Advertisement
ಶುಕ್ರವಾರ ಮುಡಾ ಮೇಲೆ ದಿಢೀರ್ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳ ತಂಡ ತಡರಾತ್ರಿವರೆಗೂ ಪ್ರಕರಣ ಸಂಬಂಧ ದಾಖಲೆಗಳ ಸಂಗ್ರಹ ಮಾಡಿದ್ದಲ್ಲದೆ ಶನಿವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿ ರಾತ್ರಿಯವರೆಗೂ ಮುಂದುವರಿಸಿತು. ಇತ್ತ ಲೋಕಾಯುಕ್ತ ಪೊಲೀಸರು ಕೆಸರೆಯ ಸರ್ವೇ ನಂಬರ್ 462 ಮತ್ತು 464ರ ವಿವಾಧಿತ ಭೂಮಿಯ ಅನ್ಯಕ್ರಾಂತ ಮಾಡಿದ್ದ ಆಗಿನ ಜಿಲ್ಲಾಧಿಕಾರಿಯಾಗಿದ್ದ ಹಾಗೂ ಇಂದಿನ ರಾಯಚೂರು ಕಾಂಗ್ರೆಸ್ ಸಂಸದ ಜಿ. ಕುಮಾರ ನಾಯಕ್ ಅವರನ್ನು ಶನಿವಾರ ವಿಚಾರಣೆಗೆ ಕರೆದು ನಾಲ್ಕು ತಾಸುಗಳ ಕಾಲ ಪ್ರಕರಣ ಸಂಬಂಧ ಪ್ರಶ್ನಿಸಿ ಹಗರಣದ ಕುರಿತು ಪ್ರಮುಖ ವಿಚಾರಗಳ ಮಾಹಿತಿ ಸಂಗ್ರಹಿಸಿ¨ªಾರೆ ಎನ್ನಲಾಗಿದೆ.
Related Articles
Advertisement
ವೈಟ್ನರ್ ಹಾಕಿದ್ದ ದಾಖಲೆಗಾಗಿ ಹುಡುಕಾಟ
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾದಿಂದ ನೀಡಲಾಗಿದ್ದ 14 ನಿವೇಶನಗಳ ಪತ್ರ ವ್ಯವಹಾರ ಸಂಬಂಧ ಕೆಲವು ದಾಖಲೆಗಳಿಗೆ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವುಗಳ ಮೂಲ ದಾಖಲೆಯನ್ನು ನೀಡುವಂತೆ ಮುಡಾ ಆಯುಕ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
100 ಪುಟಗಳ ದಾಖಲೆ ವಶಕ್ಕೆ
ಈ ಮಧ್ಯೆ ಇ.ಡಿ. ಅಧಿಕಾರಿಗಳು ಪ್ರಕರಣದ ಮೂಲ ಭೂ ಮಾಲಕತ್ವ ಮತ್ತು ಅನಂತರದ ಮಾಲಕತ್ವ ಸಂಬಂಧ ಮೈಸೂರು ತಾಲೂಕು ಕಚೇರಿಯಲ್ಲಿ 100 ಪುಟಗಳ ದಾಖಲೆಯನ್ನು ಸಂಗ್ರಹಿಸಿದ್ದು, ಇದರ ಜತೆಗೆ ಸರ್ವೇ ನಂಬರ್ 462 ಮತ್ತು 464ರ ಮೂಲ ನಕ್ಷೆಯನ್ನು ಅಧಿಕಾರಿಗಳಿಂದ ಪಡೆದಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಮುಡಾ ಮತ್ತು ಮೈಸೂರು ತಾಲೂಕು ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು ಎರಡನೇ ದಿನವಾದ ಶನಿವಾರವೂ ತನಿಖೆ ಮುಂದುವರಿಸಿದರು. ಈ ನಡುವೆ ಮುಡಾದಿಂದ ಯಾವುದೇ ದಾಖಲೆಗಳ ಕಳ್ಳತನ ಆಗದಂತೆ ಮುಡಾ ಕಚೇರಿಗೆ ಸಿಆರ್‌ಪಿಎಫ್ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಹಿಂಬಾಗಿಲಿನಿಂದಲೂ ಪ್ರವೇಶ
ಮೊದಲ ದಿನವಾದ ಶುಕ್ರವಾರ ಮುಡಾ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, ಇಡೀ ಕಚೇರಿಯನ್ನು ತಮ್ಮ ಸುಪರ್ದಿಗೆ ಪಡೆದಿದ್ದ ಇ.ಡಿ. ಅಧಿಕಾರಿಗಳು ಶನಿವಾರವೂ ಕಚೇರಿಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದರು. ಹಿಂಬಾಗಿಲ ಮೂಲಕವೂ ಮುಡಾ ಕಚೇರಿಗೆ ಲಗ್ಗೆಯಿಟ್ಟಿದ್ದರು.
