Advertisement

ರೇಷನ್‌ ಕಾರ್ಡ್‌ ಅರ್ಜಿಗಳ ವಿಲೇವಾರಿಗೆ “ಗ್ರಹಣ’

06:00 AM Aug 22, 2018 | |

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ಅರ್ಜಿಗಳ ವಿಲೇವಾರಿಗೆ “ಗ್ರಹಣ’ ಹಿಡಿದಿದೆ. ರೇಷನ್‌ ಕಾರ್ಡ್‌ ಕೋರಿ ಸಲ್ಲಿಕೆಯಾದ 61 ಸಾವಿರ ಹೊಸ ಅರ್ಜಿಗಳಿಗೆ ಮುಕ್ತಿ ಸಿಕ್ಕಿಲ್ಲ. ಹಾಗಾಗಿ, ಕಳೆದ ಮೂರು ತಿಂಗಳಿಂದ ಒಂದೇ ಒಂದು ಬಿಪಿಎಲ್‌ ಕಾರ್ಡ್‌ ಕೂಡ ಫ‌ಲಾನುಭವಿಗಳ ಕೈ ಸೇರಿಲ್ಲ. ಈ ಮಧ್ಯೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪ್ರದೇಶಗಳಲ್ಲಿ ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸ್ವೀಕಾರ ಸ್ಥಗಿತಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿ ಸ್ವೀಕಾರ ನಡೆಯುತ್ತಿದ್ದರೂ ಅವುಗಳ ವಿಲೇವಾರಿ ಮಾತ್ರ ನಿಧಾನಗತಿಯಲ್ಲಿದೆ.

Advertisement

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಷ ಮಾರ್ಚ್‌ ತಿಂಗಳಿಂದ ಹೊಸ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಲಾಗಿತ್ತು. ಮತ್ತೆ ಮೇ ತಿಂಗಳ ಕೊನೆಯಿಂದ ಹೊಸ ಅರ್ಜಿಗಳ ಸ್ವೀಕಾರ ಪ್ರಾರಂಭಗೊಂಡಿತು. ಅದರಂತೆ, ಇಲ್ಲಿವರೆಗೆ 61 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈತನಕ ಒಬ್ಬರಿಗೂ ಹೊಸ ರೇಷನ್‌ ಕಾರ್ಡ್‌ ಸಿಕ್ಕಿಲ್ಲ. ಆಹಾರ ಇಲಾಖೆಯ ಮಾಹಿತಿ ಪ್ರಕಾರ ಹೊಸ ರೇಷನ್‌ ಕಾರ್ಡ್‌ ಕೋರಿ ಇಲ್ಲಿಯವರೆಗೆ ಎಎವೈ, ಬಿಪಿಎಲ್‌, ಎಪಿಎಲ್‌ ಸೇರಿ ಒಟ್ಟು 61 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 58 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಹಳೆಯ ಕೆಲವು ಅರ್ಜಿಗಳು ಸೇರಿಕೊಂಡಂತೆ 60 ಸಾವಿರ ರೇಷನ್‌ ಕಾರ್ಡ್‌ಗಳನ್ನು ಈಗ ಮುದ್ರಣಕ್ಕೆ ಕಳಿಸಲಾಗಿದೆ. ಇಲ್ಲಿ ತನಕ ಒಂದೇ ಒಂದು ರೇಷನ್‌ ಕಾರ್ಡ್‌ ಪ್ರಿಂಟ್‌ ಆಗಿಲ್ಲ, ಪೋಸ್ಟ್‌ ಆಗಿಲ್ಲ ಮತ್ತು ಫ‌ಲಾನುಭವಿ ಕೈಗೆ ಸಿಕ್ಕಿಲ್ಲ.

