Advertisement
2019ರ ಅಕ್ಟೋಬರ್ ನಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಆಳಲು ಸಿದ್ದರಾದರು. ಅದುವರೆಗಿನ ಕ್ರಿಕೆಟ್ ಹೊರತಾದ ಜನರಿಂದಲೇ ಆಳಲ್ಪಟ್ಟಿದ್ದ ಬಿಸಿಸಿಐಗೂ ಹೊಸ ಹುರುಪು ಬಂದಿತ್ತು. ಯುವರಾಜನ ಆಗಮನವೇ ಹೊಸ ವೇಗ ತಂದಿತ್ತು. ಖಡಕ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಗಂಗೂಲಿ ತನ್ನ ಆಡಳಿತದಲ್ಲೂ ಹೊಸ ಚಾರ್ಮ್ ತಂದಿದ್ದರು. ಮ್ಯಾಚ್ ಫಿಕ್ಸಿಂಗ್ ನಿಂದ ಕಂಗೆಟ್ಟಿದ್ದ ತಂಡವನ್ನು ವಿಶ್ವಕಪ್ ಫೈನಲ್ ವರೆಗೆ ಮುನ್ನಡೆಸಿದ್ದ ಗಟ್ಟಿಗ ಗಂಗೂಲಿ ಬಿಸಿಸಿಐನಲ್ಲೂ ಹೊಸ ಗಾಳಿ ಬೀಸಲು ಕಾರಣರಾಗಿದ್ದರು. ಅಧ್ಯಕ್ಷರಾಗಿ ಕೆಲವೇ ಸಮಯದಲ್ಲಿ ಗಂಗೂಲಿ ಭಾರತದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಸಿಯೇ ಬಿಟ್ಟರು. ಅಷ್ಟಿತ್ತು ದಾದಾ ವೇಗ.
Related Articles
Advertisement
ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಗಂಗೂಲಿ ಅವರ ಕಾರ್ಯ ವಿಧಾನದ ಬಗ್ಗೆ ಸಾಮೂಹಿಕ ಟೀಕೆ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಗಂಗೂಲಿ ಭಾಗಿಯಾಗದೇ ಇರದ ಆ ಸಭೆಯಲ್ಲಿ ದಾದಾ ವಿರುದ್ಧ ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಮಂಡಳಿಯ ಎಲ್ಲರ ವಿಶ್ವಾಸ ಕಳೆದುಕೊಂಡಿರುವ ಗಂಗೂಲಿ ಅವರನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಳುಹಿಸಲು ಬಿಸಿಸಿಐ ಆಸಕ್ತಿ ತೋರಿಸುತ್ತಿಲ್ಲ.
ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂಬುದು ಈ ಹಿಂದೆಯೇ ತೀರ್ಮಾನವಾಗಿತ್ತು. ಇತ್ತೀಚಿನ ದಿಲ್ಲಿ ಸಭೆಯಲ್ಲಿ ಅವರ ವಿರುದ್ಧದ ಕೆಲಸದ ಶವಪೆಟ್ಟಿಗೆಯ ಮೇಲೆ ಕೊನೆಯ ಮೊಳೆ ಬಡಿಯಲಾಗಿತ್ತು ಅಷ್ಟೇ. ಯಾಕೆಂದರೆ ದಿಲ್ಲಿಯ ‘ಆ’ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಸೇರಿದಂತೆ ಕೆಲವು ‘ಹಳೆಯ ಹುಲಿಗಳು’ ಭಾಗವಹಿಸಿದ್ದರು. ಗಂಗೂಲಿ ಅವಧಿಯಲ್ಲಿ ಬಿಸಿಸಿಐ ಕಚೇರಿಯಿಂದ ದೂರ ಉಳಿದಿದ್ದ ಶ್ರೀನಿವಾಸನ್ ಮತ್ತೆ ಬಂದಿದ್ದಾರೆಂದರೆ ಅದು ಸುಲಭದ ಮಾತಲ್ಲ. ಅಲ್ಲಿ ಅರ್ಥ ಮಾಡಿಕೊಳ್ಳಲು ಹಲವು ವಿಚಾರಗಳಿವೆ.
