ಬೆಂಗಳೂರು: ರಾಜೀನಾಮೆ ನೀಡಿದ್ದ ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಅವರು ಭಾನುವಾರ ವಿಶೇಷ ವಿಮಾನದಲ್ಲಿ ಮುಂಬಯಿಗೆ ತೆರಳಿದ್ದಾರೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರುಗಳ ಸಂಧಾನದ ಬಳಿಕ ರಾಜೀನಾಮೆ ವಾಪಾಸ್ ಪಡೆಯುವುದಾಗಿ ಹೇಳಿದ್ದು ನಾಗರಾಜ್ ಅವರು ಮುಂಬಯಿಯ ಹೊಟೇಲ್‌ನಲ್ಲಿರುವ ಅತೃಪ್ತಶಾಸಕರನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಧಾನ ಯಶಸ್ವಿಯಾಯಿತು ಎಂದು ನಂಬಿಕೊಂಡಿದ್ದ ಕಾಂಗ್ರೆಸ್ ನಾಯಕರಿಗೆ ನಾಗರಾಜ್ ದೊಡ್ಡ ಶಾಕ್ ನೀಡಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷವಿಮಾನದಲ್ಲಿ ಮುಂಬಯಿಗೆ ತೆರಳಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಂತೋಷ್ ವಿಮಾನ ನಿಲ್ದಾಣದಲ್ಲಿದ್ದರು.
ಮಾಜಿ ಸಚಿವ ಬಿಜೆಪಿ ನಾಯಕ ಆರ್ .ಅಶೋಕ್ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ಮಾಧ್ಯಮಗಳಲ್ಲಿ ಫೋಟೋಗಳು ಪ್ರಸಾರವಾಗಿದೆ.
ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ
ಅಧ್ಯಕ್ಷ ಸಿದ್ದರಾಮಯ್ಯ ಸಹಿತ ಹಲವು ನಾಯಕರು 16
ಗಂಟೆಗಳ ಕಾಲ ನಡೆಸಿದ ಸಂಧಾನ ಒಂದು ಹಂತದಲ್ಲಿ
ಯಶಸ್ವಿಯಾಗಿತ್ತು.
“ನಾನು ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತೇನೆ. ಜತೆಗೆ ರಾಜೀನಾಮೆ ಹಿಂಪಡೆಯುತ್ತೇನೆ. ರಾಜೀನಾಮೆ ನೀಡಿರುವ ಡಾ.ಕೆ.ಸುಧಾಕರ್ ಸೇರಿದಂತೆ ಇತರ ಸ್ನೇಹಿತರನ್ನು ಮನವೊಲಿಸುತ್ತೇನೆ’ ಎಂದು ಎಂ.ಟಿ.ಬಿ.ನಾಗರಾಜ್ ಶನಿ ವಾರ ರಾತ್ರಿ ಸಿದ್ದರಾಮಯ್ಯ ನಿವಾಸದಲ್ಲಿ
ಘೋಷಿಸಿದ್ದರು. ಕೆಲವೇ ಕ್ಷಣದಲ್ಲಿ ಅವರು ನಿಲುವಲ್ಲಿ
ಬದಲು ಮಾಡಿದ್ದಾರೆ.