Advertisement
ಅಲ್ಲದೇ ನೂರು ಕೋಟಿ ಡೋಸ್‌ಗಳನ್ನು ದಾಟಿರುವುದೂ ಜಾಗತಿಕವಾಗಿ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಸಿಕ್ಕ ದೊಡ್ಡ ಪ್ರೇರಣೆ.
Related Articles
Advertisement
ಅಧ್ಯಯನದ ಪ್ರಕಾರ, ಸ್ವತ್ಛ ಭಾರತ ಮಿಶನ್ ಮೂಲಕ ಮಕ್ಕಳ ಆರೋಗ್ಯ ಹಾಗೂ ಪೋಷಕಾಂಶ ವಿಚಾರದಲ್ಲಿ ಮಹತ್ತರ ಬದಲಾವಣೆ ಮತ್ತು ಮಹಿಳೆಯರಿಗೆ ಸ್ವಯಂ ಗೌರವ ನೀಡಲಾಗಿದೆ. ಹಾಗೆಯೇ ಜಲಜೀವನ ಯೋಜನೆ ಮೂಲಕ ಪ್ರತೀ ಮನೆಗಳಿಗೂ ಪೈಪ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದ್ದು, ಈ ಮೂಲಕ ನೀರಿನ ಕೊರತೆ ಎದುರಿಸುತ್ತಿದ್ದ ಹಾಗೂ ನೀರಿನಿಂದ ಬರುತ್ತಿದ್ದ ರೋಗಗಳನ್ನು ತಡೆಯಲಾಗಿದೆ. 2017ರಲ್ಲಿ ಮೋದಿ ಸರಕಾರವು ರಾಷ್ಟ್ರೀಯ ಆರೋಗ್ಯ ನೀತಿ-2017 ಅನ್ನು ಜಾರಿಗೆ ತಂದಿದ್ದು, ಈ ಮೂಲಕ ಸಾಮಾಜಿಕ-ಆರ್ಥಿಕ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಭೂದೃಶ್ಯಗಳನ್ನು ಬದಲಾವಣೆ ಮಾಡಲಾಗಿದೆ. ಆರೋಗ್ಯಕ್ಕಾಗಿ 15 ವರ್ಷಗಳ ಹಿಂದೆ, ಅಂದರೆ 2002ರಲ್ಲಿ ನೀತಿಯೊಂದನ್ನು ರೂಪಿಸಲಾಗಿತ್ತು.
2018ರಲ್ಲಿ ಆಯುಷ್ಮಾನ್ ಭಾರತ್ ಅನ್ನು ಜಾರಿ ಮಾಡಿದ್ದು, ಈ ಮೂಲಕ ದೇಶದ 50 ಕೋಟಿ ಜನಸಂಖ್ಯೆಗೆ ಆರೋಗ್ಯದ ಭರವಸೆ ನೀಡಲಾಗಿದೆ. ಇದರಡಿಯಲ್ಲಿ ಈಗಾಗಲೇ 2 ಕೋಟಿ ಭಾರತೀಯರು ಪ್ರಯೋಜನ ಪಡೆದಿದ್ದಾರೆ.
ಪ್ರಧಾನಿ ಮೋದಿ ಅವರ ಆಳ್ವಿಕೆಯಲ್ಲಿ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ. 100 ಕೋಟಿ ಡೋಸ್ ಲಸಿಕೆ ನೀಡುವಲ್ಲಿ ಕೋವಿನ್ ಆ್ಯಪ್ ವಹಿಸಿರುವ ಪಾತ್ರ ಮಹತ್ತರವಾದದ್ದು. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಟೆಲಿಮೆಡಿಸಿನ್ ಅನ್ನು ಅತ್ಯಂತ ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಅಲ್ಲದೆ, ಇ-ಸಂಜೀವಿನಿ ಮೂಲಕ 124 ಕೋಟಿ ಮಂದಿ ಸಂಪರ್ಕ ಸಾಧಿಸಿದ್ದಾರೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ವಿಶಿಷ್ಟ ಮೂಲಕ ಈಗ ರೋಗಿಗಳು, ವೈದ್ಯರು ಮತ್ತು ಆಸ್ಪತ್ರೆಗಳ ನಡುವೆ ಸಂಪರ್ಕ ಸಾಧಿಸಲಾಗುತ್ತಿದೆ.
ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬಂದಿ ಆರೋಗ್ಯ ಸೇವೆಯ ವಿತರಣೆಯಲ್ಲಿ ಹೃದಯವಿದ್ದಂತೆ. 2003ರಲ್ಲಿ ದೇಶದಲ್ಲಿ ಒಂದೇ ಒಂದು ಏಮ್ಸ್ ಇತ್ತು. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದ ಅವಧಿಯಲ್ಲಿ ಇನ್ನೂ ಐದು ಏಮ್ಸ್‌ಗಳನ್ನು ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. 2014ರಲ್ಲಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ರಾಜ್ಯದಲ್ಲಿ ತಲಾ ಒಂದು ಏಮ್ಸ್ ಇರಬೇಕು ಎಂಬ ನೀತಿ ಜಾರಿ ಮಾಡಿತು. ಸದ್ಯ ದೇಶದಲ್ಲಿ 22 ಏಮ್ಸ್‌ಗಳಿವೆ. ಹಾಗೆಯೇ ದೇಶದ ವಿವಿಧ ಭಾಗದಲ್ಲಿ 157 ಕಾಲೇಜುಗಳು ವಿವಿಧ ಹಂತಗಳ ಜಾರಿಯಲ್ಲಿವೆ. ಜತೆಗೆ, 30 ಸಾವಿರ ಎಂಬಿಬಿಎಸ್ ಸೀಟುಗಳು ಮತ್ತು 24 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಮೋದಿ ಅವರ ಸರಕಾರ ಬಂದ ಮೇಲೆ ಸೇರ್ಪಡೆ ಮಾಡಲಾಗಿದೆ. ಅಂದರೆ, ದೇಶದಲ್ಲಿ ಎಂಬಿಬಿಎಸ್ ಸೀಟುಗಳನ್ನು ಶೇ.50 ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಶೇ.80ರಷ್ಟು ಹೆಚ್ಚಳ ಮಾಡಲಾಗಿದೆ.
ವೈದ್ಯಕೀಯ ಸೇವೆಗೆ ಬಳಸುವ ಸಲುವಾಗಿ ಮತ್ತು ದೇಶೀಯ ಉತ್ಪಾದಕರ ನೆರವಿಗಾಗಿ ಪಿಎಲ್‌ಐ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಕಳೆದ ವರ್ಷ ಕೊರೊನಾ ಬಂದ ಅವಧಿಯಲ್ಲಿ ಭಾರತ ಪಿಪಿಇ ಕಿಟ್‌ಗಳನ್ನು ಉತ್ಪಾದನೆ ಮಾಡುತ್ತಿರಲಿಲ್ಲ, ಇದಕ್ಕೆ ಬದಲಾಗಿ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಪ್ರತೀ ದಿನ 2 ಲಕ್ಷ ಪಿಪಿಇ ಕಿಟ್‌ಗಳ ಉತ್ಪಾದನ ಕೊರತೆ ಮತ್ತು 2 ಲಕ್ಷ ಎನ್-95 ಮಾಸ್ಕ್ಗಳ ಕೊರತೆ ಇತ್ತು. ಒಂದು ವರ್ಷದಂಥ ಕಡಿಮೆ ಅವಧಿಯಲ್ಲಿ ಭಾರತ ಆತ್ಮ ನಿರ್ಭರ ದೃಷ್ಟಿಕೋನದಲ್ಲಿ ಪಿಪಿಇ ಕಿಟ್‌ಗಳು ಮತ್ತು ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸಲಾಗುತ್ತಿದೆ.
ಭಾರತ ಇಂದು ದೇಶೀಯವಾಗಿಯೇ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಷ್ಟೇ ಅಲ್ಲ, ಕೊರೊನಾ ವಿರುದ್ಧ ಜಗತ್ತಿನ ಮೊದಲ ಡಿಎನ್‌ಎ ಲಸಿಕೆಯನ್ನು ಕಂಡು ಹಿಡಿದಿದೆ. ಹಾಗೆಯೇ ನಮ್ಮ ನೀತಿಯಾದ ವಸುದೈವ ಕುಟುಂಬಕಂನಂತೆ ಇಡೀ ಜಗತ್ತಿಗೇ ನಾವು ಲಸಿಕೆ ಮೈತ್ರಿ ಮಾಡಿ ಕೊಂಡೆವು. ಈ ಮೂಲಕ ಅವರ ಪಾಲಿಗೆ ಸಂಜೀವಿನಿಗಳಾದೆವು. ಇದನ್ನೇ ಹೆಮ್ಮೆಯಿಂದ ಹೇಳುವುದಾದರೆ, ಜಗತ್ತಿನ 75 ರಾಷ್ಟ್ರಗಳು ಕೋವಿನ್ ಆ್ಯಪ್ ಅನ್ನು ಜಾರಿಗೊಳಿಸಲು ಮುಂದಾಗಿವೆ. ವಿಚಿತ್ರವೆಂದರೆ, ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲೂ ಲಸಿಕೆ ಪಡೆದ ಮೇಲೆ ಕೈಯಲ್ಲಿ ಬರೆದ ಚೀಟಿಯನ್ನು ಕೊಡುತ್ತಾರೆ. ಆದರೆ ಭಾರತದಲ್ಲಿ ನಾಗರಿಕರಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಪ್ರಧಾನಿಯವರ ದೃಷ್ಟಿಕೋನದಿಂದ ಉತ್ತೇಜಿತವಾಗಿರುವ ಕರ್ನಾಟಕವು, 2020-21ನೇ ಸಾಲಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ತೆರೆಯುವಲ್ಲಿ ಮುಂಚೂಣಿಯಲ್ಲಿದೆ. ಕೇಂದ್ರ ಸರಕಾರವು 2,263 ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ತೆರೆಯಲು ಟಾರ್ಗೆಟ್ ಕೊಟ್ಟಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯವು ಮಾ.31ರ ಹೊತ್ತಿಗೆ 3,300 ಕೇಂದ್ರಗಳನ್ನು ತೆರೆದಿತ್ತು. ಅಂದರೆ, ನೀಡಿದ ಗುರಿಗಿಂತ ಶೇ.146ರಷ್ಟು ಹೆಚ್ಚು. ಹಾಗೆಯೇ ಕೇಂದ್ರ ಸರಕಾರವು 2,096 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳಾಗಿ ಮಾಡುವಂತೆ ಗುರಿ ನೀಡಿತ್ತು. ಇದಕ್ಕೆ ಬದಲಾಗಿ ರಾಜ್ಯವು 2,168 ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ಮಾಡಿದ್ದು, ಇಲ್ಲೂ ಶೇ.103ರಷ್ಟು ಟಾರ್ಗೆಟ್ ತಲುಪಲಾಗಿದೆ.
