Advertisement

ದಾಖಲೆಯ ತೈಲ ಆಮದು; ರಷ್ಯಾದಿಂದ ಭಾರತಕ್ಕೆ ಹಡಗಿನಲ್ಲಿ ಆಗಮಿಸುತ್ತಿರುವ ಕಚ್ಚಾ ತೈಲ

09:09 AM May 29, 2022 | Team Udayavani |

ಸಿಂಗಾಪುರ: ಉಕ್ರೇನ್‌ ಮೇಲಿನ ಯುದ್ಧದ ಕಾರಣಕ್ಕೆ ರಷ್ಯಾದಿಂದ ತೈಲ ಆಮದು ಮೇಲೆ ಬಹುತೇಕ ರಾಷ್ಟ್ರ ಗಳು ನಿರ್ಬಂಧ ಹೇರಿರುವ ನಡುವೆಯೇ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ರಷ್ಯಾ ತೈಲವು ಭಾರತ ಮತ್ತು ಚೀನದತ್ತ ಹರಿದು ಬರಲಾರಂಭಿಸಿದೆ. ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿಗೆ ಭಾರತ ಕೈಗೊಂಡ ಕ್ರಮಗಳ ಫ‌ಲವಾಗಿ ಈ ದೈತ್ಯ ಪ್ರಮಾಣದ ತೈಲ ಭಾರತಕ್ಕೆ ಆಗಮಿಸುತ್ತಿದೆ ಎಂದು ಅಂದಾಜಿಸಲಾಗಿದೆ.

Advertisement

ಇದೇ ಮೊದಲ ಬಾರಿಗೆ ಕಳೆದ ತಿಂಗಳು ರಷ್ಯಾದ ತೈಲ ಖರೀದಿಯಲ್ಲಿ ಏಷ್ಯಾವು ಯುರೋಪನ್ನೇ ಹಿಂದಿ ಕ್ಕಿತ್ತು. ಪ್ರಸಕ್ತ ತಿಂಗಳಲ್ಲೇ ಈ ಹಿಂದಿನ ದಾಖಲೆಗಳೆಲ್ಲ ವನ್ನೂ ಮುರಿಯುವ ನಿರೀಕ್ಷೆಯಿದೆ.

ವಿವಿಧ ದೇಶಗಳು ರಷ್ಯಾ ವಿರುದ್ಧ ದಿಗ್ಬಂಧನ ಹೇರಿರುವ ಕಾರಣ ರಷ್ಯಾವು ಭಾರೀ ರಿಯಾಯಿತಿ ದರದಲ್ಲಿ ತೈಲ ವಿತರಿಸುವ ಆಫ‌ರ್‌ ನೀಡಿತ್ತು. ಈ ಆಫ‌ರ್‌ನ ಲಾಭ ಪಡೆದಿರುವ ಭಾರತ ಮತ್ತು ಚೀನ ಲಕ್ಷಾಂತರ ಬ್ಯಾರೆಲ್‌ ತೈಲವನ್ನು ಖರೀದಿಸತೊಡಗಿವೆ. ಸಮುದ್ರದ ಮೂಲಕ ಏಷ್ಯಾದೊಂದಿಗೆ ರಷ್ಯಾ ನಡೆ ಸುತ್ತಿರುವ ವ್ಯಾಪಾರವು ಹೀಗೇ ಮುಂದುವರಿದರೆ ಮತ್ತು ವರ್ಷಾಂತ್ಯದ ವೇಳೆಗೆ ಐರೋಪ್ಯ ಒಕ್ಕೂಟವು ರಷ್ಯಾದ ಎಲ್ಲ ಆಮದಿಗೂ ನಿರ್ಬಂಧ ಹೇರಿದರೆ, ಸದ್ಯದಲ್ಲೇ ಸಮುದ್ರದ ಮೂಲಕ ಏಷ್ಯಾಗೆ ಬರುವ ತೈಲದ ಪ್ರಮಾಣವು 45 ದಶಲಕ್ಷದಿಂದ 60 ದಶಲಕ್ಷ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ.

9.7 ಸಾವಿರ ಕೋಟಿ ರೂ. ಅತಂತ್ರ: ರಷ್ಯಾದ ಮೇಲೆ ಐರೋಪ್ಯ ಒಕ್ಕೂಟ, ಪಾಶ್ಚಾತ್ಯ ರಾಷ್ಟ್ರಗಳು ಹೇರಿರುವ ಆರ್ಥಿಕ ದಿಗ್ಬಂಧನದ ಪರಿಣಾಮವಾಗಿ ಭಾರತೀಯ ತೈಲೋದ್ಯಮದ ಪ್ರಮುಖ ಕಂಪೆನಿಗಳಿಗೆ ಸೇರಿದ 9.7 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಅತಂತ್ರ ಸ್ಥಿತಿಗೆ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಕಂಪೆನಿಗಳಾದ ಆಯಿಲ್‌ ಇಂಡಿಯಾ, ಇಂಡಿಯನ್‌ ಆಯಿಲ್‌ ಕಾರ್ಪೊ ರೇಶನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಕಂಪೆನಿಗಳಿಗೆ ಸೇರಿದ ಹೂಡಿಕೆಯನ್ನು ಹಿಂಪಡೆಯ ಲಾಗದ ಸ್ಥಿತಿ ಏರ್ಪಟ್ಟಿದೆ.

