ಕಾನ್ಪುರ್, ಕುನೇರು ಹಾಗೂ ಉಜ್ಜೈನ್ ನಲ್ಲಿ ಸಂಭವಿಸಿದ್ದ ರೈಲು ಸ್ಫೋಟ ಮತ್ತು ಹಳಿ ತಪ್ಪಿರುವ ಘಟನೆ ಭಯೋತ್ಪಾದಕರ ವಿಧ್ವಂಸಕ ಕೃತ್ಯ ಎಂಬುದಾಗಿ ಶಂಕಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ ಗೆ ತಿಳಿಸಿದ್ದು, ಈ ಮೂರು ಘಟನೆಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ತನಿಖೆ ನಡೆಸುತ್ತಿದೆ.
2016ರ ನವೆಂಬರ್ 20ರಂದು ಕಾನ್ಪುರದಲ್ಲಿ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿ ಸಂಭವಿಸಿದ ದುರಂತದಲ್ಲಿ 148 ಪ್ರಯಾಣಿಕರು ಕೊನೆಯುಸಿರೆಳೆದಿದ್ದರು. ಏತನ್ಮಧ್ಯೆ ಎನ್ ಐಎಗೆ ಈ ವಿಧ್ವಂಸಕ ಕೃತ್ಯದ ಹಿಂದಿನ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಎನ್ ಐಎ ಇದೀಗ ಐಐಟಿ ವರದಿಗಾಗಿ ಕಾಯುತ್ತಿದೆ. ಆದರೆ ಇದೊಂದು ವ್ಯವಸ್ಥಿತ ವಿಧ್ವಂಸಕ ಕೃತ್ಯವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ:ಬಾಲಸೋರ್ ಭೀಕರ ದುರಂತ: ರೈಲು ಅಪಘಾತ ತಪ್ಪಿಸುವ ಕವಚ ತಂತ್ರಜ್ಞಾನ ಕೆಲಸ ಮಾಡಲಿಲ್ಲವೇ?
ಕಾನ್ಪುರ್ ರೈಲು ಹಳಿತಪ್ಪಿರುವ ವಿಧ್ವಂಸಕ ಕೃತ್ಯದ ಹಿಂದೆ ಉಜ್ಜೈನ್ ರೈಲು ಸ್ಫೋಟ ಘಟನೆಯಲ್ಲಿ ಶಾಮೀಲಾಗಿದ್ದ ಅತೀಫ್ ಮುಝಾಫರ್ ನೇತೃತ್ವದ ಐಸಿಸ್ ಕೈವಾಡ ಇದೆಯೇ ಎಂಬ ಬಗ್ಗೆ ಎನ್ ಐಎ ತನಿಖೆ ನಡೆಸುತ್ತಿದೆ.
Related Articles
ಶುಕ್ರವಾರ ರಾಜ್ಯಸಭೆಯಲ್ಲಿ ಹಿರಿಯ ರಾಜಕಾರಣಿ ಕಪಿಲ್ ಸಿಬಲ್ ಎತ್ತಿರುವ ಪ್ರಶ್ನೆಗೆ ರೈಲ್ವೆ ಸಚಿವಾಲಯ ನೀಡಿರುವ ಲಿಖಿತ ಉತ್ತರದಲ್ಲಿ ವಿಧ್ವಂಸಕ ಕೃತ್ಯದ ಹಿಂದೆ ಉಗ್ರರ ಕೈವಾಡ ಇದ್ದಿರುವುದಾಗಿ ತಿಳಿಸಿದೆ.
2023ರ ಜನವರಿ 21ರಂದು ಆಂಧ್ರಪ್ರದೇಶದ ಕುನೇರುವಿನಲ್ಲಿಸಂಭವಿಸಿದ್ದ ಹೀರಾಖಂಡ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದ ದುರಂತದಲ್ಲಿ 41 ಪ್ರಯಾಣಿಕರು ಕೊನೆಯುಸಿರೆಳೆದಿದ್ದು, ಈ ಘಟನೆಯಲ್ಲಿಯೂ ಎನ್ ಐಎ ಐಐಟಿ ಕಾನ್ಪುರ್ ವರದಿಗಾಗಿ ಕಾಯುತ್ತಿದೆ. ಇದು ಕೂಡಾ ವಿಧ್ವಂಸಕ ಕೃತ್ಯವಾಗಿದೆಯೇ ಎಂಬ ಶಂಕೆಯೊಂದಿಗೆ ಎನ್ ಐಎ ತನಿಖೆ ನಡೆಸುತ್ತಿದೆ.