ಗಂಗೂಲಿ ಬಗ್ಗೆ ಭಿನ್ನಾಭಿಪ್ರಾಯ ಬರಲು ಕಾರಣ ಏನೆಂದು ನೋಡಿದರೆ ಮೇಲ್ನೋಟಕ್ಕೆ ಕೆಲವನ್ನು ಪಟ್ಟಿ ಮಾಡಬಹುದು. ತನ್ನ ಡ್ಯಾಶಿಂಗ್ ವ್ಯಕ್ತಿತ್ವದಿಂದಲೇ ಹೆಸರು ಪಡೆದಿದ್ದ ದಾದಾ ಅದೇ ಕಾರಣಕ್ಕೆ ಹಲವು ವಿರೋಧಗಳನ್ನೂ ಕಟ್ಟಿಕೊಂಡಿದ್ದಾರೆ. ಕೋವಿಡ್ ನಡುವೆಯೂ ಐಪಿಎಲ್ ನಡೆಸಿದಾಗ ಗಂಗೂಲಿ ಟೀಕೆಗೆ ಒಳಗಾಗಿದ್ದರೆ, ಯುಎಇನಲ್ಲಿ ಯಶಸ್ವಿಯಾಗಿ ಕೂಟ ನಡೆದಾಗ ಅದರ ಕ್ರೆಡಿಟ್ ಶಾ ಪಾಲಿಗೆ ಹೋಗಿತ್ತು ಎನ್ನುವುದೂ ಮುಖ್ಯ. ಅಲ್ಲದೆ ಗಂಗೂಲಿ ತನ್ನ ವ್ಯಾಪ್ತಿ ಮೀರಿ ಅಧಿಕಾರ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಆಹ್ವಾನ ಇಲ್ಲದೆಯೂ ಟೀಮ್ ಇಂಡಿಯಾ ಆಯ್ಕೆ ಸಭೆಗಳಿಗೆ ಅನೇಕ ಸಂದರ್ಭಗಳಲ್ಲಿ ಬಲವಂತವಾಗಿ ಹಾಜರಾಗಿದ್ದಾರೆ, ತಂಡದ ಆಯ್ಕೆಯಲ್ಲಿ ಸೌರವ್ ಮಧ್ಯಪ್ರವೇಶ ಮಾಡುತ್ತಿದ್ದರು ಎಂಬ ವರದಿಗಳು ಬರುತ್ತಿದೆ.
ಎಲ್ಲಕ್ಕಿಂತ ಹೆಚ್ಚು ಗಂಗೂಲಿ ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿದ್ದು ವಿರಾಟ್ ಕೊಹ್ಲಿ ವಿಚಾರದಲ್ಲಿ. ವಿರಾಟ್ ಕೊಹ್ಲಿ ಟಿ20 ನಾಯಕತ್ವಕ್ಕೆ ರಾಜೀನಾಮೆ, ಏಕದಿನ ನಾಯಕತ್ವದ ಪದಚ್ಯುತಿ ಮತ್ತು ಟೆಸ್ಟ್ ನಾಯಕತ್ವ ವಿಚಾರದಲ್ಲಿ ಸೌರವ್ ಗಂಗೂಲಿ ಅವರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಸಮಯದಲ್ಲಿ ಗಂಗೂಲಿ ನೀಡಿದ ಹೇಳಿಕೆ, ಬಳಿಕ ವಿರಾಟ್ ತಿರುಗೇಟು ಎಲ್ಲವೂ ಟೀಂ ಇಂಡಿಯಾ ವಿಶೇಷವಾಗಿ ವಿರಾಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಸದ್ಯ ಸೌರವ್ ಗಂಗೂಲಿ ಅವರ ಬಿಸಿಸಿಐ ಆಡಳಿತ ಮುಗಿಯುವ ಹಂತಕ್ಕೆ ಬಂದಿದೆ. ಬಿಸಿಸಿಐನಲ್ಲಿ ಏನೋ ಮಾಡಲು ಬಂದ ಗಂಗೂಲಿ ಇದೀಗ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಆಟಗಾರನಾಗಿದ್ದ ಸಮಯದಲ್ಲೂ ಚಾಪೆಲ್ ವ್ಯೂಹದಲ್ಲಿ ಸಿಲುಕಿ ನಂತರ ಮೇಲೆದ್ದು ಬಂದ ಗಂಗೂಲಿ ಈ ಇನ್ನಿಂಗ್ ನಲ್ಲೂ ಮ್ಯಾಜಿಕ್ ಮಾಡುತ್ತಾರಾ ಎಂಬ ನಿರೀಕ್ಷೆ ದಾದಾ ಅಭಿಮಾನಿಗಳದ್ದು.
ಕೀರ್ತನ್ ಶೆಟ್ಟಿ ಬೋಳ