ಕೆ.ಆರ್.ನಗರ: ಕಳೆದ ನಾಲ್ಕು ವರ್ಷಗಳಿಂದ ಹತ್ತಕ್ಕೂ ಅಧಿಕ ಸಾಮಾನ್ಯ ಮತ್ತು ವಿಶೇಷ ಸಭೆಗಳು ನಡೆದಿದ್ದು, ಅವುಗಳಿಗೆ ಕೆಲವು ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿ ಕಚೇರಿಯ ಸಿಬ್ಬಂದಿಯನ್ನು ಕಳುಹಿಸುವ ಪರಿಪಾಠ ಬೆಳೆಸಿಕೊಂಡಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯರು ಆಗ್ರಹಿಸಿದರು.
ತಾಲೂಕು ಪಂಚಾಯ್ತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾಪಂ ವಿಶೇಷ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಕೆ.ಎಲ್.ಲೋಕೇಶ್, ಜಿ.ಎಸ್.ಮಂಜುನಾಥ್, ಮುಂಡೂರು ಕುಮಾರ್, ಶ್ರೀನಿವಾಸಪ್ರಸಾದ್, ಈವರೆಗೆ ಗೈರಾಗಿರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಜರುಗಿಸಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ ರಮೇಶ್, ಆ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡು ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮತ್ತು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯಂತ್ರಿಸಲು ಜನಪ್ರತಿನಿಧಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಂದಲೂ ಆಗುತ್ತಿಲ್ಲ. ಚುನಾಯಿತ ಸದಸ್ಯರ ಕರೆಗಳನ್ನು ಸ್ವೀಕರಿಸದೆ ಕೆಲವರು ಉದ್ಧಟತನ ತೋರುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ಮಲ್ಲಿಕಾ, ಚಂದ್ರಶೇಖರ್ ಒತ್ತಾಯಿಸಿದರು.
ಕ್ರಮ ಕೈಗೊಳ್ಳಿ: ಸಿದ್ದಾಪುರದಲ್ಲಿ ಪತಿ, ಪತ್ನಿಯರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿದ್ದು, ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ನಾನು ದಾಖಲೆ ಸಮೇತ ವಿಷಯ ಬಹಿರಂಗಪಡಿಸಿದ್ದೆ. ಆ ಬಗ್ಗೆ ಯಾವ ಕ್ರಮ ಜರುಗಿಸಲಾಗಿದೆ ಎಂದು ಸದಸ್ಯ ಕೆ.ಎಲ್.ಲೋಕೇಶ್ ಪ್ರಶ್ನಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಇಒ ಎಂ.ಎಸ್.ರಮೇಶ್, ಆ ಸಂಬಂಧ ಗ್ರಾಪಂ ಹಾಗೂ ತೋಟಗಾರಿಕೆ ಇಲಾಖೆಯಿಂದ ಸಮಗ್ರ ವರದಿ ತರಿಸಿಕೊಳ್ಳುವುದರ ಜತೆಗೆ ನಾನೇ ಖುದ್ದು ಸ್ಥಳ ಪರಿಶೀಲಿಸಿ ತನಿಖೆಯ ನಂತರ ಶಿಸ್ತು ಕ್ರಮ ಜರುಗಿಸುತ್ತೇನೆಂದರು. ಸಭೆಯಲ್ಲಿ ಆರೋಗ್ಯಾಧಿಕಾರಿ ಕೆ.ಆರ್.ಮಹೇಂದ್ರಪ್ಪ, ವೈದ್ಯಾಧಿಕಾರಿ ಡಾ.ಶಿವಶಂಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅರ್ಕೇಶ್‌ಮೂರ್ತಿ, ಮಂಜುನಾಥ್, ಸದಸ್ಯರಾದ ಸಿದ್ದಮ್ಮ, ಸಾಕಮ್ಮ, ರತ್ನಮ್ಮ, ಸುನೀತಾ ಇತರರಿದ್ದರು.
ಅಧಿಕಾರಿಗಳೇ ಬರಬೇಕು, ಸಿಬ್ಬಂದಿ ಕಳುಹಿಸಬೇಡಿ: ಮುಂದಿನ ತಾಪಂ ಸಾಮಾನ್ಯ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹೊರತುಪಡಿಸಿ ಕಚೇರಿ ಸಿಬ್ಬಂದಿ ಬರಲು ಅವಕಾಶ ನೀಡುವುದಿಲ್ಲ ಎಂದು ತಾಲೂಕು ಪಂಚಾಯ್ತಿ ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೇಶ್ ತಿಳಿಸಿದರು.ಈವರೆಗೆ ಸಭೆಗಳಿಗೆ ಗೈರಾಗಿರುವ ಅಧಿಕಾರಿಗಳ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ ಬರೆಯಿರಿ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ರಮೇಶ್‌ಗೆ ತಾಕೀತು ಮಾಡಿದರು.