Advertisement

ಕೊಡವ ಹೆರಿಟೇಜ್‌ ಸೆಂಟರ್‌ಗೆ ಮತ್ತೆ ಕಾಮಗಾರಿ ಭಾಗ್ಯ

09:49 PM May 16, 2019 | sudhir |

ಮಡಿಕೇರಿ : ಬಹುನಿರೀಕ್ಷಿತ ಯೋಜನೆ ನಿರೀಕ್ಷಿಸಿದಂತೆ ಅನುಷ್ಠಾನ ಗೊಂಡಿದ್ದರೆ ಕೊಡಗಿನ ಐನ್‌ಮನೆಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವ ಕೊಡವ ಹೆರಿಟೇಜ್‌ ಸೆಂಟರ್‌ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೊಡುಗೆಯಾಗಿ ದೊರೆತು 7 ವರ್ಷಗಳೇ ಆಗುತ್ತಿತ್ತು. ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಉದ್ದೇಶಿತ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಇದೀಗ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.

Advertisement

ಮತ್ತೆ ಕಾಮಗಾರಿಯ ಭಾಗ್ಯವನ್ನು ಕಂಡಿರುವ ಕೊಡವ ಹೆರಿಟೇಜ್‌ ಸೆಂಟರ್‌ನ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ರೂ.1 ಕೋಟಿ ರೂ.ಗಳನ್ನು ಮತ್ತೆ ಮೀಸಲಿಡಲಾಗಿದೆ.

ಈ ಹಿಂದಿನ ಗುತ್ತಿಗೆದಾರ ಸಂಸ್ಥೆ ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೆ 1.70 ಕೋಟಿ ರೂ.ಗಳ ಕಾಮಗಾರಿ ನಡೆದಿದೆ ಎಂದು ಹೇಳಿಕೊಂಡಿತ್ತು. ಗುಣಮಟ್ಟವಿಲ್ಲದ ಅಪೂರ್ಣ ಕಾಮಗಾರಿಗೆ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಇದೀಗ ಪ್ರವಾಸೋದ್ಯಮ ಇಲಾಖೆಯ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಅಂತಿಮ ಹಂತದ ಪ್ರಕ್ರಿಯೆ ಪೂರ್ಣ ಗೊಳಿಸಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಆದೇಶದಂತೆ ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಸುಮಾರು 1 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಮತ್ತಷ್ಟು ಅನುದಾನ‌ ಬೇಕಾದಲ್ಲಿ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಲ್‌ಸಿ ಭೇಟಿ
ಕೊಡವ ಹೆರಿಟೇಜ್‌ ಸೆಂಟರ್‌ನ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಂಡಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತುತ್ತಲೇ ಬಂದಿದ್ದ ಎಂಎಲ್‌ಸಿ ಎಂ.ಪಿ.ಸುನೀಲ್‌ ಸುಬ್ರಮಣಿ ಅವರು ಇತ್ತೀಚೆಗೆ ಯೋಜನೆಯ ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿಯನ್ನು ಕೈಗೆತ್ತಿಕೊಂಡು ಶೀಘ್ರ ಯೋಜನೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಯೋಜನೆ ಹೀಗಿದೆೆ
ಈ ಕಟ್ಟಡದಲ್ಲಿ ಐನ್‌ಮನೆ, ಒಳಾಂಗ ಣದಲ್ಲಿ ಪುಟ್ಟ ಕೊಳ, ತೆರೆದ ಸಭಾಂಗಣ, ಗ್ರಂಥಾಲಯ, ಹಳೆಯ ಸಾಂಪ್ರದಾಯಿಕ ವಸ್ತುಗಳ ಸಂಗ್ರಹಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಗ್ರಾಮೀಣ ಸೊಗಡಿನ ಸೌಲಭ್ಯಗಳೊಂದಿಗೆ “ಕೊಡವ ಹೆರಿಟೇಜ್‌ ಸೆಂಟರ್‌’ ನಿರ್ಮಾಣ ವಾಗಬೇಕಿದೆ.

ಕಳಪೆ ಕಾಮಗಾರಿ
ಈ ಹಿಂದೆ ನಡೆದ ಕಾಮಗಾರಿಯಲ್ಲಿ ಮೆಟ್ಟಿಲುಗಳಿಗೆ ಅಳವಡಿಸಿರುವ ಗ್ರಾನೈಟ್‌ ಕಲ್ಲುಗಳು ಅಲ್ಲಲ್ಲಿ ಕಿತ್ತು ಹೋಗಿದ್ದು, ಅಪೂರ್ಣಗೊಂಡಿರುವ ಗೋಡೆಗಳು ಕೂಡ ಶಿಥಿಲಾವಸ್ಥೆಗೆ ತಲುಪಿವೆೆ.

ಕೈಚೆಲ್ಲಿದ ಗುತ್ತಿಗೆದಾರ
2009-10ರಲ್ಲಿ “”ಕೊಡವ ಹೆರಿಟೇಜ್‌ ಸೆಂಟರ್‌” ಸ್ಥಾಪನೆಗೆ ಯೋಜನೆ ರೂಪಿಸಲಾಯಿತು. ಆರಂಭದಲ್ಲಿ 1.45 ಕೋಟಿ ರೂ. ವೆಚ್ಚದ ಯೋಜನೆ ತಯಾರಾಯಿತಾದರು ನಂತರ ಈ ಮೊತ್ತ 2.68 ಕೋಟಿ ರೂ.ಗಳಿಗೆ ಏರಿಕೆಯಾಯಾಯಿತು. ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ 4 ಎಕರೆ ಪ್ರದೇಶವನ್ನು ಉದ್ದೇಶಿತ ಯೋಜನೆಗಾಗಿ ಗುರುತಿಸಲಾಯಿತು. 2011 ಸೆ.21 ರಂದು ಕೊಡಗಿನ ಐನ್‌ ಮನೆಯ ಸಂಪೂರ್ಣ ಸ್ವರೂಪವನ್ನು ಹೊಂದಿರುವ “”ಕೊಡವ ಹೆರಿಟೇಜ್‌ ಸೆಂಟರ್‌”ನ ಕಾಮಗಾರಿಗೆ ಚಾಲನೆ ನೀಡಲಾಯಿತು. ಕಟ್ಟಡ ಕಾಮಗಾರಿಯನ್ನು 2012 ಸೆ.21ಕ್ಕೆ ಪೂರ್ಣಗೊಳಿಸಿ ಗುತ್ತಿಗೆದಾರ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕಾಗಿತ್ತು.

-  ಎಸ್‌.ಕೆ.ಲಕ್ಷ್ಮೀಶ್‌

Advertisement

Udayavani is now on Telegram. Click here to join our channel and stay updated with the latest news.

Next