Advertisement

ಅಮೃತ್‌ ಪೌಲ್‌ಅಕ್ರಮ ಆಸ್ತಿಗೂ, ನಮಗೂ ಸಂಬಂಧವಿಲ್ಲ

03:20 PM Aug 07, 2022 | Team Udayavani |

ದೊಡ್ಡಬಳ್ಳಾಪುರ: ಪಿಎಸ್‌ಐ ಹಗರಣದಲ್ಲಿ ಬಂಧಿತರಾಗಿರುವ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿ ಅಮೃತ್‌ ಪೌಲ್‌ ಅವರು ತಾಲೂಕಿನಲ್ಲಿ ಖರೀದಿ ಮಾಡಿರುವ ಜಮೀನಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತಮಗೆ ನೋಟಿಸ್‌ ನೀಡಿದ್ದ ಹಿನ್ನೆಲೆ ನಡೆದ ತನಿಖೆಯಲ್ಲಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಅಮೃತ್‌ ಪೌಲ್‌ ಅವರ ಅಕ್ರಮ ಆಸ್ತಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ವಿನಾಕಾರಣ ನನ್ನ ಹೆಸರನ್ನು ಸಿಲುಕಿಸಲಾಗುತ್ತಿದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ಹುಸ್ಕೂರು ಆನಂದ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ದೊಡ್ಡ ಹಗರಣದಲ್ಲಿ ಪಿಎಸ್‌ಐ ಹಗರಣ ಒಂದಾಗಿದ್ದು, ಹಗರಣ ಯಾರೇ ಮಾಡಿದ್ದರೂ ಸಹ ಅದು ತಪ್ಪು. ಹಗರಣದಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ. ಪೊಲೀಸ್‌ ಅಧಿಕಾರಿ ಅಮೃತ್‌ ಪೌಲ್‌ ನನ್ನ ಸ್ನೇಹಿತರಾಗಿದ್ದು, ಅವರಿಗೂ ನಮಗೂ ಒಡನಾಟವಿತ್ತು. ಅವರ ಫೋನ್‌ ಕಾಲ್‌ ಆಧಾರದ ಮೇಲೆ ತನಿಖೆಗೆ ಬರುವಂತೆ ನನಗೆ ನೋಟಿಸ್‌ ನೀಡಲಾಗಿತ್ತು ಎಂದರು.

ತನಿಖೆಗೆ ಸಹಕಾರ ನೀಡಲಿದ್ದೇನೆ: 2 ದಿನಗಳು ಹೋಗಿ ಎಲ್ಲಾ ದಾಖಲೆಗಳನ್ನು ನೀಡಿದಾಗ ತಮ್ಮದೇನೂ ತಪ್ಪಿಲ್ಲ ಎಂದು ಕಳುಹಿಸಿದ್ದಾರೆ. ಸಿಐಡಿಯಿಂದ ಯಾವತ್ತೇ ಕರೆದರೂ ನಾನು ಹೋಗಿ ತನಿಖೆಗೆ ಸಹಕಾರ ನೀಡಲಿದ್ದೇನೆ. ಹುಸ್ಕೂರು ಬಳಿ 60 ಎಕರೆ ಜಮೀನು, ದೇವನಹಳ್ಳಿ ಬಳಿ 20 ಎಕರೆ ಜಮೀನು ಅಕ್ರಮ ಬೇನಾಮಿಯಾಗಿದೆ ಎನ್ನುವ ಆರೋಪವಿದ್ದು, ಇದರಲ್ಲಿ ಯಾವುದೇ ಹುರಳಿಲ್ಲ. 2002ರಲ್ಲಿ ಬ್ಯಾಂಕ್‌ನಲ್ಲಿ ಜಮೀನು ಅಡವಿಟ್ಟು 20 ಕೋಟಿ ರೂ. ಸಾಲ ಪಡೆದಿದ್ದೆ. 2016ರಲ್ಲಿ ನನಗೆ ಅಮೃತ್‌ಪೌಲ್‌ ಅವರ ಪರಿಚಯವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಮೀನು ಖರೀದಿಸಲು ಬಂದ ಅವರಿಗೆ ಪಿಂಡಕೂರು ತಿಮ್ಮನಹಳ್ಳಿ ಬಳಿ 3.14 ಎಕರೆ ಜಮೀನು ಕೊಡಿಸಿದ್ದೇನೆ. 1980ರಲ್ಲಿಯೇ ನಾನು ಜಮೀನು ಖರೀದಿ ಮಾಡಿದ್ದೇನೆ ಎಂದರೆ ಅದು ಬೇನಾಮಿ ಹೇಗೆ ಆಗುತ್ತದೆ ಎಂದರು.

ಆರೋಪ ನಿರಾಧಾರ: ನನಗೆ ಬೇನಾಮಿ ಆಸ್ತಿ ಮಾಡುವ ಅಗತ್ಯವಿಲ್ಲ. 100 ಎಕರೆ ಜಮೀನುದಾರ ಆಗಿರುವ ನಾನು ಕಾಲಕಾಲಕ್ಕೆ ವರಮಾನ ತೆರಿಗೆ ಸಹ ಪಾವತಿಸುತ್ತಿದ್ದು, ಎಲ್ಲಾ ಲೆಕ್ಕಪತ್ರಗಳು, ದಾಖಲೆಗಳು ಪಾರದರ್ಶಕವಾಗಿವೆ. ನನ್ನ ಮಗಳ ಮೇಲೆ ಬಂದಿರುವ ಆರೋಪ ಸಹ ನಿರಾಧಾರವಾಗಿದ್ದು, ಅವರ ಹೆಸರಿನಲ್ಲಿರುವ ದಾಖಲೆಗಳು ಸಹ ಪಾರದರ್ಶಕವಾಗಿವೆ ಎಂದರು.

ವಿನಾಕಾರಣ ದೂರು: ಅಮೃತ್‌ ಪೌಲ್‌ ಅಪರಾಧಿ ಸ್ಥಾನದಲ್ಲಿದ್ದಾರೆ. ನಾನು ಅವರ ಜೊತೆ ಸಂಪರ್ಕದಲ್ಲಿದ್ದೆ ಎನ್ನುವ ಕಾರಣಕ್ಕೆ ನನಗೆ ಆಗದೇ ಇರುವವರು ವಿನಾಕಾರಣ ದೂರು ನೀಡಿ ನನ್ನನ್ನು ಸಿಲುಕಿಸಿದ್ದಾರೆ. ಹಗರಣದಲ್ಲಿ ಸಿಲುಕಿರುವ ಅಮೃತ್‌ ಪೌಲ್‌ ಅವರು ಅಕ್ರಮ ಆಸ್ತಿಯ ಕುರಿತು ನ್ಯಾಯಾಲಯ ತೀರ್ಮಾನಿಸುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ನನ್ನ ಖಂಡನೆ ಇದ್ದು, ಮತದಾರರು ಹಣ ಆಮಿಷಗಳಿಗೆ ಒಳಗಾಗದಿದ್ದರೆ ಭ್ರಷ್ಟಾಚಾರ ನಿಯಂತ್ರಿಸಬಹುದು ಎಂದರು.

Advertisement

ಮುಖಂಡ ಪುಟ್ಟಬಸವರಾಜ್‌, ಶಿವಣ್ಣ, ಮುನಿಹನುಮಯ್ಯ, ಚೆನ್ನರಾಮಯ್ಯ, ಸಿದ್ದಗಂಗಪ್ಪ, ರಾಮಕೃಷ್ಣಪ್ಪ, ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next