ವಾಷಿಂಗ್ಟನ್: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಪ್ರದೇಶ ಎಂದು ಅಮೆರಿಕ ಗುರುತಿಸಿದ್ದು, ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತದ ಪ್ರದೇಶ ತನಗೆ ಸೇರಿದ್ದೆಂದು ಏಕಪಕ್ಷೀಯವಾಗಿ ಗುರುತಿಸುವ ಚೀನಾದ ಹೇಳಿಕೆಯನ್ನು ಬಲವಾಗಿ ವಿರೋಧಿಸುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕೃತ ವಕ್ತಾರ ಪ್ರಕಟನೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಫಾರಿನ್ ಟೂರ್ ಹೋಗಲು ಕಿಡ್ನಾಪ್ ನಾಟಕ… ತಂದೆಯ ಬಳಿ 30 ಲಕ್ಷಕ್ಕೆ ಬೇಡಿಕೆ ಇಟ್ಟ ಮಗಳು…
ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಚೀನಾ ಆಕ್ಷೇಪ ವ್ಯಕ್ತಪಡಿಸಿ, ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಮೆರಿಕ ತನ್ನ ನಿಲುವನ್ನು ಪ್ರಕಟಿಸಿದೆ.
ಕ್ಸಿಜಾಂಗ್ ನ ದಕ್ಷಿಣ ಭಾಗ (ಟಿಬೆಟ್ ನ ಚೀನಿ ಹೆಸರು) ಚೀನಾದ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ಭಾರತ ಅಕ್ರಮವಾಗಿ ಅರುಣಾಚಲ ಪ್ರದೇಶವನ್ನು ಸ್ವಯಂಘೋಷಿತವಾಗಿ ತನ್ನ ಭಾಗ ಎಂದು ಕರೆಯುವುದಕ್ಕೆ ಬೀಜಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸುವುದಾಗಿ ತಿಳಿಸಿದೆ.
ಭಾರತದ ರಾಜಕೀಯ ಮುಖಂಡರು ಅರುಣಾಚಲಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನಿರಂತರವಾಗಿ ಚೀನಾ ವಿರೋಧಿಸುತ್ತಿದ್ದು, ಈ ಪ್ರದೇಶಕ್ಕೆ ಜಂಗ್ನಾನ್ ಎಂದು ಹೆಸರಿಟ್ಟಿರುವುದಾಗಿ ವರದಿ ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 9ರಂದು ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದ ಸೇಲಾ ಪಾಸ್ ನಲ್ಲಿ ನಿರ್ಮಿಸಿದ್ದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿಯೂ ಚೀನಾ ವಿರೋಧ ವ್ಯಕ್ತಪಡಿಸುವ ಮೂಲಕ ಉದ್ಧಟತನ ಪ್ರದರ್ಶಿಸಿತ್ತು.