Advertisement

ವಿದ್ಯಾರ್ಥಿಗಳ ಸೇರ್ಪಡೆಯಲ್ಲಿ ದಾಖಲೆ; ಇನ್ನಷ್ಟು ಸೌಕರ್ಯಕ್ಕೆ ಬೇಡಿಕೆ

07:55 PM Sep 13, 2021 | Team Udayavani |

ವಿಟ್ಲ: ವಿಟ್ಲ ಸರಕಾರಿ ಶಾಲೆ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಗೊಂಡ ಶಾಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

Advertisement

1ರಿಂದ 10ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಈ ಶಾಲೆಯಲ್ಲಿ 1,232 ವಿದ್ಯಾರ್ಥಿಗಳು ದಾಖಲಾ ಗಿರುವುದು ರಾಜ್ಯ ದಲ್ಲಿಯೇ ಸಾರ್ವಕಾಲಿಕ ದಾಖ ಲೆಯೇ ಆಗಿದೆ.

ವಿಟ್ಲಕಸಬಾ ಗ್ರಾಮದ ಪ್ರಥಮ ಶಾಲೆ ಇದಾಗಿತ್ತು. ಹೆಸರು ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸರಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ). ಆಗ ವಿಟ್ಲಮುಟ್ನೂರು, ವಿಟ್ಲಪಟ್ನೂರು, ವೀರಕಂಬ ಗ್ರಾಮಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಬೊಬ್ಬೆಕೇರಿ, ಮೇಗಿನ ಪೇಟೆ, ಚಂದಳಿಕೆ, ಬೊಳಂತಿಮೊಗರು, ಒಕ್ಕೆತ್ತೂರು, ಕಾಂತಡ್ಕ, ಅನಿಲಕಟ್ಟೆ, ಪಡಿಬಾಗಿಲು ಗ್ರಾಮಗಳ ವ್ಯಾಪ್ತಿ ಇತ್ತು. ಆದರೆ ಇಲ್ಲೆಲ್ಲ ಈಗ ಸರಕಾರಿ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಶಾಲೆಗಳಿವೆ.

ವಿಶಾಲ ಜಾಗ :

ಶಾಲೆಗೆ 3.63 ಎಕರೆ ಜಾಗವಿದೆ. 30 ತರಗತಿ ಕೊಠಡಿಗಳಿವೆ. 24 ಶೌಚಾಲ ಯಗಳಿವೆ. ಗ್ರಂಥಾಲಯ, ಕಂಪ್ಯೂಟರ್‌ ಪ್ರಯೋಗಾಲಯ, ಬಯಲು ರಂಗ ಮಂದಿರ, ಬೋಧನ ಉಪಕರಣ ಕೊಠಡಿ, ಒಂದು ಬಾವಿ, ಎರಡು ಕೊಳವೆಬಾವಿ, 25 ತೆಂಗಿನ ಮರ, ತರಕಾರಿ, ಅರಣ್ಯ ಇಲಾಖೆಯ ನೆಡುತೋಪು, ಬಾಲವನ, ಹೂದೋಟ, ಬಯಲು ಪಾಠ ಶಾಲೆಗಳಿವೆ. ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯವಿದೆ. ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟನ ವತಿಯಿಂದ ಉಪಾ ಹಾರ, ಬಿಸಿಯೂಟವಿದೆ. ಪ್ರವಾಸ,  ವಾರ್ಷಿಕೋತ್ಸವ, ರಂಗ ತರಬೇತಿ, ನೃತ್ಯ ತರಬೇತಿ, ಯೋಗ, ಕರಾಟೆ, ಕ್ರಾಫ್ಟ್‌, ಡ್ರಾಯಿಂಗ್‌, ನ್ಪೋಕನ್‌ ಇಂಗ್ಲಿಷ್‌ ತರಗತಿ, ಬ್ಯಾಂಡ್‌ ಸೆಟ್‌, 6ರಿಂದ 8ನೇ ತರಗತಿವರೆಗೆ ಆಂಗ್ಲ ಮಾಧ್ಯಮ, ಎಲ್ಲ ತರಗತಿಗಳಿಗೆ ಟೈಲ್ಸ್‌ ಅಳವಡಿಕೆ, ಸ್ಕೌಟ್ಸ್‌, ಗೈಡ್ಸ್‌, ಸೇವಾ ದಳ ಇತ್ಯಾದಿ ಸೌಲಭ್ಯಗಳಿವೆ.

Advertisement

ದತ್ತು ಸ್ವೀಕಾರ :

ಕೆಲ ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಭಾರತೀ ಜನಾರ್ದನ ಟ್ರಸ್ಟ್‌ ಮೂಲಕ ಹಿರಿಯ ವಿದ್ಯಾರ್ಥಿ ಸುಬ್ರಾಯ ಪೈ ದತ್ತು ಸ್ವೀಕಾರ ಮಾಡಿ, ಮೂಲ ಆವಶ್ಯಕತೆಗಳನ್ನು ಪೂರೈಸಿದ್ದಾರೆ.

