Advertisement

ಕಾಲ್ಪನಿಕ ಊರಲ್ಲಿ ನೈಜ ಚಿತ್ರಣ

11:18 AM Feb 16, 2018 | |

“ಗಂಡಸರ ಹತ್ತಿರ ದುಡ್ಡಿದ್ದರೆ ಏನು ಮಾಡ್ತಾರೆ ಹೇಳಿ?’ ಹಾಗಂತ ಪ್ರಶ್ನೆ ಕೇಳಿದರು ನಾಗಾಭರಣ. ಉತ್ತರ ಹೇಳುವ ಮುನ್ನವೇ, ಇನ್ನೊಂದು ಪ್ರಶ್ನೆ ಹಾಕಿದರು. “ಅದೇ ಹೆಣ್ಣು ಕೈಲಿ ಆ ದುಡ್ಡಿದ್ದರೆ? …’ “ಆಟೋಮೇಟಿಕ್‌ ಆಗಿ ಒಂದು ಶಿಸ್ತು ಬರುತ್ತದೆ. ಅವಳು ಅವಳ ಬಗ್ಗೆ ಮಾತ್ರ ಯೋಚಿಸುವುದಿಲ್ಲ. ಇಡೀ ಕುಟುಂಬದ ಬಗ್ಗೆ ಯೋಚಿಸುತ್ತಾಳೆ. ಇರುವ ಒಂದಿಷ್ಟು ಹಣದಲ್ಲಿ, ಸ್ವಲ್ಪ ಪಕ್ಕಕ್ಕಿಡುತ್ತಾಳೆ. ಡಬ್ಬದಲ್ಲಿಟ್ಟರೆ ಹಣ ಕಳುವಾಗುವ ಸಾಧ್ಯತೆ ಇರುತ್ತೆ.

Advertisement

ಹಾಗಾಗಿ ಎಲ್ಲಾ ಹೆಂಗಸರು ಸೇರಿಕೊಂಡು, ತಮ್ಮ ಬಳಿ ಇರುವ ಹಣವನ್ನು ಪೂಲ್‌ ಮಾಡಿ ಎತ್ತಿಡುತ್ತಾರೆ. ಯಾರಿಗಾದರೂ ಕಷ್ಟ ಬಂದರೆ, ಆ ಹಣವನ್ನು ಒಂದು ಸಣ್ಣ ಬಡ್ಡಿಗೆ ಸಾಲ ಕೊಡುತ್ತಾರೆ. ಆ ಸಾಲಕ್ಕೆ ಒಬ್ಬರಷ್ಟೇ ಜವಾಬ್ದಾರರಲ್ಲ, ಎಲ್ಲರೂ ಜವಾಬ್ದಾರರು. ಏಕೆಂದರೆ, ಅದರಲ್ಲಿ ಎಲ್ಲರ ಹಣವೂ ಇರುತ್ತೆ ಅಲ್ವಾ? …’ ಎಂದು ಹೇಳುತ್ತಾ ಹೋದರು ನಾಗಾಭರಣ.

ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ಸದ್ದಿಲ್ಲದೆ “ಕಾನೂರಾಯಣ’ ಎಂಬ ಚಿತ್ರ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ವಿಶೇಷತೆಯೆಂದರೆ, ಈ ಚಿತ್ರವು ಬರೀ ಸಹಕಾರಿ ವ್ಯವಸ್ಥೆಯಲ್ಲಷ್ಟೇ ಅಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್‌ನ ವತಿಯಿಂದ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆಯವರು ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ನಾಗಾಭರಣ ಮಾತನಾಡಿದ್ದು ಇದೇ ಸಂದರ್ಭದಲ್ಲಿ.

“ಆರ್ಥಿಕ ಸ್ವಾವಲಂಬನೆಯ ಕುರಿತು ಚಿತ್ರ ಮಾಡಿಕೊಡಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‌ನ ಮಂಜುನಾಥ್‌ ಬಂದಿದ್ದರು. ಈ ತರಹದ ಕಾನ್ಸೆಪ್ಟ್ ಹೇಳ್ಳೋದು ಸುಲಭ. ಚಿತ್ರ ಮಾಡೋದು ಕಷ್ಟ. ಗ್ರಾಮೀಣಾಭಿವೃದ್ಧಿಗೆ ಮುಖ್ಯವಾಗಿ ಏನು ಬೇಕು? ಆರ್ಥಿಕ ಶಿಸ್ತು. ಇದು ಅರ್ಥ ಆಗೋಕೇ ಮೂರು ತಿಂಗಳು ಹಿಡಿಯಿತು. ಕೆಲಸದಲ್ಲಿರುವವರಿಗೆ ಪ್ರತಿ ತಿಂಗಳು ಸಂಬಳ ಇರುತ್ತದೆ. ಆದರೆ, ಕೃಷಿಕರಿಗೆ ಹಾಗಿಲ್ಲ. ಅವರಿಗೆ ಕೆಲಸ ಮತ್ತು ಆದಾಯ ಎರಡೂ ರೆಗ್ಯುಲರ್‌ ಆಗಿರುವುದಿಲ್ಲ.

