Advertisement

ಲೇಖಕಿಯರನ್ನು ಗುರುತಿಸಿ ಗೌರವಿಸಿ

10:07 AM Jul 28, 2019 | Suhan S |

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿರುವ ಲೇಖಕಿಯರನ್ನು ಗುರುತಿಸಿ ಗೌರವಿಸುವ ಕೆಲಸ ನಿರಂತರವಾಗಿ ನಡೆಯುವ ಅಗತ್ಯವಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಭಾಗ್ಯಲಕ್ಷ್ಮೀ ಮಗ್ಗೆ ಅವರ ಕುರಿತಾದ ‘ಸಿರಿಧರೆ’ ಅಭಿನಂದನಾ ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಯಾವುದೇ ಪ್ರತಿಫ‌ಲ ನಿರೀಕ್ಷಿಸದೆ ಸಾಹಿತ್ಯ ಲೋಕದಲ್ಲಿ ಹಲವು ಲೇಖಕಿಯರು ಉತ್ತಮವಾದ ಕೃತಿಗಳನ್ನು ರಚಿಸಿ ಹೆಸರು ಮಾಡಿದ್ದಾರೆ. ಈಗಲೂ ಕೂಡ ಎಲೆ ಮರೆ ಕಾಯಂತೆ ಸಾಹಿತ್ಯಕ್ಕಾಗಿ ದುಡಿಯುತ್ತಿದ್ದು, ಅಂತವರನ್ನು ಸಂಘ – ಸಂಸ್ಥೆಗಳು ಗುರುತಿಸಿ, ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಹಲವು ವರ್ಷಗಳ ಹಿಂದೆ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಮಹಿಳೆಯರು ಅಡುಗೆ ಮನೆ ಕೆಲಸ ಮಾಡುತ್ತಲೇ, ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು, ಪುರುಷರಂತೆ ಸಾಹಿತ್ಯ ರಚನೆಯಲ್ಲಿ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಾಗ್ಯಲಕ್ಷ್ಮೀ ಮಗ್ಗೆ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಇರುವ ತುಡಿತ ಮೆಚ್ಚುವಂತಹದ್ದು, ಈಗಾಗಲೇ ಕೆಲವು ಕೃತಿಗಳನ್ನು ಹೊರ ತಂದಿರುವ ಇಂತಹ ಹಿರಿಯ ಲೇಖಕಿಯನ್ನು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸುತ್ತಿರುವುದು ಖುಷಿ ಪಡುವ ವಿಚಾರವಾಗಿದೆ ಎಂದು ಹೇಳಿದರು.

ಹಿರಿಯ ವಿಮರ್ಶಕ ಬೈರಮಂಗಲ ರಾಮೇಗೌಡ ಮಾತನಾಡಿ, ಧಾವಂತದ ಬದುಕಿನಲ್ಲಿ ಸಿಲುಕಿ ನಲುಗಿ ಹೋಗಿರುವ ಯುವ ಸಮುದಾಯ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುತ್ತಿರುವುದು ಬೇಸರ ಪಡುವ ಸಂಗತಿ ಎಂದು ತಿಳಿಸಿದರು.

Advertisement

ಈ ಹಿಂದೆ ಮಹಿಳೆಯರು ಮನೆಯ ಕಟ್ಟುಪಾಡುಗಳನ್ನು ಬಿಟ್ಟು ಆಚೆ ಬರಲು ಹಿಂಜರಿಯುತ್ತಿದ್ದರು. ಅದನ್ನು ಲೆಕ್ಕಿಸದೇ ಹಲವು ಮಂದಿ ಮಹಿಳಾ ಸಾಹಿತಿಗಳು ಉತ್ತಮವಾದ ಕೃತಿಗಳನ್ನು ರಚಿಸಿದ್ದಾರೆ. ಅಂತವರ ಸಾಲಿಗೆ ಲೇಖಕಿ ಭಾಗ್ಯಲಕ್ಷ್ಮಿ ಮಗ್ಗೆ ಕೂಡ ಸೇರುತ್ತಾರೆ ಎಂದು ಹೇಳಿದರು.

ಇದೇ ವೇಳೆ ಕನ್ನಡ ಪರ ಹೋರಾಟಗಾರರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, ಗೌರವಾಧ್ಯಕ್ಷ ಎಂ.ತಿಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next