2017ರ ಮಾರ್ಚ್ 3ರಂದು ಭೋಪಾಲ್-ಉಜ್ಜೈನ್ ರೈಲು ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸ್ ಪ್ರಭಾವಿತ ಆರು ಮಂದಿ ಶಂಕಿತರನ್ನು ಎನ್ ಐಎ ಬಂಧಿಸಿತ್ತು. ರೈಲ್ವೆ ಹಳಿ ಸೇರಿದಂತೆ ಭಾರತೀಯ ರೈಲ್ವೆ ವ್ಯವಸ್ಥೆಗೆ ಬೆದರಿಕೆ ಇದ್ದಿರುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ರೈಲ್ವೆ ಹಳಿ ದುರಂತ ಮತ್ತು ಸ್ಫೋಟ ಘಟನೆಯ ನಂತರ ಭಯೋತ್ಪಾದಕರ ದುಷ್ಕೃತ್ಯ ನಿಗ್ರಹಕ್ಕಾಗಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ಮೂಲಭೂತ ಸೌಕರ್ಯ, ರೈಲ್ವೆ ಹಳಿ ಹಾಗೂ ರೈಲ್ವೆ ನಿಲ್ದಾಣ ಭದ್ರತಾ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ, ಗೃಹ ಇಲಾಖೆಯ ಜೊತೆ ರೈಲ್ವೆ ಸಚಿವಾಲಯ ಸಮರ್ಪಕ ಸಂವಹನ ನಡೆಸುತ್ತಿರುವುದಾಗಿ ಲಿಖಿತ ಉತ್ತರದಲ್ಲಿ ತಿಳಿಸಿದೆ.
ರೈಲ್ವೆ ಹಳಿ ಮತ್ತು ಪ್ರಯಾಣಿಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ರೈಲ್ವೆ ಸಚಿವರು ಮನವಿ ಮಾಡಿಕೊಂಡಿದ್ದಾರೆ. ಆಯ್ದ ರೈಲ್ವೆ ಮಾರ್ಗಗಳಲ್ಲಿ ಪ್ರತಿದಿನ ಸುಮಾರು 2,500 ರೈಲುಗಳಿಗೆ ಆರ್ ಪಿಎಫ್ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿಯಾಗಿ ವಿವಿಧ ರಾಜ್ಯಗಳಲ್ಲಿ ಪ್ರತಿದಿನ 2,200 ರೈಲುಗಳಿಗೆ ಜಿಆರ್ ಪಿ(ಗವರ್ನಮೆಂಟ್ ರೈಲ್ವೆ ಪೊಲೀಸ್) ಬೆಂಗಾವಲು ಹೊಂದಿರುವುದಾಗಿ ಸಚಿವಾಲಯ ಅಂಕಿಅಂಶದಲ್ಲಿ ತಿಳಿಸಿದೆ.
ಶುಕ್ರವಾರ ಸಂಜೆ 7ಗಂಟೆ ಸುಮಾರಿಗೆ ಪಶ್ಚಿಮಬಂಗಾಳದ ಬಾಲಸೋರ್ ನಲ್ಲಿ ಏಕಾಏಕಿ ಮೂರು ರೈಲುಗಳು ಡಿಕ್ಕಿಯಾದ ಪರಿಣಾಮ 280ಕ್ಕೂ ಅಧಿಕ ಪ್ರಯಾಣಿಕರು ಕೊನೆಯುಸಿರೆಳೆದಿದ್ದು ಸಾವಿರ ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ರೈಲ್ವೆ ಹಳಿತಪ್ಪಿ ಸಂಭವಿಸಿರುವ ದುರಂತ ವಿಧ್ವಂಸಕ ಕೃತ್ಯವಾಗಿದೆಯೇ ಎಂಬ ಚರ್ಚೆ ನಡೆಯುತ್ತಿರುವುದಾಗಿ ವರದಿ ಹೇಳಿದೆ.