2ನೇ ದಿನವೂ ಮುಚ್ಚಿದ್ದ ಕಚೇರಿ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು ಸಂಪೂರ್ಣ ಕಚೇರಿಯನ್ನು ತಮ್ಮ ವಶಕ್ಕೆ ಪಡೆದಿ¨ªಾರೆ. ಈ ಹಿನ್ನೆಲೆಯಲ್ಲಿ ಶನಿವಾರವೂ ಸಹ ಕಚೇರಿಯನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಆಯುಕ್ತ
ಇ.ಡಿ. ಅಧಿಕಾರಿಗಳು ಎರಡನೇ ದಿನವೂ ಪ್ರಾಧಿಕಾರದ ಕಚೇರಿಯಲ್ಲಿ ತನಿಖೆ ಮುಂದುವರಿಸಿದ ಪರಿಣಾಮ ಮುಡಾ ಆಯುಕ್ತ ರಘುನಂದನ್ ಶನಿವಾರ ಬೆಳಗ್ಗೆ ಕಚೇರಿಗೆ ದೌಡಾಯಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಂಸದರ ವಿಚಾರಣೆ ಏಕೆ?
ಈ ವಿವಾದಿತ ಜಮೀನನ್ನು ಸಿಎಂ ಭಾವಮೈದ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಅನ್ಯಕ್ರಾಂತ ಮಾಡುವಾಗ ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜು ಅವರಿಂದ 3.16 ಎಕರೆ ಜಮೀನನ್ನು ಖರೀದಿ ಮಾಡುವ ಮೊದಲೇ ಮುಡಾ ಭೂಸ್ವಾಧೀನ ಮಾಡಿಕೊಂಡು ಬಡಾವಣೆಯನ್ನು ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ನಡೆಸಿತ್ತು. ಈ ವಿಚಾರವನ್ನು ಮರೆಮಾಚಿ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಜಿ. ಕುಮಾರ ನಾಯಕ್ ಅವರನ್ನು ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ಕರೆದು ವಿಚಾರಣೆ ನಡೆಸಿದ್ದಾರೆ.
ಸಿಎಂ ಪತ್ನಿ ಪಾರ್ವತಿ ವಿರುದ್ಧ ಈಗ ಕ್ರಯಪತ್ರ ತಿದ್ದುಪಡಿ ಆರೋಪ
ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಮೇಲೆ ಈಗ ಕ್ರಯಪತ್ರ ತಿದ್ದುಪಡಿ ಮಾಡಿದ ಆರೋಪ ಕೇಳಿಬಂದಿದ್ದು, ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ ಆರೋಪ ಮಾಡಿರುವ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರು 2023ರ ಸೆ. 29ರಂದು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಗಣೇಶ್ ದೀಕ್ಷಿತ್ ಎಂಬವರು ಹೆಬ್ಟಾಳ ಕೈಗಾರಿಕಾ ಪ್ರದೇಶದ ಸರ್ವೇ ನಂಬರ್ 445ರ ಜಮೀನಿನಲ್ಲಿ 20 ಗುಂಟೆ ಭೂಮಿ ಮಾರಾಟ ಮಾಡಿದ್ದಾರೆ. ಇದರಲ್ಲಿ ಮುಡಾ ಸ್ವಾಧೀನಪಡಿಸಿಕೊಂಡ 7 ಗುಂಟೆ ಭೂಮಿಯೂ ಒಳಗೊಂಡಿದೆ. ಹೀಗಿದ್ದರೂ ಸಿಎಂ ಪತ್ನಿ ಹೇಗೆ 20 ಗುಂಟೆ ಜಾಗ ಖರೀದಿಸಿದರು? ನೋಂದಣಾಧಿಕಾರಿಗಳು ಯಾವುದನ್ನೂ ಪರಿಶೀಲಿಸದೆ ಹೇಗೆ ಅವರ ಹೆಸರಿಗೆ ಖಾತೆ ಮಾಡಿಕೊಟ್ಟರು ಎಂದು ಪ್ರಶ್ನಿಸಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಸಚಿವ ಭೈರತಿ ಸುರೇಶ್ ಮುಡಾ ಪ್ರಕರಣದ ದಾಖಲೆಗಳನ್ನು ಸುಟ್ಟಿರುವುದನ್ನು ಸಚಿವೆ ಶೋಭಾ ನೋಡಿದ್ದಾರೆಯೇ ಅಥವಾ ಕೆಮರಾ ಇಟ್ಟಿದ್ದಾರೆಯೇ?
-ಲಕ್ಷ್ಮೀ ಹೆಬ್ಟಾಳಕರ್, ಸಚಿವೆ
ಮುಡಾ ಹಗರಣದ ದಾಖಲೆಗಳನ್ನು ಕಾರಿನಲ್ಲಿ ತಂದು ಸಚಿವ ಬೈರತಿ ಸುರೇಶ್ ಸುಟ್ಟುಹಾಕಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೊಳಿಪಡಿಸಿದರೆ ಎಲ್ಲವೂ ಹೊರಗೆ ಬರುತ್ತದೆ. 2ನೇ ಅವಧಿಗೆ ಮುಖ್ಯಮಂತ್ರಿ ಆದದ್ದೇ ಹಣ ಮಾಡುವುದಕ್ಕಾಗಿ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ನಡೆದ ಅವ್ಯವಹಾರ ಇದಕ್ಕೆ ಸಾಕ್ಷಿ.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ರವಿವಾರವೂ ತನಿಖೆ ಮುಂದುವರಿಕೆ?
ಇ.ಡಿ. ಅಧಿಕಾರಿಗಳು ಕೇವಲ 14 ನಿವೇಶನಗಳ ಪ್ರಕರಣಕ್ಕೆ ಸೀಮಿತವಾಗದೆ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ಕಡತಗಳ ಶೋಧನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ರವಿವಾರವೂ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.