ಹಿರಿಯ ವಿದ್ಯಾರ್ಥಿ ಅಜಿತ್‌ ಕುಮಾರ್‌ ರೈ 3 ಮಹಡಿ, 10 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದ್ದು ಅವರ ಗೆಳೆಯ ಇಂಗ್ಲೆಂಡ್‌ ಉದ್ಯಮಿ ವಿಲಿಯಂ ಅವರ ಮೂಲಕ 17 ಲಕ್ಷ ರೂ. ಒದಗಿಸಿದ್ದಾರೆ.

9ನೇ ತರಗತಿಯಿಂದ ದ.ಕ.ಜಿ.ಪಂ.ಸರಕಾರಿ ಪ್ರೌಢಶಾಲೆ(ಆರ್‌ಎಂಎಸ್‌ಎ)ಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ.    ಇದೀಗ 9 ಮತ್ತು ಹತ್ತನೇ ತರಗತಿಯಲ್ಲಿ 174 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ 9ನೇ ತರಗತಿಗೆ ಸೇರ್ಪಡೆಗೊಳಿಸಲಾಗುತ್ತಿದ್ದು 2021-22ನೇ ಸಾಲಿಗೆ ಕನ್ನಡ ಮಾಧ್ಯಮಕ್ಕೆ 49 ಮತ್ತು ಆಂಗ್ಲ ಮಾಧ್ಯಮಕ್ಕೆ 58 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.

ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾಗಿ ಶ್ರೀಮತಿ ಮುರಳಿ ಕರ್ತವ್ಯ ನಿರ್ವಹಿ ಸುತ್ತಿದ್ದು, ಉಳಿದೆಲ್ಲ 10 ಹುದ್ದೆಗಳು ಭರ್ತಿಯಾಗಬೇಕಾಗಿದೆ. ಇದೀಗ ಜಿಪಿಟಿ ಶಿಕ್ಷಕರೋರ್ವರು ಆಂಗ್ಲ ಪಾಠ ಮತ್ತು 6 ಮಂದಿ ಮಹಿಳಾ ಅತಿಥಿ ಶಿಕ್ಷಕರು ಉಳಿದ ಪಾಠ ಪ್ರವಚನ ಮಾಡುತ್ತಿದ್ದಾರೆ. ಸರಕಾರ ಎಲ್ಲ ಹುದ್ದೆಗಳನ್ನು ನಿಯುಕ್ತಿಗೊಳಿಸುವ ತನಕ ಒದ್ದಾಡುವ ಪರಿಸ್ಥಿತಿಯಿದೆ. ಶಾಲೆಗೆ ಇನ್ನೂ 10 ಕೊಠಡಿಗಳ ಆವಶ್ಯ ಕತೆಯಿದೆ. ಕಳೆದ ವರ್ಷ ಎಂಆರ್‌ಪಿಎಲ್‌ ಸಂಸ್ಥೆಯು ಅನೇಕ ಶೌಚಾಲಯಗಳನ್ನು ನೀಡಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನಷ್ಟು ಶೌಚಾಲಯಗಳು ಬೇಕು. ಇದೀಗ ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ಕೊಠಡಿಯಿಲ್ಲ. ಪ್ರಥಮ ದರ್ಜೆ ಸಹಾಯಕ ಹುದ್ದೆ ಇಲ್ಲ. ಕಚೇರಿಯಿಲ್ಲ. ಗ್ರಂಥಾಲಯ, ಪ್ರಯೋಗಾಲಯಗಳಿಲ್ಲ. ತಕ್ಕಮಟ್ಟಿಗೆ  ಮೈದಾನ ವ್ಯವಸ್ಥೆಯಿದೆ. ಈ ಎಲ್ಲ ವ್ಯವಸ್ಥೆ ಆಗಬೇಕಿದೆ.

1,232 ವಿದ್ಯಾರ್ಥಿಗಳು  :

1ರಿಂದ 10ನೇ ತರಗತಿವರೆಗೆ ಈ ಶಾಲೆಯಲ್ಲಿ 1,232 ಮಕ್ಕಳು, 18 ಶಿಕ್ಷಕರಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆಗೆ ಪ್ರಸಕ್ತ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ 100. ಕಳೆದ ವರ್ಷ ದಾಖಲಾದ ಸಂಖ್ಯೆ 200. ಈಗಲೂ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ದೇವಕಿ ಮುಖ್ಯ ಶಿಕ್ಷಕಿ. ಶಿಕ್ಷಕರು, ಅಡುಗೆ ಸಿಬಂದಿ, ವಾಚ್‌ಮೆನ್‌ ಸೇರಿ 39ಕ್ಕೂ ಅಧಿಕ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

-ಉದಯಶಂಕರ್‌ ನೀರ್ಪಾಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next