ಬೆಂಗಳೂರು: ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಅರವಿಂದ ಬೆಲ್ಲದ ಅವರದ್ದು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ ಬೆಲ್ಲದ ಅವರನ್ನು ಕೆಲವರು ಮುಂದಿನ ಮುಖ್ಯಮಂತ್ರಿ ಎಂದೂ ಬಿಂಬಿಸುತ್ತಿದ್ದಾರೆ. ದೆಹಲಿ ಭೇಟಿ- ಆರ್ ಎಸ್ಎಸ್ ನಾಯಕ ಭೇಟಿ ಎಂದು ಸದ್ಯ ಕೆಲವು ದಿನಗಳಿಂದ ಪ್ರಚಾರದಲ್ಲಿರುವ ಬೆಲ್ಲದ ಅವರಿಗೆ ವಂಚಕ ಜೈಲಿನಲ್ಲಿರುವ ವಂಚಕ ಯುವರಾಜ್ ಸ್ವಾಮಿಯಿಂದ ಕರೆಗಳು ಬರುತ್ತಿದೆಯಂತೆ!
ಈ ಬಗ್ಗೆ ಸ್ವತಃ ಶಾಸಕ ಅರವಿಂದ ಬೆಲ್ಲದ ಅವರು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. “ನನಗೆ ಇತ್ತೀಚೆಗೆ ಒಂದು ದೂರವಾಣಿ ಸಂಖ್ಯೆಯಿಂದ ಪದೇ ಪದೇ ಕರೆ ಬರುತ್ತಿದ್ದು, ಯಾರೆಂದು ಕೇಳಿದರೆ, ‘ನಾನು ಸ್ವಾಮಿ ಅಂತಾ ಮಾತನಾಡುವುದು, ಯಾವ ಸ್ವಾಮಿ ಎಂದು ಕೇಳಿದರೆ ‘ಯುವರಾಜ್ ಸ್ವಾಮಿ’ ಎಂದು ಹೆಸರು ಹೇಳುತ್ತಿದ್ದಾನೆ. ಆದರೆ ಆತ ಜೈಲಿನಲ್ಲಿದ್ದಾನೆ. ನನಗೆ ಮಾತ್ರವಲ್ಲದೆ ನನ್ನ ಆಪ್ತ ಸಹಾಯಕರ ದೂರವಾಣಿಗೂ ಪದೇ ಪದೇ ಕರೆಗಳು ಬರುತ್ತಿದೆ” ಎಂದು ಬೆಲ್ಲದ ಅವರು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಎಸ್ ಬಿ ಐ ಸೇರಿ ಹಲವು ಬ್ಯಾಂಕ್ ಗಳೊಂದಿಗೆ ಟೋಕನೈಸೇಶನ್ ಸೌಲಭ್ಯಕ್ಕೆ ಮುಂದಾದ ಗೂಗಲ್ ಪೇ..!
ಈ ಕರೆಗಳ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದ್ದು, ನಮ್ಮ ಮೇಲೆ ಇಲ್ಲ ಸಲ್ಲದ ಪಿತೂರಿ ನಡೆಸುತ್ತಿದ್ದು, ನಮ್ಮ ಮೊಬೈಲ್ ಟ್ಯಾಪ್ ಆಗಿ ಕದ್ದಾಲಿಕೆಯಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದದು ಅರವಿಂದ ಬೆಲ್ಲದ ಪತ್ರದಲ್ಲಿ ಬರೆದಿದ್ದಾರೆ. ಮಾತ್ರವಲ್ಲದೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಯಾರು ಈ ಯುವರಾಜ್ ಸ್ವಾಮಿ: ಹಲವು ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿಕೊಂಡು ರಾಜ್ಯಸಭೆ ಸೀಟು, ರಾಜಕೀಯ ಹುದ್ದೆ, ಉನ್ನತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಈತ ಸದ್ಯ ಕಂಬಿ ಎಣಿಸುತ್ತಿದ್ದಾನೆ. ಹಲವರಿಂದ ಕೋಟಿಗಟ್ಟಲೆ ಹಣ ಪಡೆದು ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾನೆ.