ತಿರುವನಂತಪುರ: ಕೇರಳದ ಎಲ್ಡಿಎಫ್ ಸರ್ಕಾರ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುದ್ದಿ ಪತ್ರಿಕೆಗಳಿಗೆ ಜಾಹೀರಾತು ನೀಡಿದೆ. ಅದಕ್ಕೆ “ದಿ ರಿಯಲ್ ಕೇರಳ ಸ್ಟೋರಿ’ ಎಂಬ ಶೀರ್ಷಿಕೆ ನೀಡಲಾಗಿದೆ.
ದೇವರೊಲಿದ ರಾಜ್ಯದಿಂದ ಕ್ರಿಶ್ಚಿಯನ್, ಹಿಂದೂ ಸಮುದಾಯದ ಮಹಿಳೆಯರು ಉಗ್ರ ಸಂಘಟನೆ ಐಸಿಸ್ನತ್ತ ಮಾರು ಹೋಗುವ ಕಥಾ ವಸ್ತು ಹೊಂದಿರುವ “ದ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನವಾಗುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಅದರಲ್ಲಿ ಕೇರಳವನ್ನು ಋಣಾತ್ಮಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪವಿದೆ.
“ಭಾರತ ಎಂಬ ಕಿರೀಟದಲ್ಲಿ ಕೇರಳ ರತ್ನವಾಗಿದೆ. ಪ್ರಗತಿಪರ ಆದರ್ಶಗಳ ದಾರಿದೀಪವಾಗಿದೆ. ಎಲ್ಡಿಎಫ್ ಸರ್ಕಾರದ ಆಳ್ವಿಕೆಯಲ್ಲಿ ರಾಜ್ಯವು ಸಾಮಾಜಿಕ ಸಾಮರಸ್ಯ ಮತ್ತು ಪ್ರಗತಿಪರ ಮೌಲ್ಯಗಳಿಂದ ತುಂಬಿದೆ. ಕೇರಳ ಸರ್ಕಾರ ಎರಡನೇ ವಾರ್ಷಿಕೋತ್ಸವದಂದು ನಾವು ನಿಜವಾದ ಕೇರಳವನ್ನು ಸಂಭ್ರಮಿಸುತ್ತೇವೆ. ಇಲ್ಲಿ ಕನಸುಗಳು ಅರಳುತ್ತವೆ ಮತ್ತು ಮಾನವೀಯತೆ ಬೆಳೆಯುತ್ತವೆ,’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.