ಅಹಮದಾಬಾದ್: ಕೋವಿಡ್ ನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಜನರೆಲ್ಲರೂ ಮನೆಯೊಳಗೆ ಬಂಧಿಯಾಗಿದ್ದರೆ, ಪೊಲೀಸ್ ಸಿಬಂದಿ ತಮ್ಮ ಸುರಕ್ಷತೆಗಿಂತಲೂ ಕರ್ತವ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಇಂಥ ಕೋವಿಡ್ ವೀರರ ದಿಟ್ಟತನದ ಅನೇಕ ಮನ ಮುಟ್ಟುವಂಥ ಕಥೆಗಳು ಹೊರಬರುತ್ತಲೇ ಇವೆ. ಅಂಥ ಹೀರೋಗಳಲ್ಲಿ ಗುಜರಾತ್‌ನ ದಾಹೋದ್ ಎಂಬಲ್ಲಿರುವ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪಿ.ಕೆ. ಜಾದವ್ ಕೂಡ ಒಬ್ಬರು.
ತಮ್ಮ ಹಿರಿಯ ಸಹೋದರ ಕೊನೆಯುಸಿರೆಳೆದ ಸುದ್ದಿ ತಿಳಿದ ಕೂಡಲೇ ಮನೆಯತ್ತ ಧಾವಿಸಿದ ಅವರು, ಸಹೋದರನ ಅಂತ್ಯಸಂಸ್ಕಾರದ ವಿಧಿಗಳನ್ನು ಪೂರೈಸಿ, ಅಂದೇ ಸಂಜೆ ಕರ್ತವ್ಯಕ್ಕೆ ಮರಳಿದ್ದಾರೆ. ಇವರ ಕರ್ತವ್ಯನಿಷ್ಠೆ ಕಂಡು ಸ್ವತಃ ಗುಜರಾತ್ ಸಿಎಂ ವಿಜಯ್ ರೂಪಾಣಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಬರ್ ಕಾಂತಾ ಠಾಣೆಯಲ್ಲಿ ನಿಯೋಜಿತರಾಗಿರುವ ಕಾನ್ ಸ್ಟೇಬಲ್ ಇಂದ್ರ ವಿಜಯ ಸಿನ್ಹಾ ರೆಹ್ವಾರ್ ಒಂದು ಕೈಗೆ ಏಟಾಗಿ ಪ್ಲಾಸ್ಟರ್ ಹಾಕಿಕೊಂಡಿದ್ದರೂ, ಅದನ್ನು ಲೆಕ್ಕಿಸದೇ ಪಿಸಿಆರ್ ವ್ಯಾನ್‌ನಲ್ಲಿ ಗಸ್ತು ತಿರುಗುವ ಕೆಲಸಕ್ಕೆ ಆಗಮಿಸಿದ್ದಾರೆ.
ಮೋರ್ಬಿ ಜಿಲ್ಲೆಯಲ್ಲಿ ಕಾನ್‌ಸ್ಟೇಬಲ್ ವಿಪುಲ್ ಫಲ್ತರಿಯಾ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿ ವಿಪುಲ್ ಸಂಭ್ರಮದಲ್ಲಿದ್ದರೂ, ಇಂಥ ಸಂಕಷ್ಟದ ಕಾಲದಲ್ಲಿ ರಜೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಭಾವಿಸಿ ರಜೆಯನ್ನೇ ಪಡೆಯದೆ, ಆಸ್ಪತ್ರೆಗೆ ಹೋಗಿ ಕಂದಮ್ಮನನ್ನು ಕಣ್ತುಂಬಿಕೊಂಡು ವಾಪಸ್ ಬಂದಿದ್ದಾರೆ.
ಮಗುವಿನ ಜತೆ ಕರ್ತವ್ಯ
ಕಛ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಅಲ್ಕಾ ದೇಸಾಯಿ ತಮ್ಮ ಎರಡು ವರ್ಷದ ಮಗಳನ್ನು ಜತೆಯಲ್ಲಿಟ್ಟುಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾವ್‌ಪುರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಜ್ಯೋತಿ ಪಾರಿಖ್ ಅವರು ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು, ಹಣೆಗೆ ಹೊಲಿಗೆ ಹಾಕಲಾಗಿದೆ. ಹಾಗಿದ್ದರೂ ಅವರು ಕರ್ತವ್ಯದ ಕರೆಗೆ ಓಗೊಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ.
ಈ ಎಲ್ಲ ಕೋವಿಡ್ ಯೋಧರ ಕಥೆಗಳನ್ನು ಗುಜರಾತ್ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಖಾತೆಯಲ್ಲಿ ಪ್ರಕಟಿಸಿ, ಇವರೆಲ್ಲರಿಗೂ ಧನ್ಯವಾದ ಹೇಳಲಾಗಿದೆ. ಈ ಪೊಲೀಸ್ ಸಿಬಂದಿಯ ಬದ್ಧತೆಗೆ ಜನಸಾಮಾನ್ಯರೂ ತುಂಬು ಹೃದಯದಿಂದ ಕೊಂಡಾಡಿದ್ದಾರೆ.