ನಗುವ ಮನಸಿಗೆ ಕತ್ತಲೆ ಆವರಿಸಿತ್ತು. ನೆರಳು ನನ್ನ ಬಿಟ್ಟು ಮುಂದೆ ಓಡಿದಂತೆ ಅನಿಸುತ್ತಿತ್ತು. ಪ್ರೀತಿಯ ಮೋಸದ ಬಲೆಯಲ್ಲಿ ಅವನು ಕೈಗೆ ನೋವಿನ ಉಡುಗೊರೆಯನ್ನು ಕೊಟ್ಟು ಹೋಗಿಬಿಟ್ಟ. ಮನದಂಗಳದಲ್ಲಿ ಚಂದದೊಂದು ರಂಗೋಲಿಯಿಲ್ಲ. ನೀರು ಹಾಕಿ ಗುಡಿಸಿ ಸಾರಿಸುವವರಿಲ್ಲ. ದುಗುಡವ ಅರಿತು ಸಂತೈಸಿ ನಾಲ್ಕಾರು ಬುದ್ಧಿಮಾತುಗಳಾಡುವ ಹಿತೈಷಿಗಳಿಲ್ಲ. ಇಂಥ ಜೀವನದ ಪರಿಯಲ್ಲೊಂದು ಘಟನೆ. ಮನಸ್ಸಿಗೆ ಘಾಸಿ ಮಾಡುವಷ್ಟರ ಮಟ್ಟಿಗೆ. ಮಾಸದ ನೆನಪುಗಳ ಜೊತೆಯಲ್ಲಿ.
ಕಾಲೇಜಿನಲ್ಲಿ ನಾನು ಯಾರ ಬಳಿಯೂ ಅಷ್ಟು ಮಾತನಾಡುತ್ತಿರಲಿಲ್ಲ. ನಾನಾಯ್ತು ನನ್ನ ಓದಾಯಿತು ಎಂದು ಇದ್ದ ಹುಡುಗಿ. ಆ ಒಂದು ದಿನ ಅವನು ಬಂದು ಮಾತನಾಡಿಸಿದ. ನೀನ್ಯಾಕೆ ಯಾವಾಗಲೂ ಮೌನಿಯಾಗಿರ್ತೀಯಾ? ಮಾತಾಡೋದೇ ಇಲ್ವಲ್ಲಾ. ನಿನ್ನ ಈ ಸೈಲೆಂಟೇ ನನಗೆ ಇಷ್ಟ ಆದದ್ದು ಎಂದು ಹೇಳಿ ಹೋಗಿಬಿಟ್ಟ. ಯಾವ ಅರ್ಥದಲ್ಲಿ ಹೇಳಿದನೋ ಗೊತ್ತಿಲ್ಲ. ಆ ಬಾರಿಯೂ ಸೈಲೆಂಟ್ ಆಗೇ ಇದ್ದೆ. ದಿನ ಕಳೀತಾ ಇತ್ತು. ದಿನವೂ ಬಳಿ ಬಂದು ಹಾಯ… ಅನ್ನುವವನು. ಸ್ಮೈಲ್ ಮಾಡಿ ಹೋಗುವವನು. ಯಾವಾಗಲೂ ನಗುತ್ತಾ ಖುಷಿಯಿಂದ ಎಲ್ಲರೊಟ್ಟಿಗೆ ಮಾತಾಡ್ತಾ ಇದ್ದ. ಅದನ್ನ ನೋಡ್ತಾ ಇದ್ದ ನನಗೆ ಅವನ ಕುರಿತು ಒಂದಿಷ್ಟು ಒಳ್ಳೆಯ ಭಾವನೆಗಳು ಚಿಗುರೊಡೆಯತೊಡಗಿತ್ತು. ದಿನೇ ದಿನೇ ಕಳೆಯುತ್ತಾ ನಾನು ಅವನೊಟ್ಟಿಗೆ ಮಾತನಾಡ್ಬೇಕು ಅನ್ನಿಸ್ತಿತ್ತು.
ಆ ದಿನ ಕಾಲೇಜಿಗೆ ರಜಾ. ಮಾರ್ಕೆಟ್‌ಗೆ ತರಕಾರಿ ತಗೋಳ್ಳೋಕೆ ಹೋಗುತ್ತಿರುವಾಗ ನೆನೆದವರ ಮನದಲ್ಲಿ ಎಂಬಂತೆ ಎದುರಿಗೆ ಪ್ರತ್ಯಕ್ಷ. ನಾನೂ ಬರ್ಲಾ ನಿನ್ ಜೊತೆ ಅಂದ. ಏನೂ ಉತ್ತರ ಕೊಡ್ದೆ ಹೋದ್ರೂ ಕೂಡಾ ನನ್ನ ಜೊತೆಯೇ ಹೆಜ್ಜೆ ಹಾಕಿದ. ಪ್ರತಿ ಹೆಜ್ಜೆಯಲ್ಲೂ ಪ್ರೀತಿಯ ಗೂಡು ಕಟ್ಟುತ್ತಾ ಹೊರಟಿದ್ದ. ಮನದ ತುಂಬ ಅವನೇ ತುಂಬಿಕೊಂಡಿದ್ದ. ಅವನ ನಗುವು ಮನಸಲ್ಲಿ ಅಚ್ಚಳಿಯದೇ ಉಳಿದಿತು ನನ್ನ ಈ ಭಾವನೆಯನ್ನು ಅವನಿಗೆ ಹೇಳಬೇಕೆಂಬ ತವಕ. ಆದರೆ, ಧೈರ್ಯ ಎಂಬುದು ಹಿಂದೇಟು ಹಾಕುತ್ತಿತ್ತು ಪ್ರತಿ ಬಾರಿ.
ಇದೆಲ್ಲ ಗೊತ್ತಿದ್ದರೂ, ಬಣ್ಣದ ಮಾತುಗಳಿಂದಲೇ ನನ್ನನ್ನು ಮರಳು ಮಾಡಿ, ಆಣೆ-ಪ್ರಮಾಣ ಭಾಷೆಯ ಮೂಲಕ ನಂಬಿಸಿ, ಒಂದಷ್ಟು ದಿನ ಸುತ್ತಾಡಿ, ಕಡೆಗೆ ಕಳ್ಳನಂತೆ ಎದ್ದು ಹೋಗಿ ಬಿಟ್ಟಿದ್ದಾನೆ. ಈ ಅಸಹಾಯಕ ಹುಡುಗಿಯ ಸಂಕಟಕ್ಕೆ ಕೊನೆಯುಂಟಾ ಸಾರ್?
ಶೃತಿ ಹೆಗಡೆ ಹುಳಗೋಳ