌ ವೃತ್ತಕ್ಕೆ ಆಗಮಿಸಿ ವಿಮೋಚನೆ ರೂವಾರಿ ಪಟೇಲ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶರಣಬಸವೇಶ್ವರ ದೇವಾಲಯಕ್ಕೆ ತೆರಳಿ ಶ್ರೀ ಶರಣಬಸವೇಶ್ವರರ ಗದ್ದುಗೆಗೆ ವಿಮೋಚನೆ ಹೋರಾಟದಲ್ಲಿ ತನ್ನದೇ ಆದ ಕೋಡುಗೆ ನಿಡಿರುವ ಪೂಜ್ಯ ದೊಡ್ಡಪ್ಪ ಅಪ್ಪ ಗದ್ದುಗೆಗೆ ಪೂಜೆ ಸಲ್ಲಿಸಿ ಸಮಾರೋಪ ಮಾಡಲಾಗುವುದು ಎಂದು ತಿಳಿಸಿದರು.

ರಥಯಾತ್ರೆ ದಿವ್ಯ ಸಾನ್ನಿಧ್ಯವನ್ನು ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷರಾದ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ವಹಿಸಿಕೊಳ್ಳಲಿದ್ದಾರೆ. ಅದೇ ದಿನ ಸಂಜೆ ರಥಯಾತ್ರೆ ಸಮಾರೋಪಗೊಳ್ಳಲಿದೆ. ಪ್ರಮುಖರಾದ ಗಿರೀಶ ಇನಾಂದಾರ, ಭಾಗಿರಥಿ ಗುನ್ನಾಪುರ, ಮಹಾದೇವಿ ಯಾಳವಾರ, ಶಿವಾನಿ, ಇಂದ್ರಾರೆಡ್ಡಿ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next