ಶೀಘ್ರ ಮುಕ್ತಿ: ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಬಿಪಿಎಲ್‌ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಎಪಿಎಲ್‌ ಕಾರ್ಡ್‌ಗಳಿಗೆ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.  ಚುನಾವಣೆ ಮತ್ತಿತರ ಕಾರಣಕ್ಕೆ ಅರ್ಜಿಗಳ ವಿಲೇವಾರಿ ಒಂದಿಷ್ಟು ನಿಧಾನವಾಗಿತ್ತು. ಈಗ ಚುರುಕುಗೊಳಿಸಲಾಗಿದೆ. ಹೊಸದಾಗಿ ಸಲ್ಲಿಕೆ  ಯಾಗುವ ಅರ್ಜಿಗಳು ನೇರವಾಗಿ ಕಂದಾಯ ಇಲಾಖೆಗೆ ಹೋಗುತ್ತವೆ. ಆ ಆರ್ಜಿಯನ್ನು ಕಂದಾಯ ಇಲಾಖೆ ಸಂಬಂಧಪಟ್ಟ ಆದಾಯ ಪ್ರಮಾಣ ಪತ್ರದೊಂದಿಗೆ ತಾಳೆ ಹಾಕಿದ ಬಳಿಕ ಅದು ಅರ್ಹವಾಗಿದ್ದರೆ, ಅದನ್ನು ಆಹಾರ ಇಲಾಖೆಗೆ ಕಳಿಸಿಕೊಡುತ್ತದೆ. ಪರಿಶೀಲಿಸಿದ
ಬಳಿಕ ಆಹಾರ ಇಲಾಖೆ, ರೇಷನ್‌ ಕಾರ್ಡ್‌ ಸಿದಟಛಿಪಡಿಸಿ ಪ್ರಿಂಟ್‌ಗೆ ಕಳಿಸುತ್ತದೆ. ಈಗಾಗಲೇ ಹೊಸದಾಗಿ ಬಂದ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ರೇಷನ್‌ ಕಾರ್ಡ್‌ಗಳನ್ನು ಪ್ರಿಂಟ್‌ಗೆ ಕಳುಹಿಸಿಕೊಡಲಾಗಿದೆ. ಆದಷ್ಟು ಬೇಗ ಹೊಸ ರೇಷನ್‌ ಕಾರ್ಡ್‌ಗಳನ್ನು ಫ‌ಲಾನುಭವಿಯ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಪಟ್ಟಣ ಪ್ರದೇಶಗಳಲ್ಲಿ ಅರ್ಜಿ ಸ್ವೀಕಾರ ಸ್ಥಗಿತ 
ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಗ್ರಾಮೀಣ ಭಾಗದಲ್ಲಿ ನಡೆದಿದೆ. ಆದರೆ,ಕಳೆದೊಂದು ತಿಂಗಳಿಂದ ಪಟ್ಟಣ ಪ್ರದೇಶಗಳಲ್ಲಿ ಅರ್ಜಿ ಸ್ವೀಕಾರ ಸ್ಥಗಿತಗೊಂಡಿದೆ ಎನ್ನಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪ್ರದೇಶಗಳಲ್ಲಿ ಹೊಸ ಅರ್ಜಿಗಳನ್ನು  ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿ ದೆ. ಚುನಾವಣೆ ಮುಗಿದ ಬಳಿಕ ಅಂದರೆ, ಆ.31ರ ನಂತರ ಅರ್ಜಿ ಸ್ವೀಕಾರವನ್ನು ಪುನಃ ಆರಂಭಿಸಲಾಗುವುದು. ಆದರೆ, ಗ್ರಾಮೀಣ ಭಾಗದಲ್ಲಿ ಅರ್ಜಿ ಸ್ವೀಕಾರ ಎಂದಿನಂತೆ ಮುಂದುವರಿದಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ರಾಯಚೂರಿನಲ್ಲಿ ಅತಿ ಹೆಚ್ಚು ಅರ್ಜಿ ಬಾಕಿ
ಕಳೆದ ಮೂರು ತಿಂಗಳಿಂದ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು 4,772, ಬೆಳಗಾವಿಯಲ್ಲಿ 3,764, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ತಲಾ
3,687, ವಿಜಯಪುರದಲ್ಲಿ 3,049 ಅರ್ಜಿಗಳು ಬಾಕಿ ಇವೆ. ಉಳಿದಂತೆ ವಿವಿಧ ಜಿಲ್ಲೆಗಳಲ್ಲಿ 1 ಸಾವಿರದಿಂದ 3 ಸಾವಿರದವರೆಗೆ ಅರ್ಜಿಗಳು
ವಿಲೇವಾರಿಯಾಗಬೇಕಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಗದಗ, ಕೊಡಗು, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಇರುವ ಅರ್ಜಿಗಳ ಸಂಖ್ಯೆ 1  ಸಾವಿರಕ್ಕಿಂತ ಕಡಿಮೆಯಿದೆ.

Advertisement

ರಫಿಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next