ಕಲಬುರಗಿ: ಸಾಮಾಜಿಕವಾಗಿ ನ್ಯಾಯ ಕಲ್ಪಿಸಿದ ವೀರಶೈವ-ಲಿಂಗಾಯತ ಸಮುದಾಯವೇ ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ್ದರಿಂದ ರಾಜ್ಯ ಸರ್ಕಾರ ತಡ ಮಾಡದೇ ಈ ಕೂಡಲೇ ವೀರಶೈವ- ಲಿಂಗಾಯತ ಹಾಗೂ ಸಮುದಾಯದ ಒಳಪಂಗಡಗಳನ್ನು ಹಿಂದುಳಿದ ವರ್ಗಗಳ ( ಒಬಿಸಿ) ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಬೇಕು ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಆಗ್ರಹಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಯುವ ಘಟಕ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ವೀರಶೈವ-ಲಿಂಗಾಯತ ಸಮಾಜ ಈ ಹಿಂದೆ ಸ್ವಲ್ಪ ಆರ್ಥಿಕ ಹಾಗೂ ಸಾಮಾಜಿಕವಾಗಿ ಉತ್ತಮವಾಗಿತ್ತು. ಆದರೆ ಕೃಷಿಯನ್ನೇ ನಂಬಿದ್ದ ಸಮುದಾಯವು ಕೃಷಿ ಕಾಯಕಕ್ಕೆ ದೊಡ್ಡ ಹೊಡೆತ ಪರಿಣಾಮ, ಸಮುದಾಯ ಹಾಗೂ ಒಳ ಪಂಗಡಗಳು ತೀವ್ರ ಕಷ್ಷಕ್ಕೆ ಒಳಗಾಗಿವೆ. ಹೀಗಾಗಿ ಒಬಿಸಿ ಪಟ್ಟಿಯಲ್ಲಿ ಸೇರಿಸುವುದರ ಜತೆಗೆ ಒಳ ಮೀಸಲಾತಿ ಕಲ್ಪಿಸಿದಲ್ಲಿ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ವೀರಶೈವ-ಲಿಂಗಾಯತ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರದ ಪರಿಣಾಮ ಕೇಂದ್ರದ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಹುದ್ದೆಗಳನ್ನು ಪಡೆಯಲಿಕ್ಕಾಗುತ್ತಿಲ್ಲ. ಅದೇ ರೀತಿ ಕೇಂದ್ರೀಯ ವಿವಿ ಸೇರಿ ಇತರ ಸಂಸ್ಥೆಗಳಲ್ಲಿ ಸಮಾಜದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮಾಜದ ತಾಳ್ಮೆ ಯನ್ನು ಪರೀಕ್ಷಿಸದೇ ಬೇಡಿಕೆ ಸಾಕಾರಗೊಳಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲು ಹಿಂದೇಟು ಹಾಕುವುದಿಲ್ಲ ಖಂಡ್ರೆ ಗುಡುಗಿದರು.
Related Articles
ವೀರಶೈವ-ಲಿಂಗಾಯತ ಸುಸಂಸ್ಕೃತಿಗೆ ಹೆಸರು ವಾಸಿಯಾಗಿದೆ. ಆದರೆ ಸಮಾಜದ ಯುವಕರು ಹಾದಿ ತಪ್ಪುತ್ತಿರುವ ಘಟನೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಮಕ್ಕಳ ವ್ಯಕ್ತಿತ್ವ ನಿರ್ಮಾಣದತ್ತ ಗಮನ ಕೊಡುವುದು ಸಹ ಮುಖ್ಯವಾಗಿದೆ ಎಂದು ಈಶ್ವರ ಖಂಡ್ರೆ ಕಿವಿ ಮಾತು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೈಗೊಂಡು ಕೋಟಿ ರೂ. ಪ್ರತಿಭಾ ಪುರಸ್ಕಾರ ವಿತರಿಸಲಾಗಿದೆ ಎಂದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಸಹ ಮಾತನಾಡಿ, ಈಗ ಸಮಾಜದ ವಿದ್ಯಾರ್ಥಿನಿ ನಿಲಯ ಆಗಿದೆ.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ನಿಲಯ ಸ್ಥಾಪನೆಗೆ ಸರ್ವ ನಿಟ್ಟಿನ ಸಹಕಾರ ನೀಡುವುದಾಗಿ ಹೇಳಿದರು.
ಮುಗುಳನಾಗಾಂವ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ, ದಯೆ, ಕರುಣೆ, ಅಂತಃಕರಣ ಹಾಗೂ ದಾಸೋಹ ವೀರಶೈವ- ಲಿಂಗಾಯತ ಸಮಾಜದ ಪ್ರಮುಖ ಧ್ಯೇಯಗಳಾಗಿವೆ ಎಂದರು.
ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಮಾದನಹಿಪ್ಪರಗಾ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಶರಣಬಸಪ್ಪ ಪಾಟೀಲ್ ದರ್ಶನಾಪುರ, ಎಂ.ವೈ. ಪಾಟೀಲ್, ಬಿ.ಜಿ.ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮುಖಂಡರಾದ ಅಪ್ಪಾರಾವ ಅಕ್ಕೋಣಿ, ಚಂದು ಪಾಟೀಲ್, ಶಿವಕಾಂತ ಮಹಾಜನ್, ಸಮಾಜದ ಯುವ ಘಟಕದ ಅಧ್ಯಕ್ಷ ಡಾ. ಶಂಭುಲಿಂಗ ಪಾಟೀಲ್ ಬಳಬಟ್ಟಿ ಸೇರಿದಂತೆ ಮುಂತಾದವರಿದ್ದರು.
ಅಖಿಲ ಭಾರತ ವೀರಶೈವ ಮಹಾಭಾದ ಜಿಲ್ಲಾಧ್ಯಕ್ಷ ಶರಣು ಮೋದಿ ಪ್ರಾಸ್ತಾವಿಕ ಮಾತನಾಡಿ, ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರ ಸರ್ಕಾರ ಹಿಂದಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಬೇಕೆಂದು ಸಮಾಜದ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಸಲ ಬೇಡಿಕೆ ಸಲ್ಲಿಸಲಾಗಿದ್ದರೂ ಸರ್ಕಾರಗಳು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದರು.