ಹಾಸನ: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಶುರುವಾಗಿದೆ. ಹಾಸನ ನಗರದ ಸುತ್ತಮುತ್ತ ಖಾಸಗಿ ಬಡಾವಣೆಗಳ ನಿರ್ಮಾನದ ದಂಧೆ ಮಿತಿಮೀರಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ನಾನು ಹಾಸನ ನಗರದ ಸುತ್ತಮುತ್ತ 5 ಕಿ.ಮೀ.ವ್ಯಾಪ್ತಿಯಲ್ಲಿ ತುಂಡು ಭೂಮಿಯನ್ನು ಅನ್ಯಸಂಕ್ರಮಣ (ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ) ಮಾಡಬಾರದು ಎಂದು ಸರ್ಕಾರಿ ಆದೇಶ ಹೊರಡಿಸಿದ್ದೆ. ಆದರೆ ಈಗ ಆದೇಶ ಜಾರಿಯಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಹಾಸನ ನಗರದ ಸುತ್ತಮುತ್ತ ಖಾಸಗಿ ಬಡಾವಣೆಗಳ ನಿರ್ಮಾಣ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದರು.
ನಿವೇಶನ ಖರೀದಿಸುವವರಿಗೆ ವಂಚನೆ: ಖಾಸಗಿಯವರು ಬಡಾವಣೆ ನಿರ್ಮಿಸಿ ನಿವೇಶನಕ್ಕೆ ಹಣ ಪಡೆಯುವ ಖಾಸಗಿಯವರು ಅಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಒಳ ಚರಂಡಿ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸದೇ ನಿವೇಶನ ಖರೀದಿರುವವರಿಗೆ ಟೋಪಿ ಹಾಕುತ್ತಾರೆ. ಕೆಎಸ್‌ಆರ್‌ಟಿಸಿ ನೌಕರರ ವಸತಿ ಬಡಾವಣೆ ನಿರ್ಮಿಸಲು 25 ಎಕರೆಯನ್ನು 304 ಮಂದಿ ರೈತರಿಂದ ಪ್ರತಿ ಎಕರೆಗೆ 4 ಲಕ್ಷ ರೂ. ಪರಿಹಾರ ನೀಡಿ 4 ವರ್ಷಗಳಿಂದಲೂ ವಸತಿ ಬಡಾವಣೆ ನಿರ್ಮಾಣ ಮಾಡಿಲ್ಲ. ಹೀಗೆ ಹಾಸನ ನಗರ ಸುತ್ತಮುತ್ತ ಕೃಷಿ ಭೂಮಿಯಲ್ಲಿ ಖಾಸಗಿ ಬಡಾವನೆಗಳು ನಿರ್ಮಾಣವಾಗುತ್ತಿವೆ ಎಂದರು.
ಹುಡಾ ಬಡಾವಣೆ ಏನಾಯ್ತು?: ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಕೆ.ಎಂ.ರಾಜೇಗೌಡ ಅವರು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಅಧ್ಯಕ್ಷರಾಗಿದ್ದಾಗ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಹಾಸನದ ಹೊರ ವಲಯ ಬುಸ್ತೇನಹಳ್ಳಿ, ಕೆಂಚಟ್ಟಹಳ್ಳಿ ಬಳಿ ರೈತರಿಂದ ಭೂಮಿಯನ್ನು ಪಡೆದು ಒಂದು ಸಾವಿರ ಎಕರೆಯಲ್ಲಿ 15,ಸಾವಿರ ನಿವೇಶನಗಳನ್ನು ನಿರ್ಮಿಸಿ ಶೇ.50 : 50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು.
ಆದರೆ ಈಗ ಆ ಪ್ರಸ್ತಾವನೆ ಏನಾಗಿದೆ ಎಂಬುದರ ಬಗ್ಗೆ ಪ್ರಾಧಿಕಾರ ಮಾಹಿತಿ ನೀಡಬೇಕು. ಪ್ರಾಧಿಕಾರವೇ ಬಡಾವಣೆ ನಿರ್ಮಿಸುವ ಅವಕಾಶವಿದ್ದರೂ ಖಾಸಗಿಯವರಿಗೆ ಅದೇ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ಏಕೆ ಅವಕಾಶ ಕೊಡಲಾಗಿದೆ ಎಂದು ಪ್ರಶ್ನಿಸಿದರು. ವಿಧಾನಸಭೆಯಲ್ಲೂ ಈ ಬಗ್ಗ ಪ್ರಸ್ತಾಪ ಮಾಡುವೆ. ಸರ್ಕಾರಕ್ಕೂ ಪತ್ರ ಬರೆಯುವೆ ಎಂದ ರೇವಣ್ಣ ಅವರು,
ಹಾಸನದ ಸುತ್ತ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಂದು ಬಡಾವಣೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಒಂದು ಬಡಾವಣೆ ನಿರ್ಮಿಸಲು ನಾನು ಸಚಿವನಾಗಿದ್ದಾಗ ಯೋಜಿಸಿದ್ದೆ. ಈ ಎರಡೂ ಬಡಾವಣೆ ನಿರ್ಮಾಣವಾಗಿದ್ದರೆ ಸುಮಾರು 25 ಸಾವಿರ ನಿವೇಶನಗಳ ಸುಸಜ್ಜಿತ ಬಡಾವಣೆಗಳು ನಿರ್ಮಾಣವಾಗುತ್ತಿದ್ದವು. ಸರ್ಕಾರ ಈ ಬಗ್ಗೆ ಗಮನ ಹರಿಸಲಿ. ಸರ್ಕಾರದ ಮೇಲೆ ಈ ನಿಟ್ಟಿನಲ್ಲಿ ನಾನು ಒತ್ತಡ ತರುವೆ ಎಂದು ರೇವಣ್ಣ ಹೇಳಿದರು.