Advertisement

ನಾಡ ದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರ ಜಾರಿಗೆ ಶಿಫಾರಸು

03:11 PM Nov 21, 2022 | Team Udayavani |

ಬೆಂಗಳೂರು: ನಾಡ ದೇವಿ ಭುವನೇಶ್ವರಿ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಜಾರಿಗೆ ತರುವಂತೆ ಸಮಿತಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಶಿಫಾರಸು ಸಲ್ಲಿಸಿದೆ.

Advertisement

ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಈ ಶಿಫಾರಸು ನೀಡಿದೆ. ಬೆಂಗಳೂರು ವಿವಿ ಆವರಣದಲ್ಲಿ ಸ್ಥಾಪಿಸುವ ನಾಡದೇವಿ ಪ್ರತಿಮೆ ಇದೇ ಆಗಿರಲಿದೆ.

ಹಲವಾರು ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯದ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವತೆಗಳ ಚಿತ್ರಗಳನ್ನು ಬಳಸಲಾಗುತ್ತಿದ್ದು, ಒಂದು ನಿರ್ದಿಷ್ಠವಾದ ಚಿತ್ರಕೃತಿಯ ಕೊರತೆಯಿರುವುದನ್ನು ಮನಗಂಡ ಸರ್ಕಾರವು ಒಂದು ನಿರ್ದಿಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು.

ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಸಮಿತಿ ಸೂಚಿಸಿರುವಂತೆ  ಕಲಾವಿದರಾದ ಸೋಮಶೇಖರ್.ಕೆ ಅವರು ಚಿತ್ರವನ್ನು ಸಿದ್ದಪಡಿಸಿರುತ್ತಾರೆ.

ಇದನ್ನೂ ಓದಿ:ಮತಪಟ್ಟಿ ಹಗರಣ: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ಭೇಟಿಗೆ ಸಮಯ ಕೇಳಿದ ಕಾಂಗ್ರೆಸ್

Advertisement

ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಭಾವಚಿತ್ರದಲ್ಲಿ ಕೆಲ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ನಾಡದೇವತೆಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇರುತ್ತದೆ. ಬಲಗೈಯಲ್ಲಿ ಅಭಯ ಮುದ್ರೆ ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿಯನ್ನು ಪ್ರವಹಿಸುವ ನಿಟ್ಟನ್ನು ಸೂಚಿಸುತ್ತಿದೆ. ನಾಡದೇವತೆಯು ಕುಳಿತಿರುವ ಭಂಗಿಯು ಭವ್ಯತೆಯನ್ನು ಹಾಗೂ ಸಾಕ್ಷ್ಯತೆಯನ್ನು ಪ್ರತಿಬಿಂಬಿಸುತ್ತಿದೆ. ಕರ್ನಾಟಕದ ಧ್ವಜ ರಾರಾಜಿಸುತ್ತಿದೆ. ಹಸಿರು ಸೀರೆಯು ಸಿರಿ ಸಂಪದ ಸಮೃದ್ಧಿಯನ್ನು ಸೂಚಿಸುತ್ತಿದೆ. ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು ನಮ್ಮ ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವವನ್ನು ಸಾರುತ್ತಿವೆ.

ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ – ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿದೆ. ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕಗಳಾಗಿವೆ. ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಮೆರಗು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next