Advertisement

ತೊಗರಿ ಖರೀದಿ ಪುನಾರಂಭಿಸಿ: ನಿರ್ಣಯ

04:19 PM May 06, 2017 | Team Udayavani |

ಕಲಬುರಗಿ: ಕೇಂದ್ರ ಸರಕಾರ ಪುನಃ ತೊಗರಿ ಕೇಂದ್ರ ಆರಂಭಿಸಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿ ಜಿಪಂ ಸಭೆ ಕೈಗೊಂಡ ನಿರ್ಣಯಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

Advertisement

ಶುಕ್ರವಾರ ಹೊಸ ಜಿಪಂ ಸಭಾಂಗಣದಲ್ಲಿ ನಡೆದ 6ನೇ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಕುರಿತು ಗಮನ ಸೆಳೆದ ಸದಸ್ಯರಾದ ಸಿದ್ದರಾಮ ಪ್ಯಾಟಿ, ಗೌತಮ ಪಾಟೀಲ ಹಾಗೂ ಇತರರು, ರಾಜ್ಯ ಹಾಗೂ ಕೇಂದ್ರ ಸರಕಾರ ರೈತರ ತೊಗರಿ ಖರೀದಿಸದೆ ಬರದ ಮಧ್ಯೆ ಬರೆ ನೀಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ 30ಲಕ್ಷ ಕ್ವಿಂಟಾಲ್‌ ತೊಗರಿ ಬೆಳೆಯಲಾಗಿದೆ. ಸರಕಾರ ಕೇವಲ 11.68 ಲಕ್ಷ ಕ್ವಿಂಟಾಲ್‌ ಖರೀದಿ ಮಾಡಿದೆ. ಇನ್ನೂ ಏಳೆಂಟು ಲಕ್ಷ ಕ್ವಿಂಟಾಲ್‌ ತೊಗರಿ ಉಳಿದಿದೆ. ಅದನ್ನು ಯಾರು ಖರೀದಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಇದಕ್ಕೆ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಹರ್ಷಾನಂದ ಗುತ್ತೇದಾರ, ಸಂಜೀವನ ಯಾಕಾಪುರ ಹಾಗೂ ಎಲ್ಲ ಸದಸ್ಯರು ಧ್ವನಿ ಗೂಡಿಸಿದರು. ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಅಧ್ಯಕ್ಷೆ ಸುವರ್ಣಾ ಮಲಾಜಿ ಅಪ್ಪಣೆಯ ಮೇರೆಗೆ ಈ ಕುರಿತು ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

ನರ್ಸ್‌ ಸಮಸ್ಯೆಗೆ ಕಿವಿಗೊಡಿ: ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ, ಆಳಂದ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳು ಹಾಗೂ ತಜ್ಞ ವೈದ್ಯರು ಇಲ್ಲ. ಕೂಡಲೇ ನರ್ಸ್‌ಗಳನ್ನು ನೇಮಕ ಮಾಡಬೇಕು ಎಂದರು. ಈ ಕುರಿತು ಕೋರ್ಲಪಾಟಿ ಅವರು ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ್‌ ಸಜ್ಜನಶೆಟ್ಟಿ ಅವರನ್ನು ಪ್ರಶ್ನಿಸಿದಾಗ, ಜಿಲ್ಲೆಯಲ್ಲಿ 160 ಜನ ಸ್ಟಾಫ್‌ನರ್ಸ್‌ಗಳ ಕೊರತೆ ಇದೆ.

Advertisement

ಎನ್‌ಆರ್‌ಎಚ್‌ಎಂನಲ್ಲಿ 287 ಮಂಜೂರಾದ ಹುದ್ದೆಗಳಿದ್ದರೂ 24 ಖಾಲಿ ಇವೆ. ಕಳೆದ ಜನವರಿಯಲ್ಲಿ 139 ಹುದ್ದೆಗಳಿಗೆ ನೋಟಿμಕೇಷನ್‌ ಮಾಡಲಾಗಿದೆ. ಶೀಘ್ರವೇ ಪರೀಕ್ಷೆ, ಸಂದರ್ಶನ ಮುಗಿಸಿ ಎರಡು ವಾರದಲ್ಲಿ ನರ್ಸ್‌ಗಳು ಹಾಜರಾಗಲಿದ್ದಾರೆ ಎಂದರು. 

