Advertisement

6ನೇ ವೇತನ ಆಯೋಗದ ವರದಿ ಕೊಟ್ಟ ತಕ್ಷಣ ಶಿಫಾರಸು ಜಾರಿ: ಸಿಎಂ

07:36 AM Nov 15, 2017 | Team Udayavani |

ವಿಧಾನಸಭೆ: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ರಚಿಸಲಾಗಿರುವ ಆರನೇ ವೇತನ ಆಯೋಗ ತನ್ನ ವರದಿ ಕೊಟ್ಟ ತಕ್ಷಣ ಯಾವುದೇ ವಿಳಂಬ ಮಾಡದೆ ಅದರ ಶಿಫಾರಸು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಮಂಗಳವಾರ ಬಿಜೆಪಿಯ ಐಹೊಳೆ ಮಹಾಲಿಂಗಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಆಯೋಗಕ್ಕೆ ವರದಿ ನೀಡಲು 2018 ಜನವರಿ 31 ರವರೆಗೆ ಕಾಲಾವಕಾಶ ನೀಡಲಾಗಿದೆ. ವರದಿ ಬಂದ ತಕ್ಷಣ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 6ನೇ ವೇತನ ಆಯೋಗವು ಯಾವುದೇ ಮಧ್ಯಂತರ ಶಿಫಾರಸು ಮಾಡಿಲ್ಲವಾದ್ದರಿಂದ  ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲವೆಂದು ತಿಳಿಸಿದರು.

ಪೊಲೀಸರ ವೇತನ ಹೆಚ್ಚಳದ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಜೆಡಿಎಸ್‌ನ ವೈ.ಎಸ್‌ .ವಿ.ದತ್ತಾ ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ಪೊಲೀಸ್‌ ಕಾನ್‌ಸ್ಟೆಬಲ್‌ ಗಳಿಗೆ ಮಾಸಿಕ 2,100 ರೂ. ವೇತನ ಹೆಚ್ಚಳ ಮಾಡಲಾಗಿದೆ. 12 ವರ್ಷಗಳಿಗೊಮ್ಮೆ
ಕಡ್ಡಾಯವಾಗಿ ಬಡ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕಾನ್‌ಸ್ಟೆಬಲ್‌ ಆದವರು ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಯವರೆಗೂ ಬಡ್ತಿ ಪಡೆಯಲು ಅವಕಾಶವಿದೆ. ಆರ್ಡರ್ಲಿ ಪದ್ಧತಿ ರದ್ದು ಮಾಡಿದ್ದು, ಅದಿನ್ನೂ ಜಾರಿಯಾಗಬೇಕಿದೆ ಎಂದು ಹೇಳಿದರು. 

ಉ.ಕ.ಭಾಗದ ಸಮಸ್ಯೆಗಳ ಚರ್ಚೆಗೆ ಮೂರು ದಿನ ನಿಗದಿ
ವಿಧಾನಸಭೆ:
ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೂರು ದಿನ ನಿಗದಿಪಡಿಸಲಾಗಿದೆ. ಬುಧವಾರದಿಂದ (ನ.15 ರಿಂದ ) ಮೂರು ದಿನ ಮಹದಾಯಿ, ಕಳಸಾ-ಬಂಡೂರಿ, ಪ್ರಾದೇಶಿಕ
ಅಸಮತೋಲನ, ಡಾ.ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಚರ್ಚೆಗೆ ಅವಕಾಶ ಕೊಡಲಾಗಿದೆ ಎಂದು ಸ್ಪಿಕರ್‌
ಕೆ.ಬಿ.ಕೋಳಿವಾಡ ತಿಳಿಸಿದರು. ಮಂಗಳವಾರ ಸದನದಲ್ಲಿ ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ವಿಶೇಷ ಚರ್ಚೆಗೆ ನಿಗದಿಪಡಿಸಲಾಗಿದೆ. ಮೂರು ದಿನಗಳ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹುದ್ದೆ ಭರ್ತಿಗೆ ಕ್ರಮ
ವಿಧಾನಸಭೆ:
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ 1129 ಸಿ ಮತ್ತು ಬಿ ದರ್ಜೆ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಡಳಿತ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಮಂಗಳವಾರ ಜೆಡಿಎಸ್‌ ನ ಮಧು ಬಂಗಾರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, 1129 ಹುದ್ದೆಗಳಲ್ಲಿ 117 ಹುದ್ದೆಗಳ ನೇಮಕಾತಿ ಆದೇಶ ನೀಡಲಾಗಿದೆ. ಮಾರ್ಚ್‌ ಒಳಗೆ ಉಳಿದ ಹುದ್ದೆಗಳೂ ಭರ್ತಿಯಾಗಲಿದೆ ಎಂದು ಹೇಳಿದರು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರು ಸಾವಿರ ಪೌರ ಕಾರ್ಮಿಕರ ಭರ್ತಿಗೂ ಕ್ರಮ ಕೈಗೊಳ್ಳಲಾಗಿದ್ದು, ಜನವರಿ ವೇಳೆಗೆ ನೇಮಕಾತಿಯಾಗಲಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next