ಉಡುಪಿ: ಹೊಸ ಯೋಚನೆ, ಚಿಂತನೆಗಳುಳ್ಳ ಉತ್ಸಾಹಿಗಳಿಗೆ ವ್ಯವಹಾರ, ಉದ್ಯೋಗ ಮಾರುಕಟ್ಟೆಯಲ್ಲಿ ವಿಪುಲ ಅವಕಾಶಗಳಿವೆ. ಯುವಜನತೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಅದರಂತೆ ಮುನ್ನಡೆಯುವುದು ಅವಶ್ಯ ಎಂದು ಡೆಲಾಯ್r ಇಂಡಿಯಾದ ಚೀಫ್ ಟ್ಯಾಲೆಂಟ್ ಆಫೀಸರ್ ಎಸ್.ವಿ. ನಾಥನ್ ಹೇಳಿದರು.
ಶನಿವಾರ ಕೆಎಂಸಿ ಗ್ರೀನ್ಸ್ ನಲ್ಲಿ ಜರಗಿದ ಮಣಿಪಾಲ “ಟ್ಯಾಪ್ಮಿ’ಯ(ಟಿಎಂಎಂ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್) 33ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹೊಸದಾಗಿ ಏನನ್ನಾದರೂ ನೀಡಬಲ್ಲ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಮತ್ತು ಆತ್ಮವಿಶ್ವಾಸದ ಯುವಜನರನ್ನು ಜಾಗತಿಕ ಮಟ್ಟದ ಸಂಸ್ಥೆಗಳು ನಿರೀಕ್ಷಿಸುತ್ತಿವೆ. ಇತರರಿಂದ ಕಲಿಯುವುದು, ತಮಗೆ ಉತ್ತಮ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ವಿದ್ಯಾರ್ಥಿಗಳು, ಸಾಧನೆಯ ಹಾದಿಯಲ್ಲಿರುವ ಯುವಜನತೆಯ ಕೆಲಸ. ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಜಗತ್ತಿನ ಪ್ರಸಿದ್ಧ ಬಿ-ಸ್ಕೂಲ್‌ಗಳಲ್ಲಿ ಒಂದಾದ “ಟ್ಯಾಪ್ಮಿ’ ಇಂತಹ ಸಾಧಕರನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
“ಮಾಹೆ’ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಪ್ರೊ| ಮಧು ವೀರರಾಘವನ್ ಸ್ವಾಗತಿಸಿದರು. ಅಸೋಸಿಯೇಟ್ ಡೀನ್ ಪ್ರೊ| ವಿಶ್ವನಾಥನ್ ವಂದಿಸಿದರು. 460 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.