Advertisement

ಸೊರಗುತ್ತಲಿವೆ ಮರುನಾಟಿ ಮರಗಳು

03:52 PM Oct 13, 2018 | Team Udayavani |

ಬೆಂಗಳೂರು: ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳ ವೇಳೆ ಸ್ಥಳಾಂತರಿಸಿ ಮರುನಾಟಿ ಮಾಡಿದ ಮರಗಳ
ನಿರ್ವಹಣೆಗೆ ಸ್ಥಳೀಯ ಸಂಸ್ಥೆಗಳು ನಿರಾಸಕ್ತಿ ತೋರಿದ ಪರಿಣಾಮ, ಮರುನಾಟಿ ಮಾಡಿದ ಶೇ.30ರಷ್ಟು ಮರಗಳು ಬದುಕುಳಿಯದೆ ಸೊರಗಿರುವುದು ಬೆಳಕಿಗೆ ಬಂದಿದೆ. ಬಿಎಂಆರ್‌ಸಿಎಲ್‌ ವತಿಯಿಂದ ನಮ್ಮ ಮೆಟ್ರೊ ಯೋಜನೆಗಾಗಿ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕಡಿಯಲಾಗಿದ್ದು, 300ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರ ಮಾಡಲಾಗಿದೆ.

Advertisement

ಜತೆಗೆ, ಬಿಬಿಎಂಪಿಯಿಂದಲೂ ರಸ್ತೆ ವಿಸ್ತರಣೆ ನೆಪದಲ್ಲಿ ಮೂರ್‍ನಾಲ್ಕು ವರ್ಷಗಳಲ್ಲಿ 50 ಮರಗಳನ್ನು ಸ್ಥಳಾಂತರ
ಮಾಡಲಾಗಿದೆ. ಆದರೆ, ಸ್ಥಳಾಂತರದ ಬಳಿಕ ಅವುಗಳ ನಿರ್ವಹಣೆ ಮಾಡದ ಪರಿಣಾಮ, ಹೆಚ್ಚಿನ ಮರಗಳು ಒಣಗಿವೆ.
ಮರಗಳನ್ನು ಸ್ಥಳಾಂತರ ಮಾಡುವ ಮೊದಲು ಹಲವಾರು ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಆದರೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಸರವಾದಿಗಳ ಸಲಹೆ ಪರಿಗಣಿಸದೆ ಇಂತಹ ಕಾರ್ಯಗಳಿಗೆ ಕೈಹಾಕುತ್ತಾರೆ. ಜತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಪರಿಣಾಮ ಮರಗಳು ಜೀವ ಕಳೆದುಕೊಳ್ಳುತ್ತಿವೆ. ಇವೆಲ್ಲದರ ನಡುವೆಯೂ ಜಯನಗರ 4ನೇ ಬ್ಲಾಕ್‌, ವೈಟ್‌ಫೀಲ್ಡ್‌-ಐಟಿಪಿಎಲ್‌ ಬಳಿಯ ಸತ್ಯಸಾಯಿ ಆಸ್ಪತ್ರೆ ಆವರಣದಲ್ಲಿ ಮರುನಾಟಿ ಮಾಡಿರುವ ಮರಗಳು ಆರೋಗ್ಯವಾಗಿವೆ. ಇನ್ನು ನಗರದಲ್ಲಿ ಕಡಿಯಲಾದ ಮರಗಳಿಗೆ ಪರಿಹಾರವಾಗಿ ಹೆಮ್ಮಿಗೆಪುರ, ಉತ್ತರಹಳ್ಳಿ, ಕೆಂಗೇರಿ, ಬೇಗೂರು, ಅರಕೆರೆ, ಅಂಜನಾಪುರ, ಗೊಟ್ಟಿಗೆರೆ ಸೇರಿ ವಿವಿಧ ಭಾಗಗಳಲ್ಲಿ ನಟ್ಟ ಸಸಿಗಳನ್ನು ಬಿಎಂಆರ್‌ಸಿಎಲ್‌ ಉತ್ತಮವಾಗಿ ನಿರ್ವಹಣೆ ಮಾಡಿದೆ.

ನೀರುಣಿಸಲೂ ನಿರಾಸಕ್ತಿ: ಅಭಿವೃದ್ಧಿ ಕಾಮಗಾರಿ ಉದ್ದೇಶಕ್ಕಾಗಿ ಹಲವು ಮರಗಳನ್ನು ಸ್ಥಳಾಂತರ ಮಾಡುವ
ಸ್ಥಳೀಯ ಸಂಸ್ಥೆಗಳು, ನಂತರದಲ್ಲಿ ಅವುಗಳ ನಿರ್ವಹಣೆಗೆ ಮುಂದಾಗುತ್ತಿಲ್ಲ. ಪ್ರಮುಖವಾಗಿ ಅಂತಹ ಮರಗಳಿಗೆ
ನೀರುಣಿಸುವ ಕೆಲಸಕ್ಕೂ ನಿರಾಸಕ್ತಿ ತೋರುತ್ತಿರುವುದರಿಂದ ಮರಗಳು ಕೆಲವೇ ತಿಂಗಳುಗಳಲ್ಲಿ ಜೀವ ಕಳೆದುಕೊಳ್ಳುತ್ತಿವೆ ಎಂಬುದು ಪರಿಸರವಾದಿಗಳ ಆರೋಪವಾಗಿದೆ.

ಪರಿಸರವಾದಿಗಳ ಆಕ್ರೋಶ: ಮರಗಳ ಸ್ಥಳಾಂತರದ ವೇಳೆ ಮರದ ಯಾವ ಕೊಂಬೆಗಳನ್ನು ಕತ್ತರಿಸಬೇಕು, ಯಾವ
ಬೇರುಗಳನ್ನು ಉಳಿಸಿಕೊಳ್ಳಬೇಕು, ಫ‌ಂಗಸ್‌ ಬರದಂತೆ ಕೈಗೊಳ್ಳಬೇಕಾದ ಕ್ರಮಗಳು ಹೀಗೆ ಹಲವಾರು ವಿಚಾರಗಳ
ಬಗ್ಗೆ ಎಚ್ಚರ ವಹಿಸಬೇಕು. ಆದರೆ, ಈ ಬಗ್ಗೆ ಮಾಹಿತಿ ಹೊಂದಿರುವ ಪರಿಸರವಾದಿಗಳ ಸಹಕಾರ ಪಡೆಯಲು
ಮುಂದಾಗುವುದೇ ಇಲ್ಲ. ಕೆಲವೊಮ್ಮೆ ಪರಿಸರವಾದಿಗಳೇ ಸ್ವಯಂಪ್ರೇರಿತವಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.  ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಮರಗಳು ಸಾಯುತ್ತಿವೆ ಎಂಬುದು ಪರಿಸರವಾದಿಗಳ ಆಕ್ರೋಶ. 

Advertisement

ಮರುನಾಟಿಯಲ್ಲಿಯೂ ಅಕ್ರಮ?
ಈ ಮೊದಲು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಒಂದು ಮರ ಸ್ಥಳಾಂತರ ಮಾಡಿ ಮರುನಾಟಿ ಮಾಡಲು ಸುಮಾರು 50 ಸಾವಿರ ದಿಂದ 1 ಲಕ್ಷ ರೂ.ವರೆಗೆ ವೆಚ್ಚ ಮಾಡಿದ್ದಾರೆ. ಆದರೆ, ಪರಿಸರವಾದಿಗಳು ಮರವೊಂದನ್ನು ಪ್ರಾತ್ಯಕ್ಷಿಕವಾಗಿ
ಕೇವಲ 10ರಿಂದ 15 ಸಾವಿರ ರೂ. ವೆಚ್ಚದಲ್ಲಿ ಸ್ಥಳಾಂತರ ಮಾಡಿ ತೋರಿಸಿದ್ದಾರೆ. ಆನಂತರ ಸ್ಥಳೀಯ ಸಂಸ್ಥೆಗಳು ಒಂದು ಮರ ಸ್ಥಳಾಂತರ ಮಾಡಲು 10-15 ಸಾವಿರ ರೂ. ವ್ಯಯಿಸುತ್ತಿದ್ದು, ಈ ಮೊದಲು ಮರುನಾಟಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ಕೆಲ ಪರಿಸರ ಪ್ರೇಮಿಗಳ ಅನುಮಾನ.

ಕಾಮಗಾರಿ ಮಾರ್ಗದಲ್ಲಿ ಮರಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಪರಿಸರ ತಜ್ಞರ ಸಮಿತಿಯೊಂದಿಗೆ ಅಧಿಕಾರಿಗಳು ಸಭೆ ನಡೆಸಿದರೆ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಮುಂದಿನ ದಿನಗಳಲ್ಲಾದರೂ ತಜ್ಞರ ಅಭಿಪ್ರಾಯ ಪಡೆದರೆ ಮರಗಳನ್ನು ಉಳಿಸಬಹುದು. 
  ಯಲ್ಲಪ್ಪರೆಡ್ಡಿ, ಪರಿಸರವಾದಿ

ನಮ್ಮ ಮಟ್ರೋ ಹಾಗೂ ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಮರಗಳು ಜೀವ ಕಳೆದುಕೊಂಡಿವೆ. ಮರುನಾಟಿ ಮರಗಳ
ನಿರ್ವಹಣೆಗೆ ಅಧಿಕಾರಿಗಳು ಆದ್ಯತೆ ನೀಡಬೇಕಿದೆ. ಜತೆಗೆ ಮೆಟ್ರೋ ಮಾರ್ಗದ ಎರಡೂ ಬದಿ ಸಸಿ, ಮರಗಳ ಮರುನಾಟಿ ಮಾಡಲು ಬಿಎಂಆರ್‌ಸಿಎಲ್‌ ಮುಂದಾಗಬೇಕು.
 ವಿಜಯ್‌ ನಿಶಾಂತ್‌, ಪರಿಸರ ಪ್ರೇಮಿ

ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next