ರಷ್ಯಾದ ವೆಂಕೋರ್ನೆಫ್ಟ್ ಆಯಿಲ್‌ ಪ್ರಾಜೆಕ್ಟ್‌ನಲ್ಲಿ ಈ ಕಂಪೆನಿಗಳದ್ದು ಶೇ. 23.9ರಷ್ಟು ಹೂಡಿಕೆಯಿದೆ. ಟಸ್‌- ಯುರಿಯಾಖ್‌ ಕಂಪೆನಿಯಲ್ಲಿ ಶೇ. 29.9ರಷ್ಟು ಹೂಡಿಕೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಝಿರ್ಕಾನ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ
ರಷ್ಯಾವು ಇತ್ತೀಚೆಗೆ ತಯಾರಿಸಿರುವ ಅತ್ಯಾಧುನಿಕ ಕ್ಷಿಪಣಿಯಾದ ಝಿಕ್ರಾನ್‌ ಹೈಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿರುವುದಾಗಿ ರಷ್ಯಾದ ರಕ್ಷಣ ಸಚಿವಾಲಯ ತಿಳಿಸಿದೆ. ಬಾರೆನ್‌ ಸಮುದ್ರದಲ್ಲಿ ಅಡ್ಮಿರಲ್‌ ಗೊರ್ಶೆಕೊವ್‌ ಪ್ರಾಂತ್ಯದಿಂದ ಈ ಕ್ಷಿಪಣಿಯ ಉಡಾವಣೆಯನ್ನು ಕೈಗೊಳ್ಳಲಾಗಿತ್ತು. ಈ ಪ್ರಾಂತದಿಂದ ಸುಮಾರು 1 ಸಾವಿರ ಕಿ.ಮೀ. ದೂರವಿರುವ ಉತ್ತರ ಅಂಟಾರ್ಟಿಕಾದ ಶ್ವೇತ ಸಮುದ್ರದಲ್ಲಿ ಗುರುತಿಸಲಾಗಿದ್ದ ಗುರಿಯನ್ನು ಈ ಕ್ಷಿಪಣಿ ಯಶಸ್ವಿಯಾಗಿ ಮುಟ್ಟಿದೆ. ಈ ಕ್ಷಿಪಣಿಯು ಶಬ್ದದ ಅಲೆಗಳಿಗಿಂತ ಐದು-ಹತ್ತು ಪಟ್ಟು ವೇಗವಾಗಿ ಸಾಗಬಲ್ಲದು ಎಂದು ರಕ್ಷಣ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಸಣ್ಣ ಪಟ್ಟಣಗಳ ವಶ: ರಷ್ಯಾ
ಉಕ್ರೇನ್‌ನ ಲಿಮನ್‌ ಸೇರಿದಂತೆ ಆ ದೇಶದ ಇನ್ನಿತರ ಸಣ್ಣ ಪಟ್ಟಣಗಳನ್ನು ವಶಪಡಿಸಿಕೊಳ್ಳುತ್ತಿರುವುದಾಗಿ ರಷ್ಯಾ ತಿಳಿಸಿದೆ. ಇದೇ ವಾರದಲ್ಲಿ ಡೊನಾಸ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲಾ ಗಿತ್ತು. ಇದೀಗ ಲಿಮನ್‌ ನಗರವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾದ ರಕ್ಷಣ ಸಚಿವಾಲಯದ ವಕ್ತಾರ ಐಗರ್‌ ಕೊನಾಶೆಂಕೊವ್‌ ತಿಳಿಸಿದ್ದಾರೆ. ಇದಲ್ಲದೆ ಶನಿವಾರದಂದು ಉಕ್ರೇನ್‌ನ ಮತ್ತೂಂದು ಸಣ್ಣ ನಗರವಾದ ಸಿವಿಯೆರೊಡೊನೆಸ್ಕ್ ಮೇಲೆ ದಾಳಿ ನಡೆಸಲಾಗಿದ್ದು ಸದ್ಯದಲ್ಲೇ ಅದನ್ನೂ ವಶಪಡಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next