ಹಾಗಾಗಿ ಅವರ ಜೀವನದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ಆಗ ಸಾಲ ಮಾಡಬೇಕಾಗುತ್ತದೆ. ಸಾಲ ಹೆಚ್ಚಾದಾಗ? ಹಾಗಾಗಿ ಆರ್ಥಿಕ ಸ್ವಾವಲಂಬನೆ ಬಹಳ ಮುಖ್ಯ. ಇದನ್ನು ಹೇಳ್ಳೋದು ಅಷ್ಟು ಸುಲಭವಲ್ಲ. ಕೊನೆಗೆ ಒಂದಿಷ್ಟು ಕೇಸ್‌ ಸ್ಟಡಿಗಳನ್ನು ತರಿಸಿಕೊಂಡೆ. ಅವರು ಕಲೆ ಹಾಕಿರುವ ಮಾಹಿತಿ ತರಿಸಿಕೊಂಡೆ. ಕೊನೆಗೆ ಅದನ್ನು ನಮ್ಮ ತಂಡದವರಿಗೆ ಕೊಟ್ಟೆ. ಅವರು ಬರೆದು ಬರೆದು 10ನೇ ಬಾರಿಗೆ ಒಂದು ರೂಪ ಸಿಕ್ಕಿತು. ಕೊನೆಗೆ 16ನೇ ವರ್ಷನ್‌ನ ಕಥೆ ಫೈನಲ್‌ ಆಯಿತು’ ಎನ್ನುತ್ತಾರೆ ನಾಗಾಭರಣ.

Advertisement

ಒಂದೊಳ್ಳೆಯ ಕಾನ್ಸೆಪ್ಟ್ ಮತ್ತು ಸಂದೇಶವನ್ನು ಮನರಂಜನಾತ್ಮಕವಾಗಿ ಈ ಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತಾರೆ ನಾಗಾಭರಣ. “ಇದನ್ನು ಮನರಂಜನಾತ್ಮಕವಾಗಿ ಹೇಳಬೇಕಿತ್ತು. ಅದಕ್ಕೆ ಪನ್ನಗ ಮತ್ತು ಹರೀಶ್‌ ಸಹಾಯ ಮಾಡಿದರು. ಚಿತ್ರ ನೋಡಿದವರು ನಾಗಾಭರಣ ಈ ತರಹ ಕಾಮಿಡಿ ಮಾಡಿದ್ರಾ ಅಂತ ಕೇಳಬಹುದು. ಸಾಮಾನ್ಯವಾಗಿ ನಾನು ನನ್ನ ಚಿತ್ರಗಳಲ್ಲಿ ಬೈಗುಳ ಬಳಸುವುದಿಲ್ಲ. ಇಲ್ಲಿ ಬಳಸಿದ್ದೀನಿ.

ಆದರೂ ಇದೊಂದು ಎಲ್ಲರೂ ಕೂತು ನೋಡುವ ಚಿತ್ರವಾಗಲಿದೆ. ಇವತ್ತಿನ ಚಿತ್ರಗಳ ಹೆಸರು ಕೇಳಿದ ತಕ್ಷಣ ಅರ್ಧ ಜನ ಬ್ಯಾಕೌಟ್‌ ಆಗುತ್ತಾರೆ. ನಾಗಾಭರಣನ ಸಿನಿಮಾಗಳು ಹಾಗಾಗಬಾರದು. ಇಡೀ ಮನೆಯವರು ನೋಡಬೇಕು. ಮಗುವಿನಿಂದ ಹಿರಿಯರವರೆಗೂ ಚಿತ್ರ ನೋಡಬೇಕೆನ್ನುವುದು ಆಶಯ. ಒಟ್ಟಿನಲ್ಲಿ ಈ ಚಿತ್ರದ ಮೂಲಕ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೀನಿ.

ಪ್ರಮುಖವಾಗಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಸಾವಿಗೆ ಸಾಲವೊಂದೇ ಕಾರಣಾನಾ ಎಂಬ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚೆ ಮಾಡಿದ್ದೀನಿ. ಇದು ಒಬ್ಬರ ಕಥೆಯಲ್ಲ, ಒಂದು ಊರಿನ ಕಥೆ. ಕಾನೂರು ಎಂಬ ಕಾಲ್ಪನಿಕ ಊರಿನ ಕಥೆ. ಇಲ್ಲಿ ಊರಿನ ಹೆಸರು ಮಾತ್ರ ಕಾಲ್ಪನಿಕ. ಆದರೆ, ಇದು ಯಾವುದೇ ಊರಿನಲ್ಲಾದರೂ ನಡೆಯಬಹುದಾದ ಕಥೆ. ಇಡೀ ಕುಟುಂಬ ಕೂತು ನೋಡಬಹುದಾದ ಕಥೆ ಇದಾಗಲಿದೆ.

ಪ್ರಮುಖವಾಗಿ ಗ್ರಾಮಿಣಾಭಿವೃದ್ಧಿಯ ಆಶಯಕ್ಕೆ ಎಲ್ಲೂ ಧಕ್ಕೆಯಾಗದಂತೆ ಇಡೀ ಕಥೆಯನ್ನು ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎನ್ನುತ್ತಾರೆ ಅವರು. ಈ ಚಿತ್ರಕ್ಕೆ ಹರೀಶ್‌ ಹಾಗಲವಾಡಿ ಕಥೆ ಬರೆದರೆ, ನಾಗಾಭರಣ ಮತ್ತು ಪನ್ನಗಾಭರಣ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ಸ್ಕಂದ ಅಶೋಕ್‌, ಸೋನು, ದೊಡ್ಡಣ್ಣ, ಕರಿಸುಬ್ಬು, ಸುಂದರ್‌ರಾಜ್‌, ಗಿರಿಜಾ ಲೋಕೇಶ್‌, ನೀನಾಸಂ ಅಶ್ವತ್ಥ್ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ.

* ಚೇತನ್ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next