Advertisement

ನೈಜ ಬದುಕಿಗೆ ಓದಿನ‌ ಜ್ಞಾನದ ಜೊತೆ ತಿಳುವಳಿಕೆಯೂ ಅಗತ್ಯ : ಸುಧಾಮೂರ್ತಿ

12:14 PM Nov 09, 2021 | Team Udayavani |

ವಿಜಯಪುರ: ವ್ಯಕ್ತಿಯ ನೈಜ ಬದುಕಿಗೆ ಶೈಕ್ಷಣಿಕ ಓದಿನ ಜೊತೆಗೆ ಸಮಾಜದಲ್ಲಿ ಜೀವನ ನಿರ್ವಹಣೆಗೆ ತಿಳುವಳಿಕೆಯೂ ಮುಖ್ಯ ಎಂದು ಇನ್ಫೋಸಿಸ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅಭಿಪ್ರಾಯ ಪಟ್ಟರು.

Advertisement

ಮಂಗಳವಾರ ನಗರದ ತೊರವಿ ಬಳಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಅವರು, ಜ್ಞಾನದ ಬೆನ್ನುಬಿದ್ದ ಅಕ್ಕಮಹಾದೇವಿ ಉಡುತಡಿಯಿಂದ ಕಲ್ಯಾಣದ ಮಾರ್ಗವಾಗಿ ಶ್ರೀಶೈಲಕ್ಜೆ ಸಾಗಿದ ಹಾದಿ ಸಣ್ಣದೇನಲ್ಲ ಎಂದರು.

ಸಾಧನೆಗಾಗಿ ತೋರಿದ ತಾಳ್ಮೆ, ಧೈರ್ಯ, ಬದ್ಧತೆ, ಆಳಜ್ಞಾನ, ತತ್ವಜ್ಞಾನದ ಸಾಧನೆಗಾಗಿ ಸಮಯದ ಸದ್ಬಳಕೆ ಮಾಡಿಕೊಂಡ ಅಕ್ಕ ಇಂದಿನ ನಿಮಗೂ, ನಮಗೂ ಆದರ್ಶ ಹಾಗೂ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಸಮಯದ ಸದ್ಬಳಕೆ, ಅಂತಃಕರಣ, ಶ್ರದ್ದೆ, ಬದ್ಧತೆ, ನಂಬಿದ ತತ್ವಾದರ್ಶದ ಆಚರಣೆ, ಅನುಷ್ಠಾನಕ್ಕೆ ಆತ್ಮವಿಶ್ವಾಸದ ಅಗತ್ಯವೂ ಇದೆ ಎಂದು ಕಿವಿ ಮಾತು ಹೇಳಿದರು‌.

ಇನ್ನೊಬ್ಬರ ತಪ್ಪು ಹುಡುಕಿ ಹೇಳುವ ಮೊದಲು ನಾವು ನಮ್ಮಲ್ಲಿನ ಲೋಪ, ದೌರ್ಬಲ್ಯಗಳನ್ನು ತಿದ್ದಿಕೊಳ್ಳಬೇಕು. ನಮ್ನಿಂದ ಲೋಪ, ತಪ್ಪುಗಳಾಗಿದ್ದಲ್ಲಿ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದರು.

Advertisement

ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ: ಬಸವರಾಜ ಬೊಮ್ಮಾಯಿ ಘೋಷಣೆ

ಸಂತೃಪ್ತಿಯ ಸಂತೋಷದ ಬದುಕು ನಮ್ಮೊಳಗೆ ಇದ್ದು, ಅದನ್ನು ನಾವೇ ಸೃಷ್ಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಹಿ ಸತ್ಯವನ್ನು ನೇರವಾಗಿ ಹೇಳದೇ ತಿಳಿಯಾಗಿ ಹೇಳಬೇಕು. ನೊಂದ ಮನಸ್ಸುಗಳಿಗೆ ಹಣದ ಸಹಾಯಕ್ಕಿಂತ ಆತ್ಮವಿಶ್ವಾಸ ತುಂಬುವ ಸಾಂತ್ವನದ ಮಾತುಗಳ ಅಗತ್ಯ ಹೆಚ್ಚಿದೆ. ಹೀಗಾಗಿ ಕಷ್ಟದಲ್ಲಿ ಇರುವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಶೈಕ್ಷಣಿಕ ಪದವಿ ಪಡೆದ ಬಳಿಕ ಹೊಸ ಜೀವನಕ್ಕೆ ಕಾಲಿಡುವ ನಿಮ್ಮಿಂದ ಸಮಾಜ ಹೆಚ್ಚಿನ ನಿರೀಕ್ಷೆ ಮಾಡಲಿದೆ. ನೈಜ ಜೀವನಕ್ಕೆ ಪಠ್ಯವಿಲ್ಲ, ಭೌತಿಕ ಗುರು ಇರುವುದಿಲ್ಲ, ಕೋಣೆಗಳಿಲ್ಲ. ಸಮಾಜವೇ ನಿಮಗೆ ಅನುಭವದ ಆಧಾರದಲ್ಲಿ ಜೀವನ ಪಾಠ ಕಲಿಸಲಿದೆ. ಸಮಾಜದ ಆಗುಹೋಗುಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.

ಹೀಗಾಗಿ ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು.

ಉತ್ತರ ಕರ್ನಾಟಕ ಗಂಡುಮೆಟ್ಟಿದ ನೆಲ

ಶ್ರಮ ಸಂಸ್ಕೃತಿಯನ್ನು ನಂಬಿರುವ ಉತ್ತರ ಕರ್ನಾಟಕ ಪ್ರತಿಭಾವಂತರ ನೆಲೆಯೂ ಹೌದು. ಕೃಷ್ಣೆಯ ಅಖಂಡ ವಿಜಯಪುರ ಜಿಲ್ಲೆ ಗಂಡು ಮೆಟ್ಟಿದ ನೆಲ. ಖಗೋಳಶಾಸ್ತ್ರಜ್ಞ ಭಾಸ್ಕರಾಚಾರ್ಯರು, ಬಸವಾದಿ ಶರಣರು, ಜ್ಞಾನದ ಆಗರವಾಗಿದ್ದ ಅಗ್ರಹಾರಗಳಿದ್ದ ಈ ನೆಲದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆ ಆಗಿರವುದು ಅರ್ಥಪೂರ್ಣ. ಇಂತ ನೆಲದ ಜಮಖಂಡಿಯ ಸಾವಳಗಿ ನನ್ನ ತವರು ಎಂಬುದು ನನಗೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವ ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ, ಕುಲಸಚಿವೆ ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಕೆ.ರಮೇಶ, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next