Advertisement

ಕೇಂದ್ರದ ವಿರುದ್ಧ ದಂಗೆ

11:59 AM Jan 26, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಕೂಡಲೇ ಇತ್ಯರ್ಥ ಪಡಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ದಂಗೆ ಏಳುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಸಿದ್ದಾರೆ.

Advertisement

ಮಹದಾಯಿಗಾಗಿ ಗುರುವಾರ ಕರೆ ನೀಡಿದ್ದ ಬಂದ್‌ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಇತಿಶ್ರೀ ಹಾಡದಿದ್ದರೆ, ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಕರ ನಿರಾಕರಣೆ ಮಾಡಲಿದ್ದೇವೆ. ವಿವಾದ ಇತ್ಯರ್ಥ ಆಗುವವರೆಗೂ ರಾಜ್ಯದ ಸಂಸದರ ಮನೆಗಳಿಗೆ ಬೀಗ ಹಾಕಿ ಗೃಹ ಬಂಧನದಲ್ಲಿ ಇಡಲಿದ್ದೇವೆ ಎಂದರು.

ವೀರ ಕನ್ನಡಿಗರು ಹೆದರರು: ಕರ್ನಾಟಕ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯ ಸ್ತಬ್ಧವಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಂದ್‌ಗೆ ಬೆಂಬಲ ಸೂಚಿಸಿದೆ. ಬಿಜೆಪಿ ಮಾತ್ರ ಬಂದ್‌ ವಿರೋಧಿಸಿದೆ. ಮಹದಾಯಿ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಇತ್ಯಾರ್ಥವಾಗಿ ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವರೆಗೂ ಹೋರಟ ಕೈಬಿಡುವುದಿಲ್ಲ.

ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರ, ಗೋವಾ ಬೆದರಿಕೆಗೆ ವೀರ ಕನ್ನಡಿಗರು ಹೆದರುವುದಿಲ್ಲ. ಬದ್ಧತೆಯಿಂದ ಹೋರಾಡುತ್ತೇವೆ ಎಂದು ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ,  ಮಹದಾಯಿ ನೀರಿಗೆ ಆಗ್ರಹಿಸಿ ಕರೆಕೊಟ್ಟಿರುವ ಬಂದ್‌ಗೆ ರಾಜ್ಯಾದ್ಯಂತ 2 ಸಾವಿರ ಸಂಘಟನೆಗಳು ಬೆಂಬಲ ಸೂಚಿಸಿವೆ.

ಇದೊಂದು ಐತಿಹಾಸಿಕ ಹೋರಾಟ. ನಮ್ಮ ಹೋರಾಟ ಇಲ್ಲಿಗೇ ಕೊನೆಯಾಗುವುದಿಲ್ಲ. ಕೇಂದ್ರ ಸರ್ಕಾರ ಮಹದಾಯಿ ವ್ಯಾಜ್ಯ ಇತ್ಯರ್ಥಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ಹೋರಾಟ ನಡೆಯುತ್ತದೆ. ಗೋವಾ ಸಚಿವರಿಗೆ ಮಾತಿನ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದರು.

Advertisement

ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ?: “ಮಹದಾಯಿ, ಕಳಸಾ ಬಂಡೂರಿ ನೀರು ಹಂಚಿಕೆ ವಿವಾದ ಇತ್ಯರ್ಥಗೊಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರೆ ಫೆ.4ರಂದು ನಡೆಸಲು ಉದ್ಧೇಶಿಸಿದರು ಬೆಂಗಳೂರು ಬಂದ್‌ ಹಿಂಪಡೆಯಲಿದ್ದೇವೆ. ಕೇಂದ್ರದಿಂದ ಸಕರಾತ್ಮಕ ಪ್ರತಿಕ್ರಿಯೆ ಬಾರದೇ ಇದ್ದರೆ ಹೋರಾಟ ಮುಂದುವರಿಸುತ್ತೇವೆ.  ಫೆ.4ರಂದು ನಗರಕ್ಕೆ ಆಗಮಿಸುತ್ತಿರುವ  ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶಿಸಲಿದ್ದೇವೆ,’ ಎಂದು ವಾಟಾಳ್‌ ನಾಗರಾಜ್‌  ಸ್ಪಷ್ಟಪಡಿಸಿದರು.

ಕನ್ನಡ ನಾಡು, ನುಡಿಯ ಬಗ್ಗೆ ವಿಧಾನಸೌಧ ಒಳಗೆ ಧ್ವನಿ ಎತ್ತಲು ಮುಂದಿನ ವಿಧಾನಸಭಾ ಚುನಾವಣೆಗೆ ಕನ್ನಡ ಒಕ್ಕೂಟದಿಂದ ಕನ್ನಡ ಪರ ಕಾರ್ಯಕರ್ತರನ್ನು ಕಣಕ್ಕಿಳಿಸಲಾಗುತ್ತದೆ. ಕನಿಷ್ಠ 50 ಮಂದಿಯನ್ನು ವಿಧಾನಸೌಧ ಪ್ರವೇಶ ಮಾಡಿ ರಾಜ್ಯದ ಹಿತ ಕಾಪಾಡಲು ಜನರು ಬೆಂಬಲಿಸಲಿದ್ದಾರೆ.
ವಾಟಾಳ್‌ ನಾಗರಾಜ್‌, ಅಧ್ಯಕ್ಷ, ಕನ್ನಡ ಒಕ್ಕೂಟ

ಕರ್ನಾಟಕದ ಮಹದಾಯಿ ನದಿಯ 7.56 ಟಿಎಂಸಿ ನೀರು ಉತ್ತರ ಕರ್ನಾಟಕ ಭಾಗಕ್ಕೆ ಬರಲೇಬೇಕು. ಪ್ರಧಾನಿ ನರೇಂದ್ರ ಮೋದಿಯವರು ಸಮಸ್ಯೆಗೆ ಪರಿಹಾರ ನೀಡದೇ ಇದ್ದರೆ ಹೋರಾಟ ಇನ್ನೂ ಉಗ್ರರೂಪ ಪಡೆಯಲಿದೆ.
-ಕೋನರೆಡ್ಡಿ, ಶಾಸಕ

ಗೋವಾದ ನೀರಾವರಿ ಸಚಿವ ಕರ್ನಾಟಕದ ವಿರುದ್ಧ ಕೀಳು ಪದ ಪ್ರಯೋಗ ಮಾಡಿದ್ದಾರೆ. ಕೇಂದ್ರ ಸರ್ಕಾರ ಅವರ ವಿರುದ್ಧ ಕ್ರಮ ತೆಗದುಕೊಳ್ಳುವವರೆಗೂ ಅವರನ್ನು ಉಗ್ರಗಾಮಿ ಎಂದು ಕರೆಯುತ್ತೇವೆ.
-ಶ್ರೀಶೈಲ್‌ ಮೇಟಿ, ರೈತ ಸೇನಾ ಸಮನ್ವಯ ಸಮಿತಿ ಸಂಚಾಲಕ

ರಾಜ್ಯದ ನೆಲ ಮತ್ತು ಜಲದ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಒಗ್ಗಟ್ಟಿನ ಹೋರಾಟ ನಡೆಸಬೇಕು. ಮಹದಾಯಿ ನದಿ ನೀರಿನ  ಹಂಚಿಕೆ ವಿಚಾರವಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾವು ಸಂಪೂರ್ಣವಾಗಿ ಪಾಲ್ಗೊಳ್ಳುತ್ತೇವೆ.
-ಬಿ.ಪಿ.ಮಂಜೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next