ದಾವಣಗೆರೆ: ಯುವ ಪೀಳಿಗೆ ದೇಶಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಆದರ್ಶವಾಗಿ ಪರಿಗಣಿಸಬೇಕೆ ಹೊರತು ಸಿನಿಮಾ ತಾರೆಯರನ್ನಲ್ಲ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರಾಧ್ಯಕ್ಷ ಪವನ್ ರೇವಣಕರ್ ಹೇಳಿದರು.
ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಪೀಳಿಗೆಗೆ ತಮ್ಮ ಪೋಷಕರ ಹುಟ್ಟುಹಬ್ಬ, ಮದುವೆ ದಿನಗಳು ನೆನಪಿನಲ್ಲಿರುವುದಿಲ್ಲ. ಬದಲಿಗೆ ಸಿನಿಮಾ ತಾರೆಯರ ಜನ್ಮದಿನ ನೆನಪಿರುತ್ತದೆ. ಏಕೆಂದರೆ ಅವರ ಮೊದಲ ಆದ್ಯತೆ ತಾರೆಯರಾಗಿದ್ದಾರೆ. ಒಬ್ಬ ಯೋಧ ತನ್ನ ಪ್ರಾಣದ ಹಂಗು ತೊರೆದು ಗಡಿ ರಕ್ಷಣೆ ಮಾಡಿ, ರಜೆಗೆಂದು ಅಥವಾ ನಿವೃತ್ತಿಯ ನಂತರ ತನ್ನ ಊರಿಗೆ ಆಗಮಿಸಿದರೆ ಅವರನ್ನು ಬರ ಮಾಡಿಕೊಳ್ಳಲು ಹತ್ತು ಜನರೂ ಇರುವುದಿಲ್ಲ. ಅದೇ ಸಿನಿಮಾ ತಾರೆಯರು ಬರುತ್ತಾರೆ ಎಂದರೆ ಹಾಲಿನ ಅಭಿಷೇಕ ಮಾಡುವುದು ಎಂದು ವಿಷಾದನೀಯ ಎಂದರು.
ಇದನ್ನೂ ಓದಿ:ಲಂಕಾಸುರನ ಜೊತೆ ಯೋಗಿ
ಶಿಕ್ಷಕರು, ಪೊಲೀಸ್, ವೈದ್ಯರಂತೆ ಸಿನಿಮಾದಲ್ಲಿ ನಟನೆ ಮಾಡುವುದು ಕೂಡ ಒಂದು ವೃತ್ತಿ. ಆ ಮೂಲಕ ಅವರು ದುಡಿಯುತ್ತಾರೆ. ನಾವು ಅವರಿಂದ ಮನರಂಜನೆ ಪಡೆಯುತ್ತೇವೆ. ಅದು ಕೇವಲ ಮನರಂಜನೆ ಆಗಿರಬೇಕೇ ಹೊರತು ಅವರ ಪ್ರಭಾವ ನಮ್ಮ ಜೀವನದ ಮೇಲೆ ಬೀಳುವಂತಿರಬಾರದು. ನಾವು ಅವರಿಂದ ಪ್ರಭಾವಿತರಾದಷ್ಟು ದೇಶಕ್ಕೆ ನಮ್ಮ ಕೊಡುಗೆ ಶೂನ್ಯವಾಗುತ್ತಾ ನಮ್ಮ ದಾರಿ ತಪ್ಪಿಸುತ್ತದೆ ಎಂದು ಎಚ್ಚರಿಸಿದರು. ಶಿಕ್ಷಣದ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆ, ವಿಂಗ್ ಕಮಾಂಡರ್ ಅಂಜನಿ ಗುಪ್ತ, ವಿಕಲತೆಯಲ್ಲೂ ಛಲ ಬಿಡದೇ ಹಿಮಾಲಯ ಪರ್ವತ ಏರಿದ ಅರುಣಿಮಾ ಸಿನ್ಹ ಇಂತಹವರನ್ನು ಯುವ ಜನಾಂಗ ಸ್ಫೂರ್ತಿಯಾಗಿಸಿಕೊಳ್ಳಬೇಕು. ನನ್ನ ಮನೆ, ಊರು, ಕೇರಿಯ ಪ್ರಗತಿಯ ಬಗ್ಗೆ ಯೋಚಿಸುವುದೇ ನಿಜವಾದ ಯುವಶಕ್ತಿ. ಯುವ ಜನಾಂಗಕ್ಕೆ ಸ್ಫೂರ್ತಿ ತುಂಬುವ ಉದ್ದೇಶದಿಂದಲೇ ಸ್ಫೂರ್ತಿಯ ಸೆಲೆಯಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಈಶ್ವರಮ್ಮ ಪ್ರೌಢಶಾಲೆಯ ಶಿಕ್ಷಕಿ ಬಿ. ಶ್ರೀದೇವಿ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯೆ ಡಾ| ಶಕುಂತಲಾ ಎನ್. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಎಂ.ಪಿ. ಭೀಮಪ್ಪ, ಮಲ್ಲಿಕಾರ್ಜುನ ಗೌಡ, ಕೆ.ಬಿ. ವಿದ್ಯಾ, ಡಾ| ಜಿ. ಕಾವ್ಯಶ್ರೀ ಉಪಸ್ಥಿತರಿದ್ದರು.