ಕ್ಯಾಮೆರಾ ಅಳವಡಿಕೆ: ಸಿಇಒ ಕೋರ್ಲಪಾಟಿ ಮಾತನಾಡಿ, ನಾನು ಖುದ್ದಾಗಿ ಗ್ರಾಮೀಣ ಪ್ರದೇಶದ ದವಾಖಾನೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ನೋಡಿದ್ದೇನೆ ನರ್ಸ್‌ಗಳಿಲ್ಲ, ಇದ್ದರೂ ಕರ್ತವ್ಯದಲ್ಲಿ ಇರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಬಯೋಮೆಟ್ರಿಕ್‌ ಹಾಜರಾತಿ ಪದ್ಧತಿ ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಕೂಡಿಸಲಾಗುತ್ತಿದೆ ಎಂದರು. 

ಕೂಡಿ ಪಿಡಿಒ ವಿವಾದ: ಜಿಪಂ ಸದಸ್ಯ ಶಿವರಾಜ ಪಾಟೀಲ ರೆದ್ದೇವಾಡಗಿ ಮಾತನಾಡಿ, ಕಳೆದ (5ನೇ) ಜಿಪಂ ಸಭೆಯಲ್ಲಿ ಚರ್ಚೆ ಮಾಡಿದ್ದರೂ, ಪುನಃ ಜೇವರ್ಗಿ ತಾಲೂಕಿನ ಕೂಡಿ ಗ್ರಾಪಂ ಪಿಡಿಒ ನಾಗೇಂದ್ರ ಕೂಡಿ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಇವರು 8 ಎಕರೆ ಭೂಮಿಯನ್ನು ಸರಕಾರಕ್ಕೆ ಉಳಿಸಿಕೊಟ್ಟಿದ್ದಾರೆ. ಅಲ್ಲದೆ, ಕೋಮುಗಲಭೆ ಆಗುವುದನ್ನು ತಪ್ಪಿಸಿದ್ದಾರೆ. ಇಂತಹ ಅಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

 ಉಪ ಕಾರ್ಯದರ್ಶಿ ಸಂಪತ್‌ಕುಮಾರ ಮಾತನಾಡಿ, ಇದೊಂದು ಸಮುದಾಯಗಳ ಮಧ್ಯದ ಕಲಹ ಏರ್ಪಟ್ಟ ಸ್ಥಿತಿಗೆ ತಲುಪಿರುವ ಪ್ರಕರಣವಾದ್ದರಿಂದ ತಹಶೀಲ್ದಾರ ಹಾಗೂ ಇಒ ಜೇವರ್ಗಿ ಅವರ ವರದಿಯನ್ನಾಧರಿಸಿ ಕ್ರಮ ಕೈಗೊಂಡು ನಾಗೇಂದ್ರ ಅವರು ಕೂಡಿ ಗ್ರಾಮದವರೇ ಆಗಿರುವುದರಿಂದ ಅವರನ್ನು ಬೇಡೆಗೆ ವರ್ಗಾವಣೆ ಮಾಡಿ ಪರಿಸ್ಥಿತಿ ಸುಧಾರಿಸಿ, ಪ್ರಭಾರಿಯಾಗಿ ಬೇರೆಯವರಿಗೆ ನಿಯೋಜನೆ ಮಾಡಿದ್ದೇವೆ ಎಂದರು.

ಆಗ ಆಕ್ರೋಶಗೊಂಡ ಶಿವರಾಜ, ಅದು ಹೇಗೆ ಸಾಧ್ಯ ದಾಖಲೆಗಳೆಲ್ಲವೂ ಪಿಡಿಒ ಪರವಾಗಿ ಇವೆಯಲ್ಲ ಎಂದರು. ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಮಧ್ಯಪ್ರವೇಶಿಸಿ, ಈ ಕುರಿತು ನಾನು ವರದಿ ತರಿಸಿಕೊಂಡು ಪುನಃ ಪರಿಶೀಲನೆ ಮಾಡುತ್ತೇನೆ. ಕಾನೂನು, ನಿಯಮ ಬಿಟ್ಟು ಏನೂ ಮಾಡುವುದಿಲ್ಲ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಯೋಜನಾಧಿಕಾರಿ ಪ್ರವೀಣ ಪ್ರಿಯಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next