ಹಾಗೆಯೇ, ನಗರದಲ್ಲಿರುವ 294 ಪಿಎಚ್‌ಸಿಗಳನ್ನು ನವೀಕರಿಸುವಂತೆ ಸೂಚಿಸಿತ್ತು. ಆದರೆ, ರಾಜ್ಯದಲ್ಲಿ ಈಗಾಗಲೇ 364 ಕೇಂದ್ರಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ. ಇಲ್ಲೂ ಶೇ.124ರಷ್ಟು ಗುರಿ ಸಾಧಿಸಲಾಗಿದೆ. ಇನ್ನು ಕೇಂದ್ರ ಸರಕಾರವು 4,653 ಎಚ್‌ಡಬ್ಲ್ಯುಸಿಗಳನ್ನು ರಚಿಸುವಂತೆ ಸೂಚಿಸಿದ್ದು, ರಾಜ್ಯವು ಈಗಾಗಲೇ 5,832 ಕೇಂದ್ರಗಳನ್ನು ತೆರೆದಿದೆ. ಇಲ್ಲೂ ಶೇ.125ರಷ್ಟು ಗುರಿ ಸಾಧನೆ ಮಾಡಲಾಗಿದೆ. ಇದರ ಜತೆಗೆ ಕರ್ನಾಟಕವು ಎಲ್ಲ ಪಿಎಚ್‌ಸಿಗಳನ್ನು ಮೇಲ್ದರ್ಜೆಗೇರಿಸಲು ನಿರ್ಧಾರ ಮಾಡಿಕೊಂಡಿದೆ, 2023ರ ವೇಳೆಗೆ 250 ಮಾದರಿ ಪಿಎಚ್‌ಸಿಗಳನ್ನು ತೆರೆಯಲು ತೀರ್ಮಾನಿಸಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕವು ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ನಾಯಕನ ಸ್ಥಿತಿಯಲ್ಲಿದೆ. ಇಲ್ಲಿ 6.13 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಒಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲು ಗುರಿ ಹಾಕಿಕೊಳ್ಳಲಾಗಿದೆ.
ಮೋದಿ ಸರಕಾರವು ದೇಶದ ವರ್ತಮಾನ ಮತ್ತು ಭವಿಷ್ಯದಲ್ಲಿ ಆರೋಗ್ಯ ಸೇವೆಯಲ್ಲಿ ಸುಧಾರಣೆ ತರುವ ಸಲುವಾಗಿ ದೊಡ್ಡ ಮಟ್ಟದ ಹೂಡಿಕೆ ಮಾಡಲು ನಿರ್ಧರಿಸಿದೆ. ಕ್ಷೇಮಾಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿರುವುದಲ್ಲದೇ, ಕಾಲೇಜುಗಳಲ್ಲಿ ಮೆಡಿಕಲ್ ಸೀಟುಗಳ ಹೆಚ್ಚಳ, ವೈದ್ಯಕೀಯ ಸಲಕರಣೆಗಳ ಉತ್ಪಾದನೆ, ಎಲ್ಲರಿಗೂ ಆರೋಗ್ಯ ವಿಮೆ, ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಒದಗಿಸಲು ಪ್ರಯತ್ನಿಸುತ್ತಿದೆ.
–ಡಾ| ಕೆ.ಸುಧಾಕರ್, ಆರೋಗ್ಯ ಸಚಿವರು ಕರ್ನಾಟಕ