ಅಹಮದಾಬಾದ್/ಶಿಮ್ಲಾ:ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಗದು, ಮದ್ಯ ಮತ್ತು ಮತದಾರರಿಗೆ ಆಮಿಷವೊಡ್ಡಲು ನೀಡಲಾಗುತ್ತಿದ್ದ ಉಡುಗೊರೆಗಳು “ದಾಖಲೆ’ ಪ್ರಮಾಣದಲ್ಲಿ ಪತ್ತೆಯಾಗಿವೆ.
ಹಿಮಾಚಲದಲ್ಲಿ ಶನಿವಾರವೇ ಮತದಾನ ನಡೆಯಲಿದ್ದು, ಡಿಸೆಂಬರ್ 1 ಮತ್ತು 5ರಂದು ಗುಜರಾತ್‌ನಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದಲ್ಲಿ 2017ರ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ ಈ ಬಾರಿ ವಶಪಡಿಸಿಕೊಂಡಿರುವ ಮದ್ಯ, ನಗದು, ಉಡುಗೊರೆಗಳ ಪ್ರಮಾಣ 5 ಪಟ್ಟು ಹೆಚ್ಚು ಎಂದು ಚುನಾವಣಾ ಆಯೋಗ ಹೇಳಿದೆ.
ಕಳೆದ ಬಾರಿ 9.03 ಕೋಟಿ ರೂ. ಮೌಲ್ಯದ ವಸ್ತುಗಳು, ನಗದು ವಶಪಡಿಸಿಕೊಂಡರೆ, ಈ ಬಾರಿ ಹಿಮಾಚಲದಲ್ಲಿ ಈ ಮೊತ್ತ 50.28 ಕೋಟಿ ರೂ.ಗೆ ಏರಿದೆ. ಗುಜರಾತ್‌ನಲ್ಲಿ ಚುನಾವಣೆ ಘೋಷಣೆಯಾದ ಕೆಲವೇ ದಿನಗಳಲ್ಲಿ 71.88 ಕೋಟಿ ರೂ. ಮೌಲ್ಯದ ನಗದು, ಮದ್ಯ ವಶಪಡಿಸಿಕೊಳ್ಳಲಾಗಿದೆ. 2017ರಲ್ಲಿ ಇಡೀ ಚುನಾವಣೆ ಅವಧಿಯಲ್ಲೇ ಇಷ್ಟೊಂದು ವಶಪಡಿಸಿಕೊಂಡಿರಲಿಲ್ಲ. ಆಗ ಒಟ್ಟಾರೆ 27.21 ಕೋಟಿ ರೂ. ಮೌಲ್ಯದ ನಗದು, ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದೂ ಆಯೋಗ ಹೇಳಿದೆ.
ಈ ನಡುವೆ, ಹಿಮಾಚಲದಲ್ಲಿ ಶೇ.90ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದರೆ, ಬಿಜೆಪಿಯ ಶೇ.82ರಷ್ಟು ಅಭ್ಯರ್ಥಿಗಳು ಕೋಟ್ಯಧೀಶರು ಎಂದು ವರದಿಯೊಂದು ಹೇಳಿದೆ.
Related Articles
ಕಾಂಗ್ರೆಸ್-ಎನ್‌ಸಿಪಿ ಮೈತ್ರಿ
ಗುಜರಾತ್‌ನಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಚುನಾವಣಾಪೂರ್ವ ಮೈತ್ರಿ ಘೋಷಿಸಿಕೊಂಡಿವೆ. 182 ಕ್ಷೇತ್ರಗಳ ಪೈಕಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ 3 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 2017ರಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿದಿದ್ದವು. ಶುಕ್ರವಾರ ಕಾಂಗ್ರೆಸ್ 46 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 21 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಇನ್ನೊಂದೆಡೆ, ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾತಾರ್ ಕ್ಷೇತ್ರದ ಬಿಜೆಪಿ ಶಾಸಕ ಕೇಸರ್‌ಸಿನ್ಹ ಸೋಲಂಕಿ ಶುಕ್ರವಾರ ಆಪ್‌ಗೆ ಸೇರ್ಪಡೆಯಾಗಿದ್ದಾರೆ. ಇನ್ನು, ಬಿಲ್ಕಿàಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳು “ಸಂಸ್ಕಾರಿ ಬ್ರಾಹ್ಮಣರು’ ಎಂದು ಹೇಳಿ, ಅವರ ಬಿಡುಗಡೆಯನ್ನು ಸಮರ್ಥಿಸಿಕೊಂಡಿದ್ದ ಗುಜರಾತ್‌ನ ಮಾಜಿ ಸಚಿವ ಚಂದ್ರಸಿನ್ಹ ರೌಲ್ಜಿ ಅವರಿಗೂ ಬಿಜೆಪಿ ಟಿಕೆಟ್ ಕೊಟ್ಟಿದೆ. 6 ಬಾರಿ ಶಾಸಕರಾಗಿರುವ ಇವರು ಈ ಬಾರಿಯೂ ಗೋಧಾÅದಲ್ಲಿ ಕಣಕ್ಕಿಳಿಯಲಿದ್ದಾರೆ.